ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ ಆಕರ್ಷಣೆಗೆ ಅಮೆರಿಕದಲ್ಲಿ ಎಂ.ಬಿ. ಪಾಟೀಲ ಸಭೆ

Published 26 ಸೆಪ್ಟೆಂಬರ್ 2023, 21:58 IST
Last Updated 26 ಸೆಪ್ಟೆಂಬರ್ 2023, 21:58 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ವಿದೇಶಿ ಹೂಡಿಕೆ ಆಕರ್ಷಿಸಲು ಅಮೆರಿಕ ಪ್ರವಾಸ ಕೈಗೊಂಡಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮೊದಲ ದಿನವಾದ ಸೋಮವಾರ ವಾಷಿಂಗ್ಟನ್‌ ಡಿ.ಸಿಯಲ್ಲಿ ಮೂರು ಸಭೆಗಳನ್ನು ನಡೆಸಿದ್ದಾರೆ.

‘ಆರ್‌.ಟಿ.ಎಕ್ಸ್‌,  ಏರೋಸ್ಪೇಸ್‌ ಕಂಪನಿ ಹಾಗೂ ಇಂಟೆಲ್‌ ಸ್ಯಾಟ್‌ ಕಂಪನಿಗಳ ಅಧಿಕಾರಿಗಳ ಜತೆ ಸಚಿವರು ನೇರವಾಗಿ ಮಾತುಕತೆ ನಡೆಸಿದ್ದಾರೆ. ಅಮೆರಿಕ– ಭಾರತ ಎಸ್‌ಎಂಇ ಕೌನ್ಸಿಲ್‌ನಲ್ಲಿ 30 ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ’ ಎಂದು ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.

‘ರಾಜ್ಯದಲ್ಲಿ ಬೆಂಗಳೂರಿನ ಆಚೆಗೆ ಇರುವ ಹೂಡಿಕೆಯ ಅವಕಾಶಗಳ ಕುರಿತು ಅಮೆರಿಕದ ಹೂಡಿಕೆದಾರರಿಗೆ ಮಾಹಿತಿ ನೀಡಲಾಗಿದೆ. ಆರ್.ಟಿ.ಎಕ್ಸ್‌. ಕಂಪನಿಯು ರಾಜ್ಯದಲ್ಲಿ ಪೂರೈಕೆ ಮತ್ತು ವಿದ್ಯುನ್ಮಾನ ಸಾಧನಗಳ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಗೆ ಆಸಕ್ತಿ ತೋರಿದೆ. ಇಂಟೆಲ್‌ ಸ್ಯಾಟ್‌ ಕಂಪನಿಯು ಭಾರತೀಯ ಬಾಹ್ಯಾಕಾಶ ನವೋದ್ಯಮಗಳ ಜತೆಯಾಗಿ ‘ಸ್ಯಾಟಲೈಟ್‌ ಸೋರ್ಸಿಂಗ್‌’ ಕ್ಷೇತ್ರದಲ್ಲಿ ವಿಸ್ತೃತ ರೂಪದಲ್ಲಿ ಕೆಲಸ ಮಾಡಲು ಬಯಸಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಇರುವ ಹೊಸ ಅವಕಾಶಗಳ ಬಗ್ಗೆಯೂ ಚರ್ಚಿಸಲಾಗಿದೆ’ ಎಂದು ಸಚಿವರ ಕಚೇರಿ ಮಾಹಿತಿ ನೀಡಿದೆ.

ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ವ್ಯವಸ್ಥೆ ಕುರಿತು ಚರ್ಚಿಸಲಾಗಿದೆ. ದೀರ್ಘಾವಧಿ ಯೋಜನೆಯ ಭಾಗವಾಗಿ ರಾಜ್ಯದಲ್ಲಿ ‘ಗ್ಲೋಬಲ್‌ ಕೆಪಬಿಲಿಟಿ ಸೆಂಟರ್‌’ ಸ್ಥಾಪಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದೆ.

ಕೈಲ್ ಬೆಲಾರ್ಡ್ ಕಂಪನಿಯ ಉಪಾಧ್ಯಕ್ಷ ಕ್ಸೇವಿಯರ್ ರಮಿಸ್, ಆರ್.ಟಿ.ಎಕ್ಸ್ ಕಂಪನಿಯ ನಿರ್ದೇಶಕ ಹೆನ್ರಿ ಬಿ. ಮಾರ್ಟಿನ್, ಕ್ಲೌಡಿಯಾ ಡಯಾಮಾಂಟ್ ಕಂಪನಿಯ ಉಪಾಧ್ಯಕ್ಷ ರೋರಿ ವೆಲ್ಶ್, ರಾಜೀವ್ ಗಡ್ರೆ, ಇಂಟೆಲ್ ಸ್ಯಾಟ್ ಕಂಪನಿಯ ಹಿರಿಯ ನಿರ್ದೇಶಕ ಕೆನ್ ಟಕಗಿ, ಯುಎಸ್-ಇಂಡಿಯಾ ಎಸ್ಎಂಇ ಕೌನ್ಸಿಲ್‌ನ ಎಲಿಶಾ ಪುಲಿವರ್ತಿ, ಗ್ಲೋಬಲ್ ಎಲಿಯಂಟ್ ಸಂಸ್ಥಾಪಕ ರಾಜನ್ ನಟರಾಜನ್, ಮಾಂಟ್ಗೊಮೆರಿ ರಾಜ್ಯಾಡಳಿತದ ಉನ್ನತಾಧಿಕಾರಿ ಮಾರ್ಕ್ ಎಲ್ರಿಚ್ ಸಭೆಯಲ್ಲಿದ್ದರು.

ಸಚಿವರ ನೇತೃತ್ವದ ನಿಯೋಗದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌, ಆಯುಕ್ತೆ ಗುಂಜನ್ ಕೃಷ್ಣ ಮತ್ತು ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT