ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಟಿ ಕಸ್ಟಡಿಗೆ ರೇವಣ್ಣ, ಇನ್ನೂ ಪತ್ತೆಯಾಗದ ಪ್ರಜ್ವಲ್

8ರವರೆಗೆ ವಶಕ್ಕೆ * ಮೂರು ನಿಂಬೆಹಣ್ಣು ಹಿಡಿದು ಹಾಜರು
Published 6 ಮೇ 2024, 0:06 IST
Last Updated 6 ಮೇ 2024, 0:06 IST
ಅಕ್ಷರ ಗಾತ್ರ

ಬೆಂಗಳೂರು: ‘ಅತ್ಯಾಚಾರ ಸಂತ್ರಸ್ತೆ ಅಪಹರಣ’ ಪ್ರಕರಣದಲ್ಲಿ ಬಂಧಿಸಲಾಗಿರುವ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ (64) ಅವರನ್ನು ಹೆಚ್ಚಿನ ವಿಚಾರಣೆಗಾಗಿ ಇದೇ 8ರವರೆಗೆ ಎಸ್‌ಐಟಿ ಅಧಿಕಾರಿಗಳ ಕಸ್ಟಡಿಗೆ ಒಪ್ಪಿಸಲಾಗಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಪದ್ಮನಾಭನಗರದ ಮನೆಯಲ್ಲಿ ಶನಿವಾರ ಸಂಜೆ ಬಂಧಿಸಲಾಗಿದ್ದ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಭಾನುವಾರ ಸಂಜೆ ಹಾಜರುಪಡಿಸಿದರು.

‘ಇದೊಂದು ಗಂಭೀರ ಪ್ರಕರಣ. ಪ್ರಮುಖ ಸಂತ್ರಸ್ತೆಯನ್ನೇ ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಡಲಾಗಿತ್ತು. ಇದೀಗ, ಸಂತ್ರಸ್ತೆಯನ್ನು ರಕ್ಷಿಸಲಾಗಿದೆ. ಜೊತೆಗೆ, ಅಪಹರಣ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೇವಣ್ಣ ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಕಲೆಹಾಕಲು ರೇವಣ್ಣ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕು. ಹೀಗಾಗಿ, ಕಸ್ಟಡಿಗೆ ನೀಡಬೇಕು’ ಎಂದು ಎಸ್‌ಐಟಿ ಪರ ವಕೀಲರು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ ಪರ ವಕೀಲರು, ‘ನಮ್ಮ ಕಕ್ಷಿದಾರರಿಗೆ ಎಸ್‌ಐಟಿ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಯಾವುದೇ ಪುರಾವೆಗಳು ಇಲ್ಲದಿದ್ದರೂ, ಕೃತ್ಯ ಒಪ್ಪಿಕೊಳ್ಳುವಂತೆ ಪೀಡಿಸುತ್ತಿದ್ದಾರೆ. ಜೊತೆಗೆ, ಕಕ್ಷಿದಾರರಿಗೆ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ, ಸೂಕ್ತ ಚಿಕಿತ್ಸೆ ಅಗತ್ಯವಿದೆ. ರೇವಣ್ಣ ಅವರನ್ನು ವಾಪಸು ಎಸ್‌ಐಟಿ ಅಧಿಕಾರಿಗಳ ಕಸ್ಟಡಿಗೆ ನೀಡಬಾರದು’ ಎಂದು ವಿನಂತಿಸಿದರು.

‘ಆರೋಪಿಯನ್ನು ಕಸ್ಟಡಿಗೆ ನೀಡಿದರೆ, ಪ್ರಕರಣದ ನಿಜಾಂಶ ಪತ್ತೆ ಮಾಡಲು ಸಹಾಯವಾಗುತ್ತದೆ’ ಎಂದು ಪುನಃ ವಾದಿಸಿದ ಎಸ್‌ಐಟಿ ಅಧಿಕಾರಿಗಳು, ರೇವಣ್ಣ ಅವರನ್ನು ಏಕೆ ಕಸ್ಟಡಿಗೆ ನೀಡಬೇಕು ಎಂಬುದಕ್ಕೆ 15 ಅಂಶಗಳ ಪಟ್ಟಿಯನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ ಅವರು, ರೇವಣ್ಣ ಅವರನ್ನು ಇದೇ 8ರವರೆಗೆ ಕಸ್ಟಡಿಗೆ ನೀಡಿ ಆದೇಶಿಸಿದರು.

ನಿಂಬೆಹಣ್ಣು ಹಿಡಿದ ರೇವಣ್ಣ:

ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಂದರ್ಭದಲ್ಲಿ ಎಚ್‌.ಡಿ.ರೇವಣ್ಣ ಅವರು ಮೂರು ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡಿದ್ದರು. ಪೊಲೀಸ್ ವಾಹನದಿಂದ ಇಳಿದಿದ್ದ ರೇವಣ್ಣ, ನಿಂಬೆ ಹಣ್ಣುಗಳ ಸಮೇತ ನ್ಯಾಯಾಧೀಶರ ಮನೆಯತ್ತ ಹೆಜ್ಜೆ ಹಾಕಿದರು. ವಿಶೇಷ ಕೊಠಡಿಯಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೂ ರೇವಣ್ಣ ನಿಂಬೆ ಹಣ್ಣು ಬಿಟ್ಟಿರಲಿಲ್ಲ.

ವಿಚಾರಣೆ ವೇಳೆ ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದ್ದ ರೇವಣ್ಣ, ‘ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ರಾಜಕೀಯ ಬೆಳವಣಿಗೆ ಸಹಿಸದವರು ಈ ರೀತಿ ಮಾಡಿದ್ದಾರೆ. ನನಗೆ ನ್ಯಾಯ ಕೊಡಿ’ ಎಂದು ಕೋರಿದ್ದರೆಂದು ಗೊತ್ತಾಗಿದೆ.

ಎಸ್‌ಐಟಿ ಕಚೇರಿಯತ್ತ ರೇವಣ್ಣ:

ನ್ಯಾಯಾಧೀಶರಿಂದ ವಿಚಾರಣೆ ಮುಗಿಯುತ್ತಿದ್ದಂತೆಯೇ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಎಸ್‌ಐಟಿ ಅಧಿಕಾರಿಗಳು, ರೇವಣ್ಣ ಅವರನ್ನು ಪೊಲೀಸ್ ವಾಹನದಲ್ಲಿ ತಮ್ಮ ಕಚೇರಿಗೆ ಕರೆದೊಯ್ದರು. ಸೋಮವಾರ ರಾತ್ರಿಯೂ ರೇವಣ್ಣ ಎಸ್‌ಐಟಿ ಕಚೇರಿಯಲ್ಲಿಯೇ ಇರಲಿದ್ದಾರೆ.

ಪತ್ತೆಯಾಗದ ಪ್ರಜ್ವಲ್:

ವಿಮಾನ ನಿಲ್ದಾಣಗಳಲ್ಲಿ ನಿಗಾ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳ ವಿಶೇಷ ತಂಡಗಳು ಕಾರ್ಯಾಚರಣೆ ಆರಂಭಿಸಿದ್ದು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸಿದ್ದಾರೆ. ಪೆನ್‌ಡ್ರೈವ್ ವಿಡಿಯೊಗಳು ಎಲ್ಲೆಡೆ ಹರಿದಾಡುತ್ತಿದ್ದಂತೆ ತಲೆಮರೆಸಿಕೊಂಡು ಜರ್ಮನಿಗೆ ಹೋಗಿದ್ದ ಪ್ರಜ್ವಲ್ ಸದ್ಯ ದುಬೈನಲ್ಲಿ ಇರುವ ಮಾಹಿತಿ ಲಭ್ಯವಾಗಿದೆ. ತಂದೆ ಎಚ್‌.ಡಿ.ರೇವಣ್ಣ ಬಂಧನವಾಗುತ್ತಿದ್ದಂತೆ ಪ್ರಜ್ವಲ್ ದುಬೈನಿಂದ ಕರ್ನಾಟಕಕ್ಕೆ ಭಾನುವಾರ ವಾಪಸ್‌ ಬರುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಭಾನುವಾರ ಬೆಳಿಗ್ಗೆಯಿಂದಲೇ ಮೊಕ್ಕಾಂ ಹೂಡಿದ್ದರು. ಸ್ಥಳೀಯ ಪೊಲೀಸರು ಸಹಕಾರ ನೀಡಿದ್ದರು. ಆದರೆ ಪ್ರಜ್ವಲ್‌ ವಾಪಸ್ ಬರಲಿಲ್ಲ. ರೈಲಿನಲ್ಲಿ ಪ್ರಯಾಣ: ‘ವಿದೇಶದಲ್ಲಿರುವ ಪ್ರಜ್ವಲ್ ಬಂಧನ ಭೀತಿಯಲ್ಲಿ ಸುತ್ತಾಡುತ್ತಿದ್ದಾರೆ. ವಿಮಾನ ನಿಲ್ದಾಣಗಳ ಬದಲು ರೈಲುಗಳಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ‘ಪ್ರಜ್ವಲ್‌ ಪತ್ತೆಗಾಗಿ ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ದೇಶದಲ್ಲಿರುವ ಕೆಲವರ ಜೊತೆ ಪ್ರಜ್ವಲ್ ಆಗಾಗ ಮಾತನಾಡುತ್ತಿದ್ದು ಅವರ ಮೇಲೂ ನಿಗಾ ವಹಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಪುರಾವೆ ಇಲ್ಲದೇ ಪ್ರಕರಣ; ರಾಜಕೀಯ ಷಡ್ಯಂತ್ರ

‘ಯಾವುದೇ ಪುರಾವೆ ಇಲ್ಲದೇ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದು ರಾಜಕೀಯ ಷಡ್ಯಂತ್ರ’ ಎಂದು ಎಚ್‌.ಡಿ.ರೇವಣ್ಣ ಆರೋಪಿಸಿದರು. ಬೌರಿಂಗ್ ಆಸ್ಪತ್ರೆ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘40 ವರ್ಷಗಳ ರಾಜಕಾರಣದಲ್ಲಿ ನನ್ನ ಮೇಲೆ ಯಾವುದೇ ಆಪಾದನೆ ಇಲ್ಲ. ದುರುದ್ದೇಶದಿಂದ ಏಪ್ರಿಲ್ 28ರಂದು ನನ್ನ ಮೇಲೆ ಪ್ರಕರಣ ದಾಖಲಿಸಿದರು. ಯಾವುದೇ ಪುರಾವೆ ಸಿಗದಿದ್ದರಿಂದ ಮೇ 2ರಂದು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ’ ಎಂದರು.

ಸಂತ್ರಸ್ತೆಯರ ನೆರವಿಗೆ ಸಹಾಯವಾಣಿ

‘ಪ್ರಜ್ವಲ್ ಅವರಿಂದ ನಡೆದಿದೆ’ ಎನ್ನಲಾದ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರ ನೆರವಿಗಾಗಿ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ‘ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ತನಿಖೆಗಾಗಿ ಎಸ್‌ಐಟಿ ತಂಡ ರಚಿಸಲಾಗಿದೆ. ಸಂತಸ್ತೆಯರು ಹಾಗೂ ಅವರಿಗೆ ಸಂಬಂಧಿಸಿದವರು 6360938947 ಸಂಖ್ಯೆಗೆ ಕರೆ ಮಾಡಬಹುದು’ ಎಂದು ತಿಳಿಸಿದ್ದಾರೆ. ‘ಸಂತ್ರಸ್ತೆಯರಿಗೆ ಅಗತ್ಯವಿರುವ ಕಾನೂನು ನೆರವು ರಕ್ಷಣೆ ಹಾಗೂ ಇತರೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ಕೃತ್ಯದ ಬಗ್ಗೆ ದೂರು ನೀಡುವವರ ಹೆಸರು ಗೌಪ್ಯವಾಗಿಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಸಂಸದರ ಸರ್ಕಾರಿ ನಿವಾಸ ಎಸ್‌ಐಟಿ ವಶಕ್ಕೆ

ಹಾಸನ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರ ಮೇಲೆ ಪ್ರಜ್ವಲ್‌ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಇಲ್ಲಿನ ಸಂಸದರ ಸರ್ಕಾರಿ ನಿವಾಸವನ್ನು ಎಸ್ಐಟಿ ತಂಡವು ವಶಕ್ಕೆ ಪಡೆದಿದೆ. ಶನಿವಾರ ಸಂತ್ರಸ್ತೆಯೊಂದಿಗೆ ಸಂಸದರ ನಿವಾಸದಲ್ಲಿ ಸ್ಥಳ ಮಹಜರು ಕೈಗೊಂಡು ಮಧ್ಯರಾತ್ರಿವರೆಗೂ ಪರಿಶೀಲನೆ ಮುಂದುವರಿಸಿದ್ದ ಅಧಿಕಾರಿಗಳು, ಭಾನುವಾರ ಬೆಳಿಗ್ಗೆ ನಿವಾಸಕ್ಕೆ ಬೀಗ ಹಾಕಿ ವಶಕ್ಕೆ ಪಡೆದರು. ಸಾಕ್ಷ್ಯ ನಾಶದ ಸಾಧ್ಯತೆ ಇರುವುದರಿಂದ ಹಾಗೂ ಇನ್ನೂ ಹೆಚ್ಚಿನ ತನಿಖೆಗೆ ಅಗತ್ಯ ಬೀಳಬಹುದು ಎಂಬ ಉದ್ದೇಶದಿಂದ ಮನೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ನಿವಾಸದ ಎದುರು ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಯಾರನ್ನೂ ಒಳಗೆ ಬಿಡದಂತೆ ಸೂಚನೆ ನೀಡಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT