ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳ

5 ವರ್ಷದಲ್ಲಿ 50 ಲಕ್ಷ ಜನರಿಗೆ ‘ಆಯುಷ್ಮಾನ್’
Published 12 ಜನವರಿ 2024, 20:46 IST
Last Updated 12 ಜನವರಿ 2024, 20:46 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ಮಂಡಿ ಚಿಪ್ಪು, ಹೃದಯದ ಕವಾಟ ಬದಲಾವಣೆಯಂತಹ ಶಸ್ತ್ರಚಿಕಿತ್ಸೆಗಳು ದುಬಾರಿ ಆಗಿರುವುದರಿಂದ ‘ಆಯುಷ್ಮಾನ್‌ ಭಾರತ–ಆರೋಗ್ಯ ಕರ್ನಾಟಕ’ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗಿದೆ. 

ಕಳೆದ ಐದು ವರ್ಷಗಳಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಯೋಜನೆಯಡಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಈ ಯೋಜನೆಯಡಿ ವಿತರಿಸಲಾಗುವ ಕಾರ್ಡ್‌ಗಳನ್ನು ಕಳೆದ ವರ್ಷಾಂತ್ಯಕ್ಕೆ ಆಯುಷ್ಮಾನ್‌ ಭಾರತ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೋರ್ಟಲ್‌ಗೆ ಸಂಯೋಜಿಸಲಾಗಿದೆ. ಇದರಿಂದಾಗಿ ಈ ಆರೋಗ್ಯ ಕಾರ್ಡ್‌ನ ನೆರವಿನಿಂದ ಯೋಜನೆಯಡಿ ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರ ನೇಮಕ ಸೇರಿ ವಿವಿಧ ಕ್ರಮಗಳು ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಲು ಸಹಕಾರಿಯಾಗಿದೆ. 

‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅನುಸಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಣ ಬಿಡುಗಡೆ ಮಾಡುತ್ತಿದೆ. ಈ ಹಣವನ್ನು ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಪ್ರೋತ್ಸಾಹ ಧನ ಒದಗಿಸಲು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಜನೆಯಡಿ ವಿವಿಧ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ.

ಖಾಸಗಿಯಲ್ಲೂ ಹೆಚ್ಚಳ: ಯೋಜನೆಯಡಿ ಅಪಘಾತದಂತಹ ತುರ್ತು ಸಂದರ್ಭದಲ್ಲಿ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಅವಕಾಶವಿದೆ. ಅದೇ ರೀತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರದಿದ್ದರೆ ಶಿಫಾರಸು ಆಧಾರದಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಬಹುದಾಗಿದೆ. ಇದರಿಂದಾಗಿ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. 2018–19ರಲ್ಲಿ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿ 24,337 ಮಂದಿ ಚಿಕಿತ್ಸೆ ಪಡೆದಿದ್ದರು. ಈ ಸಂಖ್ಯೆ 2022–23ನೇ ಸಾಲಿಗೆ ಮೂರು ಲಕ್ಷ ಸಮೀಪಿಸಿದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಈ ಸಂಖ್ಯೆ 18 ಲಕ್ಷದ ಗಡಿ ದಾಟಿದೆ.

‘ಆಯುಷ್ಮಾನ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಜನರಿಗೆ ಜಾಗೃತಿ ಮೂಡುತ್ತಿದೆ. ಬಿಪಿಎಲ್ ಜತೆಗೆ ಎಪಿಎಲ್‌ ಕುಟುಂಬಗಳಿಗೂ ಈ ಯೋಜನೆ ನೆರವಾಗುತ್ತಿದೆ. ಉಚಿತವಾಗಿ ಕಾರ್ಡ್‌ಗಳನ್ನೂ ಒದಗಿಸಲಾಗುತ್ತಿದ್ದು, ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಸದ್ಯ ಕಾರ್ಡ್ ಹೊಂದಿರದಿದ್ದರೂ ಪಡಿತರ ಚೀಟಿ ಇದ್ದಲ್ಲಿ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಇಲಾಖೆಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. 

ರಾಜ್ಯದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಹಾಗೂ ಚಿಕಿತ್ಸೆ ಒದಗಿಸುವುದು ನಮ್ಮ ಆದ್ಯತೆ. ದುಬಾರಿ ಚಿಕಿತ್ಸೆಗಳನ್ನೂ ಯೋಜನೆಯಡಿ ಉಚಿತವಾಗಿ ಒದಗಿಸುತ್ತಿದ್ದೇವೆ.

–ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

1650 ಚಿಕಿತ್ಸಾ ಪ್ಯಾಕೇಜ್‌

‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ‌ 2018ರಲ್ಲಿ ಆರಂಭವಾಗಿದ್ದು ಯೋಜನೆಯಡಿ‌ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ರಾಜ್ಯದಲ್ಲಿ 62.09 ಲಕ್ಷ ಕುಟುಂಬಗಳು ‘ಆಯುಷ್ಮಾನ್‌ ಭಾರತ್’ ಯೋಜನೆ ಅಡಿ ಬರಲಿವೆ. ಉಳಿದ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಎಪಿಎಲ್‌ ಕುಟುಂಬದ ಸದಸ್ಯರಿಗೆ ಗರಿಷ್ಠ ₹ 1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು ಶೇ 30ರಷ್ಟು ಹಣವನ್ನು ಪಾವತಿಸಲಾಗುತ್ತದೆ. ಈ ಯೋಜನೆಯು 1650 ಚಿಕಿತ್ಸಾ ಪ್ಯಾಕೇಜ್‌ಗಳನ್ನು ಒಳಗೊಂಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT