ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಅಶ್ಲೀಲ ವಿಡಿಯೊಗಳ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ ಪಿತೂರಿ: HDK ಹೇಳಿಕೆ

ಸಂಪುಟದಿಂದ ಡಿ.ಕೆ. ಶಿವಕುಮಾರ್‌ ಕೈಬಿಡಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ
Published 7 ಮೇ 2024, 12:55 IST
Last Updated 7 ಮೇ 2024, 12:55 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರ ಮಾನ ಹರಾಜು ಹಾಕಿರುವ ಹಾಸನ ಅಶ್ಲೀಲ ವಿಡಿಯೊಗಳ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪಿತೂರಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಎಂಬುದೇನಾದರೂ ಇದ್ದರೆ ಶಿವಕುಮಾರ್‌ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪ್ರಕರಣ ಮುಚ್ಚಿಹಾಕಲು ಬಿಡುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಪ್ರಕರಣ ಹೇಗೆ ಪ್ರಾರಂಭವಾಗಿದೆ, ಅದು ಎಲ್ಲಿ ಬಂದು ನಿಂತಿದೆ ಎಂಬುದೆಲ್ಲ ಪಾರದರ್ಶಕವಾಗಿ ತನಿಖೆಯಾಗಬೇಕು’ ಎಂದರು.

‘ಪೆನ್‌ ಡ್ರೈವ್‌ನಲ್ಲಿ ಹೆಣ್ಣು ಮಕ್ಕಳ ಫೋಟೊ ಸೃಷ್ಟಿ ಮಾಡಿ, ಬೀದಿಬೀದಿಗಳಲ್ಲ ಹರಾಜು ಹಾಕಿದ್ದೀರಲ್ಲ ನೀವೇನು ಸಂತ್ರಸ್ತರಿಗೆ ಧೈರ್ಯ ತುಂಬುತ್ತೀರಿ? ರಾಜ್ಯದ ಮಾನ ಮರ್ಯಾದೆ ಹರಾಜು ಹಾಕುತ್ತಿರುವುದು ನೀವು’ ಎಂದು ಶಿವಕುಮಾರ್‌ ಅವರನ್ನು ಪ್ರಶ್ನಿಸಿದರು.

‘ಬೆಳಗಾವಿ ಸಾಹುಕಾರ್‌ ಅವರನ್ನು ಟ್ರ್ಯಾಪ್‌ ಮಾಡಿದ ಪ್ರಕರಣದಲ್ಲಿ ₹30 ಕೋಟಿಯಿಂದ ₹40 ಕೋಟಿ ವೆಚ್ಚ ಮಾಡಿದ್ದೇನೆ ಎಂದು ಶಿವಕುಮಾರ್ ಹೇಳುವ ಆಡಿಯೊ ಇದೆ. ಡಿ.ಕೆ. ಶಿವಕುಮಾರ್‌ ಅವರ ಇತಿಹಾಸ ತೆಗೆದರೆ ಅವರು ಇಂತಹ ಪ್ರಕರಣದಲ್ಲಿ ‘ಎಕ್ಸ್‌ಪರ್ಟ್‌’ ಎಂಬುದು ಗೊತ್ತಾಗುತ್ತದೆ’ ಎಂದು ದೂರಿದರು.

‘ಮುಖದ ಹಾವಭಾವ ನೋಡಿದರೆ ಗೊತ್ತಾಗುತ್ತದೆ. ಬಾಲಸುಟ್ಟ ಬೆಕ್ಕಿನ ಕಥೆಯಾಗಿದೆ. ನಿಮ್ಮ ಎಸ್‌ಐಟಿಯಿಂದ (ಶಿವಕುಮಾರ್‌ ಇನ್‌ವೆಸ್ಟಿಗೇಟಿವ್‌ ಟೀಮ್‌) ತನಿಖೆ ಮಾಡುತ್ತೀರಾ? ಯಾರ‍್ಯಾರನ್ನು ಮುಳುಗಿಸಲು ಹೊರಟಿದ್ದೀರಿ. ಜೆಡಿಎಸ್‌ ಪಕ್ಷ, ದೇವೇಗೌಡರ ಕುಟುಂಬವನ್ನು ಸರ್ವ ನಾಶ ಮಾಡಲು ವೇದಿಕೆ ಸಿದ್ಧಪಡಿಸಿಕೊಂಡಿದ್ದೇವೆ ಎಂದಿದ್ದಾರೆ ಶಿವಕುಮಾರ್. ಅಷ್ಟು ಸುಲಭವಾಗಿ ಇದೆಲ್ಲ ಸಾಧ್ಯವಿಲ್ಲ. ಎಲ್ಲ ರೆಡಿ ಮಾಡಿಬಿಟ್ಟಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿರುವ ಆಡಿಯೊ ಇದೆ’ ಎಂದರು.

‘ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ರಚಿಸಲಾಗಿರುವ ಎಸ್‌ಐಟಿ ತಂಡ ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಅದು ಸಿದ್ದರಾಮಯ್ಯ, ಶಿವಕುಮಾರ್ ಅವರ ತಂಡ. ಪ್ರಚಾರ ಪಡೆಯಲು ತನಿಖೆಯ ವಿವರಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗುತ್ತಿದೆ’ ಎಂದು ದೂರಿದರು.

‘ಎಸ್‌ಐಟಿ ಎಂದರೆ ವಿಶೇಷ ತನಿಖಾ ತಂಡ, ಪಾರದರ್ಶಕವಾಗಿ ಕೆಲಸ ಮಾಡುತ್ತದೆ ಎಂದುಕೊಂಡಿದೆ. ಆದರೆ, ಒಂದು ತಂಡ– ಸಿದ್ದರಾಮಯ್ಯ ತನಿಖಾ ತಂಡ ಎಂದಿದೆ. ಮತ್ತೊಂದು, ಶಿವಕುಮಾರ್‌ ತನಿಖಾ ತಂಡ ಎಂದಿದೆ. ಇವರಿಬ್ಬರು ತಮ್ಮ ನೇತೃತ್ವದಲ್ಲಿ ಮಾಡಿಕೊಂಡಿರುವ ಈ ತಂಡದಲ್ಲಿ, ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡಿದ್ದಾರೆ’ ಎಂದರು.

‘ಎಸ್ಐಟಿ ಅಧಿಕಾರಿಗಳು ಸಿದ್ದರಾಮಯ್ಯ, ಶಿವಕುಮಾರ್‌ ಅವರ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಅವರನ್ನು ಭೇಟಿ ಮಾಡಿ, ಅವರು ಹೇಳಿದಂತೆ ಕಾರ್ಯ ಮಾಡುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಪಾರದರ್ಶಕವಾದ ತನಿಖೆ ಮಾಡಬೇಕು. ಯಾವುದೇ ಒತ್ತಡ, ಪ್ರಭಾವಕ್ಕೆ ಮಣಿಯಬೇಡಿ. ಯಾರು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂಬುದೂ ಗೊತ್ತು. ಕಾಲಚಕ್ರ ಓಡುತ್ತಾ ಇರುತ್ತದೆ, ಎಚ್ಚರಿಕೆಯಿಂದ ಕೆಲಸ ಮಾಡಿ. ಯಾರೂ ಶಾಶ್ವತ ಅಲ್ಲ’ ಎಂದರು.

‘2,800 ಪ್ರಕರಣ ಎಂದು ಯಾರು ತೀರ್ಮಾನ ತೆಗೆದುಕೊಂಡಿರುವುದು? ಕಾಂಗ್ರೆಸ್‌ ನಾಯಕರಷ್ಟೇ ಹೇಳುತ್ತಿದ್ದಿದ್ದಾರೆ. ಈ ಬಗ್ಗೆ ಎಷ್ಟು ಜನ ದೂರು ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ ನೋಡಲಿ. ಕಾಂಗ್ರೆಸ್‌ ನಾಯಕರು ನಂಬಲರ್ಹವಾದ ಮಾತನ್ನಾದರೂ ಆಡಲಿ’ ಎಂದರು.

‘ಪ್ರಜ್ವಲ್‌ ರೇವಣ್ಣ ನೋಡಲು ಈ ವಾಟ್ಸ್‌ ಆ್ಯಪ್‌ ಸೇರಿಕೊಳ್ಳಿ’ ಎಂಬ ಸಂದೇಶ ಹರಿದಾಡಿತ್ತು. ಹಾಸನದ ಜೆಡಿಎಸ್‌ ಅಭ್ಯರ್ಥಿಯ ಏಜೆಂಟ್‌ ಪೂರ್ಣಚಂದ್ರ ಅವರು ಏಪ್ರಿಲ್‌ 21ರಂದು  ಹಾಸನದ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ, ಪೊಲೀಸ್‌ ಅಧಿಕಾರಿಗೆ ದೂರು ನೀಡಿದ್ದರು.  ನವೀನ್‌ ಗೌಡ, ಕಾರ್ತಿಕ್‌ ಗೌಡ, ಚೇತನ್‌, ಪುಟ್ಟಿ ಆಲಿಯಾಸ್‌ ಪುಟ್ಟರಾಜು ಸೇರಿ ಐದು ಜನರ ಮೇಲೆ ದೂರು ನೀಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣಾಧಿಕಾರಿ ಏಪ್ರಿಲ್‌ 24ರಂದು ಹಿಂಬರಹ ನೀಡಿದ್ದು, ಪ್ರಕರಣ ಮುಕ್ತಾಯಗೊಳಿಸಲಾಗಿದೆ ಎಂದಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಏ.25ರಂದು ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದು, ‘ಪ್ರಭಾವಿ ರಾಜಕಾರಣಿಗಳು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಸಮೂಹ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಈ ದೃಶ್ಯಗಳನ್ನು ಚಿತ್ರೀಕರಿಸಿದ ಹಾಗೂ ಅದನ್ನು ಸಾರ್ವಜನಿಕಗೊಳಿಸಿದ ವ್ಯಕ್ತಿಗಳನ್ನು ಬಂಧಿಸಲು ತನಿಖೆ ನಡೆಸಲು ವಿಶೇಷ ತನಿಖೆ ನಡೆಸಬೇಕು’ ಎಂದು ಮನವಿ ಮಾಡಿಕೊಂಡಿದ್ದರು. ಈ ಮನವಿಯಲ್ಲಿ ಪ್ರಜ್ವಲ್‌ ರೇವಣ್ಣ ಅಥವಾ ರೇವಣ್ಣ ಅವರ ಹೆಸರು ಇರಲಿಲ್ಲ. ಆದರೆ ಮುಖ್ಯಮಂತ್ರಿಯವರು ಎಸ್‌ಐಟಿ ರಚನೆ ಮಾಡುವುದಾಗಿ ಏ.27ರಂದು  ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿ, ಪ್ರಜ್ವಲ್‌ ರೇವಣ್ಣ ಹೆಸರು ಹಾಕಿದ್ದರು. ಏ.28ರಂದು ಎಸ್ಐಟಿ ರಚನೆಯನ್ನೂ ಮಾಡಿದರು.

‘ಗನ್‌ ಪಾಯಿಂಟ್‌ನಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಲಾಗಿದೆ. ಆದರೆ ತನಿಖಾ ತಂಡ ಈ ಮಾಹಿತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಗೋಪ್ಯತೆ ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಲಯಗಳ ಆದೇಶವಿದ್ದರೂ ಮಾಹಿತಿ ಬಹಿರಂಗಮಾಡಲಾಗಿದೆ. ಈ ಸರ್ಕಾರಕ್ಕೆ ಪ್ರಚಾರಕ್ಕಾಗಿ ತನಿಖೆಯನ್ನು ಬಳಸಿಕೊಳ್ಳುತ್ತಿದೆ. ಅವರಿಗೆ ಬೇಕಾದವರನ್ನು ತೇಜೋವಧೆ ಮಾಡಲು ಎಸ್‌ಐಟಿಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ’ ಎಂದು ಕುಮಾರಸ್ವಾಮಿ ದೂರಿದರು.

‘ಏಪ್ರಿಲ್‌ 21ರಂದು ಮೊದಲ ಸೆಟ್‌ನಲ್ಲಿ ಬಿಡುಗಡೆಯಾಗಿರುವ ಅಶ್ಲೀಲ ವಿಡಿಯೊದಲ್ಲಿರುವ ಮಹಿಳೆ, ಏ.22ರಂದು ಬೇಲೂರಿನಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಆರೋಪಿ ಪ್ರಜ್ವಲ್‌ ರೇವಣ್ಣ ಅವರ ಜೊತೆ ಭಾಗವಹಿಸಿದ್ದಾರೆ. ಆ ಹೆಣ್ಣು ಮಗಳ ಮೇಲೆ ಗನ್‌ ತೋರಿಸಿ ಹೆದರಿಸಿ, ಬೆದರಿಸಿ ದೌರ್ಜನ್ಯ ಎಸಗಿದ್ದರೆ ಆಕೆ ಏಕೆ ಪ್ರಚಾರಕ್ಕೆ ಹೋಗುತ್ತಿದ್ದಳು’ ಎಂದು ಪ್ರಶ್ನಿಸಿದರು.

‘ರೇವಣ್ಣ ವಿಷಯದಲ್ಲಿ ಕಿಡ್ನಾಪ್ ಎಂದು ಪ್ರಕರಣ ಸೃಷ್ಟಿ ಮಾಡಿದರು. ಈ ಮಹಿಳೆ ಕಾಳೇನಹಳ್ಳಿ ತೋಟದಮನೆಯಿಂದ ಕರೆತಂದೆವು ಎಂದಿದ್ದಾರೆ. 35 ಗಂಟೆ ಆ ಮಹಿಳೆಯನ್ನು ಕೂರಿಸಿಕೊಂಡಿದ್ದರೂ, ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲ. ರೇವಣ್ಣ ಅವರು ನೀವು ಹೇಳಿದಂತೆ ಹೇಳಿಕೆ ಕೊಡುತ್ತಿಲ್ಲ ಎಂದು ಮಾಹಿತಿ ಸೋರಿಕೆ ಮಾಡಿದ್ದೀರಿ. ನೀವು ಹೇಳಿದಂತೆ ಹೇಳಿಕೆ ಕೊಟ್ಟರೆ ಅದನ್ನು ತನಿಖೆ ಎಂದು ಕರೆಯಲಾಗುತ್ತದೆಯೇ’ ಎಂದರು.

‘ಪೆನ್‌ ಡ್ರೈವ್‌ನ ಸೂತ್ರಧಾರಿ ಕಾರ್ತಿಕ್‌ ಗೌಡ ಯಾರ ಮುಂದೆಯೂ ಬಂದಿಲ್ಲ. ಅವನನ್ನು ಈವರೆಗೂ ಅವನನ್ನು ಅಧಿಕಾರಿಗಳು ಬಂಧಿಸಿಲ್ಲ. ಅವನನ್ನು ಏಕೆ ರಕ್ಷಣೆ ಮಾಡುತ್ತಿದ್ದೀರಿ? 700 ಪೆನ್‌ಡ್ರೈವ್‌ಗಳನ್ನು ಹಂಚಿದ್ದೇನೆ ಎಂದು ನವೀನ್‌ ಗೌಡ ಏ.21ರಂದು ಹೇಳುತ್ತಾನೆ. ಇವನ ಮೇಲೆ ಈವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

‘ಎಲ್ಲ ಹರಾಜು ಹಾಕಿದ ಮೇಲೆ ಎಸ್‌ಐಟಿಯವರು ವಿಡಿಯೊ ಬಿಡುಗಡೆ ಮಾಡಿದರೆ ಶಿಕ್ಷೆ ಎಂದಿದ್ದಾರೆ. 15 ದಿನ ಆದರೂ ಒಬ್ಬರ ಮೇಲೂ ಕ್ರಮ ಕೈಗೊಂಡಿಲ್ಲ, ನವೀನ್‌ ಗೌಡ, ಕಾರ್ತಿಕ್‌ ಗೌಡ ಅವರೆಲ್ಲ ಹಾಸನದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೂ ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಇಲ್ಲಿ ಮಾತ್ರ ಶರವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಪಾರದರ್ಶಕ ತನಿಖೆಯೇ’ ಎಂಬ ಅನುಮಾನ ಮೂಡುತ್ತದೆ.

‘ಗೃಹ ಸಚಿವ ಪರಮೇಶ್ವರ್‌ ಅವರೇ, ಪೆನ್‌ ಡ್ರೈವ್ ಬಿಡುಗಡೆ ಮಾಡಿದ್ದರಲ್ಲ, ಆ ಐದು ಜನರಿಗೆ ಯಾವ ಕಲರ್‌ ಲುಕ್‌ ಔಟ್‌ ನೋಟಿಸ್ ಜಾರಿ ಮಾಡಿದ್ದೀರಿ? ಎಷ್ಟು ಮಹಿಳೆಯರ ಮಾನಹಾನಿ ಮಾಡಿರುವ ಇವರನ್ನು ಮುಟ್ಟಿಯೇ ಇಲ್ಲ, ಏಕೆ’ ಎಂದು ಕೇಳಿದರು.

‘ಪ್ರಜ್ವಲ್‌ ಪ್ರಕರಣದಲ್ಲಿ 16 ವರ್ಷದ ಕೆಳಗಿನ ಅಪ್ರಾಪ್ತ ಸಂತ್ರಸ್ತೆಯರಿದ್ದಾರೆ. ಅವರ ಬಗ್ಗೆ ಮಾಹಿತಿ ಇದ್ದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟಿಕೆಟ್‌ ಕೊಟ್ಟಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿಕೆ ಕೊಟ್ಟಿದ್ದಾರೆ. ಯಾವ ಆಧಾರದಲ್ಲಿ ರಾಹುಲ್‌ ಗಾಂಧಿ ಹೇಳಿಕೆ ಕೊಟ್ಟ. ಅವರನ್ನು ಕರೆಯಿಸಿ ವಿಚಾರಣೆ ಮಾಡಿದ್ದೀರಾ? 16 ವರ್ಷದವರನ್ನು ಹುಡುಕಿ, ಪೋಕ್ಸೊ ಪ್ರಕರಣದ ದಾಖಲಿಸಲು ಮುಂದಾಗಿದ್ದಾರೆ, ಅದೆಲ್ಲ ನನಗೆ ಗೊತ್ತಿದೆ. 400 ಮಹಿಳೆಯರ ಮೇಲೆ ಪ್ರಜ್ವಲ್‌ ಅತ್ಯಾಚಾರ. ಸಂಖ್ಯೆಯನ್ನೇ ಕೊಟ್ಟು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್‌ ಯಾಕಪ್ಪಾ ರಾಹುಲ್‌ ಗಾಂಧಿಯನ್ನು ವಿಚಾರಣೆಗೆ ಕರೆದಿಲ್ಲ. ಅವರಿಂದ ದೂರು ಏಕೆ ಪಡೆದುಕೊಂಡಿಲ್ಲ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ನಿಮ್ಮ ಗ್ಯಾರಂಟಿಗಳು ಫಲ ಕೊಡುವುದಿಲ್ಲ ಎಂದು ನರೇಂದ್ರ ಮೋದಿ, ಅಮಿತ್‌ ಶಾ ಅವರನ್ನು ಪೆನ್‌ ಡ್ರೈವ್‌ ಪ್ರಕರಣದಲ್ಲಿ ಎಳೆ ತಂದಿದ್ದೀರಿ. ಅಂತರರಾಷ್ಟ್ರೀಯ ಮಟ್ಟಕ್ಕೂ ಈ ಪ್ರಕರಣ ತೆಗೆದುಕೊಂಡು ಹೋಗಿದ್ದೀರಿ. 2300 ಪ್ರಕರಣ ಎನ್ನುತ್ತೀರಿ, ಎಲ್ಲಿವೆ? ಮುಖ್ಯಮಂತ್ರಿಯವರು ಹೇಳಬೇಕು’ ಎಂದರು.

‘ಸುರ್ಜೆವಾಲಾ ಅವರು ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದಿದ್ದಾರೆ. ಯಾರ‍್ಯಾರ ಫೋಟೊ ಬಿಡಬೇಕು ಎಂದು ಕುಳಿತುಕೊಂಡು ಟಿಕ್‌ ಮಾಡಿದ್ದು ಯಾರು ಸುರ್ಜೆವಾಲಾ? ನೀವೆಲ್ಲ ಟೀಮ್ ಕುಳಿತು, ಮೊದಲ ಎಪಿಸೋಡ್‌ನಲ್ಲಿ ಯಾವ ಹೆಣ್ಣು ಮಕ್ಕಳ ಚಿತ್ರ ಬಿಡಬೇಕು, ಎರಡರಲ್ಲಿ ಯಾರಿರಬೇಕು ಎಂದು ತೀರ್ಮಾನ ಮಾಡಿದ್ರಲ್ಲ. ನೀವು ಆರ್ಥಿಕ ನೆರವು ಕೊಡುತ್ತೀರಾ? ನಿಮಗೇನು ಜವಾಬ್ದಾರಿ ಇದೆ?’ ಎಂದು ಪ್ರಶ್ನಿಸಿದರು.

‘ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಪರ ವಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪೆನ್‌ಡ್ರೈವ್‌ ವಿಷಯ ನನ್ನ ಮುಂದೆ ಮೊದಲೇ ಬಂದಿದ್ದರೆ ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್‌ ಕೊಡುತ್ತಿರಲಿಲ್ಲ. ಯಾರು ಏನೇ ಹೇಳಿದ್ದರೂ ನಾನು ಟಿಕೆಟ್‌ ಕೊಡುತ್ತಿರಲಿಲ್ಲ. ಅಶ್ಲೀಲ ವಿಡಿಯೊ ಬಿಡುಗಡೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಈ ನೆಲದ ಕಾನೂನಿನಲ್ಲಿ ಅತ್ಯಂತ ಕಠಿಣ ಶಿಕ್ಷೆ ಆಗಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಯಾವ ವ್ಯಕ್ತಿಗೂ ನಾನು ರಕ್ಷಣೆ ಕೊಡುವುದಿಲ್ಲ’ ಎಂದರು.

‘ಪೆನ್‌ಡ್ರೈವ್‌ನಲ್ಲಿರುವುದು ಮಾರ್ಫಿಂಗೋ, ನಕಲಿಯೋ ಗೊತ್ತಿಲ್ಲ. ಆದರೆ ಸತ್ಯಾಂಶ ಹೊರಗೆ ಬರಬೇಕೆಂದು ನಾನು ಬಯಸುತ್ತೇನೆ. ಪೆನ್‌ಡ್ರೈವ್‌ನಲ್ಲಿರುವ ಯಾವ ಅಶ್ಲೀಲ ದೃಶ್ಯಗಳನ್ನೂ ನಾನು ನೋಡಿಲ್ಲ. ಅದರಲ್ಲಿ ಆಸಕ್ತಿಯೂ ಇಲ್ಲ. ಇಂತಹ ಪ್ರಕರಣ ರಾಜ್ಯದಲ್ಲಿ ನಡೆದಿರುವುದು ನಾವೆಲ್ಲರೂ ತಲೆ ತಗ್ಗಿಸಬೇಕಾದ ವಿಷಯ. ಅಪರಾಧ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಪೆನ್‌ಡ್ರೈವ್‌ ಬಿಟ್ಟ ಮೇಲೆ ಶಿವಮೊಗ್ಗ, ರಾಯಚೂರು, ಬಳ್ಳಾರಿಯಲ್ಲಿ ಪ್ರಚಾರ ಮಾಡಿದ್ದೇನೆ. ಜನರು ತಲೆ ಕೆಡಿಸಿಕೊಂಡಿಲ್ಲ. ಮಾಧ್ಯಮದಲ್ಲಿ ಮಾತ್ರ ಸುದ್ದಿ ಇದೆ. ಲೋಕಸಭೆ ಚುನಾವಣೆ ಮೇಲೆ ಯಾವ ಪರಿಣಾಮವೂ ಬೀಳುವುದಿಲ್ಲ. ಹಿಂದೆ ಹಲವರು ಈ ರೀತಿ ಸಿಕ್ಕಿಬಿದ್ದು, ನಂತರ ಚುನಾವಣೆಯಲ್ಲಿ ಗೆದ್ದುಬಂದಿದ್ದಾರೆ’ ಎಂದು ಹೇಳಿದರು.

‘ಪ್ರಜ್ವಲ್‌ ರೇವಣ್ಣ ಎಲ್ಲಿ ಹೋಗಿದ್ದಾರೆ? ಎಲ್ಲಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ನನ್ನೊಂದಿಗೆ ಸಂಪರ್ಕವೂ ಇಲ್ಲ’ ಎಂದರು.

‘ವಿಧಾನಪರಿಷತ್‌ ಚುನಾವಣೆ ಸಂದರ್ಭದಲ್ಲಿ ಅಶ್ಲೀಲ ವಿಡಿಯೊ ಪ್ರಕರಣದಿಂದ ಮುಜುಗರ ಆಗುತ್ತದೆ ಎಂದಾದರೆ ಬಿಜೆಪಿಯವರು ಏನಾದರೂ ಬೇರೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಬಯಸಿದರೆ ನನ್ನ ತಕರಾರೇನಿಲ್ಲ. ಈ ಮೈತ್ರಿ ಆಗಿದ್ದೇ ಕಾಂಗ್ರೆಸ್‌ಗೆ ನಿದ್ದೆಗೆಡಿಸಿದೆ. ಇಷ್ಟೆಲ್ಲ ಕುತಂತ್ರ ಮಾಡುತ್ತಿದೆ. ಅವರ ವೇಗ, ಗ್ಯಾರಂಟಿ ಸ್ಕೀಮ್‌ ಎಲ್ಲ ಮುಗಿದುಹೋಗಿತ್ತು. ಮೈತ್ರಿಯಿಂದ ಅವರಿಗೆ ಪೆಟ್ಟು ಬಿದ್ದಿದೆ. ಚುನಾವಣೆ ಫಲಿತಾಂಶ ಅವರಿಗೆ ಗೊತ್ತಾಗಿದೆ. ಅವರವರ ಭವಿಷ್ಯ ಏನಾಗುತ್ತದೆ ಎಂಬುದು ಅವರಿಗೇ ಗೊತ್ತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT