ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಮರ್ಯಾದೆಗೇಡು ಹತ್ಯೆ: ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ

Published 4 ಮೇ 2024, 0:21 IST
Last Updated 4 ಮೇ 2024, 0:21 IST
ಅಕ್ಷರ ಗಾತ್ರ

ವಿಜಯಪುರ: ಮರ್ಯಾದೆಗೇಡು ಹತ್ಯೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತು ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಆದೇಶ ನೀಡಿದೆ.

ಇಬ್ರಾಹಿಂಸಾಬ್ ಅತ್ತಾರ ಮತ್ತು ಅಕ್ಬರಸಾಬ್ ಅತ್ತಾರಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ರಂಜಾನಬಿ ಅತ್ತಾರ, ದಾವಲಬಿ ಜಮಾದಾರ್, ಅಜ್ಮಾ ದಖನಿ, ಜಿಲಾನಿ‌ ದಖನಿ, ಅಬ್ದುಲ್ ಖಾದರ್ ದಖನಿ, ದಾವಲಭಿ ಧನ್ನೂರಗೆ ಜೀವಾವಧಿ‌ ಶಿಕ್ಷೆ ಮತ್ತು ₹4.19 ಲಕ್ಷ ದಂಡ ವಿಧಿಸಿ ವಿಜಯಪುರ ಜಿಲ್ಲಾ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಾಳಾಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಮತ್ತು ಸಾಯಬಣ್ಣ ಕೊಣ್ಣೂರ ಎಂಬವರು 2017ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಬಾನುಬೇಗಂ ಮನೆಯವರು‌ ತೀವ್ರ ವಿರೋಧ ವ್ಯಕ್ತಪಡಿಸಿದರು. ಮದುವೆ ಬಳಿಕ ಬಾನು ಬೇಗಂ ಹಾಗೂ ಸಾಯಬಣ್ಣ ಪ್ರತ್ಯೇಕವಾಗಿ ವಾಸವಿದ್ದರು. ಈ ವೇಳೆ ಬಾನು ಬೇಗಂ ಗರ್ಭಿಣಿಯಾದ ಕಾರಣ ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದರು. ಇದನ್ನೇ ಕಾಯುತ್ತಿದ್ದ ಆಕೆಯ ಪೋಷಕರು ಬಾನುಬೇಗಂ ಹಾಗೂ ಸಾಯಬಣ್ಣ ಅವರನ್ನ ಕೊಲೆ ಮಾಡಲು ಮುಂದಾಗಿದ್ದರು.

ಪತಿ ಮತ್ತು ಪತ್ನಿ ಮೇಲೆ ಹಲ್ಲೆ ಮಾಡುವ ವೇಳೆ ಹಲ್ಲೆಗೆ ಒಳಗಾಗಿ ಬಾನು ಬೇಗಂ ಮೂರ್ಛೆ ಹೋಗಿದ್ದರು. ಮೂರ್ಛೆ ಹೋದ ಗರ್ಭಿಣಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಕೊಲೆ ಮಾಡಿದ್ದರು. ಈ ವೇಳೆ ಹಲ್ಲೆಕೋರರಿಂದ ಸಾಯಬಣ್ಣನನ್ನು ರಕ್ಷಣೆ ಮಾಡಲಾಗಿತ್ತು.

ಬಾನುಬೇಗಂ ತಂದೆ, ತಾಯಿ ಹಾಗೂ ಅವರ ಸಂಬಂಧಿಕರು ಈ ಕೃತ್ಯ ಎಸಗಿದ್ದರು. ಪ್ರಕರಣ ಕುರಿತು ತನಿಖೆ ನಡೆಸಿ ತಾಳಿಕೋಟೆ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಸುದೀರ್ಘ ವಾದ ಆಲಿಸಿದ ನ್ಯಾಯಾಧೀಶ ಸತೀಶ್ ಎಲ್.ಪಿ. ಈ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಸ್.ಲೋಕೂರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT