ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮಳೆ: ಜಮೀನು ಜಲಾವೃತ, ಸ್ಮಾರಕಗಳು ಮುಳುಗಡೆ

ಮತ್ತೆ 380 ಮನೆಗಳಿಗೆ ಹಾನಿ l ಬೆಂಗಳೂರಿನಲ್ಲಿ ಗೋಡೆ ಕುಸಿದು ಇಬ್ಬರು ಸಾವು
Last Updated 13 ಜುಲೈ 2022, 19:30 IST
ಅಕ್ಷರ ಗಾತ್ರ

ಮಂಗಳೂರು/ಕಲಬುರಗಿ/ಮೈಸೂರು: ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಬುಧವಾರ ಮಳೆಯ ಬಿರುಸು ತುಸು ತಗ್ಗಿದೆ. ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದರೆ, ಕಾವೇರಿ ನದಿಯಲ್ಲಿ ಇಬ್ಬರು ಯುವಕರು ಕೊಚ್ಚಿ ಹೋಗಿದ್ದಾರೆ. ವಿವಿಧೆಡೆ 380 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 29 ಮನೆಗಳು ಪೂರ್ಣವಾಗಿ ಕುಸಿದಿವೆ.

ಮಂಡ್ಯ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವಕರು ಕಾವೇರಿ ನದಿ ನೀರಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಶೋಧ ಕಾರ್ಯ ನಡೆದಿದೆ. ಬೆಂಗಳೂರಿನ ಯಲಹಂಕದ ನಿವಾಸಿ ಅಶೋಕ್‌ (26) ಕುಟುಂಬ ಸದಸ್ಯರ ಸಮ್ಮುಖದಲ್ಲೇ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋದರು. ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ವಿದ್ಯಾರ್ಥಿ ಸೃಜನ್‌ (20) ಜಲಾಶಯದ ಬಳಿ ನದಿಗೆ ಮಂಗಳವಾರ ಸಂಜೆ ಹಾರಿ
ದ್ದಾರೆ. ಇದು, ಆಕಸ್ಮಿಕವೋ, ಆತ್ಮಹತ್ಯೆ ಯತ್ನವೊ ಎಂಬುದು ಗೊತ್ತಾಗಿಲ್ಲ.

ಬೆಂಗಳೂರಿನ ದೀಪಾಂಜಲಿ ನಗರದಲ್ಲಿ ಶಿಥಿಲಗೊಂಡಿದ್ದ ಕಾಂಪೌಂಡ್ ಕುಸಿದು ವಾಲ್ಮೀಕಿ ನಗರದ 10ನೇ ಕ್ರಾಸ್‌ನ
ನಿವಾಸಿಗಳಾದ ರಾಜಮಣಿ (35), ಬಾಲು(30) ಮೃತಪಟ್ಟಿದ್ಧಾರೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ವ್ಯಾಪ್ತಿಯಲ್ಲಿ ತೋಟ, ಜಮೀನುಗೆ ನೀರು ನುಗ್ಗಿದೆ. ಮೂಡಿಗೆರೆ, ಹೆಸಗಲ್‌, ಕಳಸ, ತನುಡಿ, ಬಕ್ಕಿಯಲ್ಲಿ ತಲಾ ಮನೆ ಕುಸಿದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ತಗ್ಗಿದ್ದರೂ ಕಡಲ್ಕೊರೆತದ ತೀವ್ರತೆ ಕಡಿಮೆ ಆಗಿಲ್ಲ.

ಪುತ್ತೂರು ತಾಲ್ಲೂಕಿನ ಸಂಟ್ಯಾರ್ ಸೇತುವೆ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿ ತಿರುವಿನಲ್ಲಿ ಕಾರಿನ ಮೇಲೆ ಮರ ಉರುಳಿದ್ದು, ಕಾರಿನಲ್ಲಿದ್ದ ಮಗು ಸಹಿತ ಐವರು ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ತಂತಿ ತಗುಲಿ ಹೋರಿ ಮೃತಪಟ್ಟಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಮಳೆ ತಗ್ಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದ್ದು, ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ಕೃಷ್ಣದೇವರಾಯರ ಸಮಾಧಿ,ಹಂಪಿ ಮಾರ್ಗದಲ್ಲಿರುವ 64 ಸಾಲಿನ ಕಂಬಗಳ ದೇಗುಲ, ಗಂಗಾವತಿ–ಕಂಪ್ಲಿ ನಡುವಿನ ಸೇತುವೆ ಮುಳುಗಿದೆ.

ಹಂಪಿಯಲ್ಲಿ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ, ಸ್ನಾನಘಟ್ಟ, ರಾಮ–ಲಕ್ಷ್ಮಣ ದೇವಸ್ಥಾನದ ಅಂಗಳ ಮುಳುಗಿದೆ. ಕಂಪ್ಲಿ ಬಳಿ ಗಂಗಾವತಿ–ಕಂಪ್ಲಿ ಸೇತುವೆಗೆ ಸಮನಾಗಿ ನೀರು ಹರಿಯುತ್ತಿದ್ದು, ಸಂಚಾರ ಬಂದ್‌ ಆಗಿದೆ.

ಶಿವಮೊಗ್ಗದಲ್ಲಿ 291 ಮನೆಗಳು, ಬೀದರ್‌ ಜಿಲ್ಲೆಯಲ್ಲಿ 68 ಮನೆಗಳು, ಹಾಸನ ಜಿಲ್ಲೆಯಲ್ಲಿ ಆರು, ಕೊಡಗು ಜಿಲ್ಲೆಯಲ್ಲಿ 7 ಮನೆಗಳಿಗೆ ಹಾನಿಯಾಗಿದೆ.

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ಭರ್ತಿಗೆ ಎರಡು ಅಡಿಯಷ್ಟೇ ಬಾಕಿ ಇದೆ.ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯ ಹರಿವಿನ ಮಟ್ಟ ಇನ್ನಷ್ಟು ಏರಿದ್ದರೂ ಸದ್ಯ, ಪ್ರವಾಹ ಸ್ಥಿತಿ ತಗ್ಗಿದೆ.

4 ದಿನ ಮಳೆ

ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆಯಾಗ ಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ.

Caption
Caption

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT