ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರತ್ವ’ ವಿರೋಧಿಸುವ ಮಂದಿ ಸಂವಿಧಾನದ ವಿರೋಧಿಗಳು’

ಸಿಎಎ, ಎನ್‌ಆರ್‌ಸಿ ಕುರಿತು ಬಿಜೆಪಿ ಸಂವಾದ: ಶಾಸಕ ಕೆ.ಜಿ.ಬೋಪಯ್ಯ ಹೇಳಿಕೆ
Last Updated 11 ಜನವರಿ 2020, 13:43 IST
ಅಕ್ಷರ ಗಾತ್ರ

ಮಡಿಕೇರಿ: ‘ಪೌರತ್ವ (ತಿದ್ದುಪಡಿ) ಕಾಯ್ದೆ ದೇಶದ ಯಾವುದೇ ನಾಗರಿಕನ ಮೂಲಭೂತ ಹಕ್ಕಿಗೆ ಚ್ಯುತಿ ತರುವುದಿಲ್ಲ. ’ಪೌರತ್ವ’ ಸಂವಿಧಾನ ಬದ್ಧ ಹಕ್ಕಾಗಿದೆ. ಇದನ್ನು ವಿರೋಧಿಸುತ್ತಿರುವವರುಸಂವಿಧಾನ ವಿರೋಧಿಗಳು’ ಎಂದು ಶಾಸಕ ಕೆ.ಜಿ.ಬೋಪಯ್ಯ ಪ್ರತಿಪಾದಿಸಿದರು.

ನಗರದ ಬಾಲ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ದಾಖಲೆ (ಎನ್‌ಆರ್‌ಸಿ) ಕುರಿತು ನಾಗರಿಕರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ಕಾಯ್ದೆಯನ್ನು ಪ್ರತಿಯೊಬ್ಬ ಭಾರತೀಯನು ಸ್ವಾಗತಿಸಬೇಕು. ಕಾಯ್ದೆಯಿಂದ ದೇಶದ ಯಾವುದೇ ಧರ್ಮದ ಪ್ರಜೆಗೂ ತೊಂದರೆ ಆಗುವುದಿಲ್ಲ. ಅನ್ಯ ದೇಶಗಳಲ್ಲಿ ತೊಂದರೆ ಅನುಭವಿಸುತ್ತಿರುವ ಅಲ್ಪಸಂಖ್ಯಾತರ ಅನುಕೂಲಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿದೆ. ಆದ್ದರಿಂದ, ಪ್ರತಿಯೊಬ್ಬರು ಕಾಯ್ದೆ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಲು ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಯಾವುದೇ ಅಸ್ತ್ರ ಸಿಗದಿರುವುದರಿಂದ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆ ಅನ್ವಯ ಪಾಕಿಸ್ತಾನ, ಅಫ್ಗಾನಿಸ್ತಾನಮತ್ತು ಬಾಂಗ್ಲಾದೇಶದಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಶೋಷಣೆಗೊಳಗಾಗಿ2014ರ ಡಿ.31ರ ಮೊದಲು ಭಾರತಕ್ಕೆ ಪ್ರವೇಶಿಸಿದ 6 ಧರ್ಮದವರಿಗೆ ಪೌರತ್ವ ನೀಡಲಾಗುತ್ತಿದೆ. ಈ ಕಾಯ್ದೆಯಿಂದ ದೇಶದ ಮುಸ್ಲಿಂಜನಾಂಗಕ್ಕೆ ಯಾವುದೇ ನಷ್ಟವಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕಾಯ್ದೆ ತಿದ್ದುಪಡಿಗೆಮೊದಲು 140ಕ್ಕೂ ಹೆಚ್ಚು ಎನ್‌ಜಿಒಗಳು, ಅನೇಕ ಪಕ್ಷಗಳು, ವಿವಿಧ ರಾಜ್ಯ ಮುಖ್ಯಮಂತ್ರಿಯೊಂದಿಗೆ119 ಗಂಟೆಗಳ ಕಾಲ ಸರ್ಕಾರ ಚರ್ಚಿಸಿದೆ. ಅವರ ಸಲಹೆಯೊಂದಿಗೆ ಕಾಯ್ದೆ ಅನುಷ್ಠಾನ ಗೊಂಡಿದೆ ಎಂದು ಹೇಳಿದರು.

ದೇಶಕ್ಕೆ ಬಂದಿರುವ ನುಸುಳುಕೋರರನ್ನುತಡೆಗಟ್ಟಲು ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿದ್ದು, ಪ್ರತಿಯೊಬ್ಬ ನಾಗರಿಕನೂ ಈ ಕಾಯ್ದೆಯನ್ನು ಗೌರವಿಸಬೇಕು ಎಂದು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, ಪೌರತ್ವ ಕುರಿತಂತೆ ಮೊದಲ ಬಾರಿ ನಿರ್ಧಾರವನ್ನು ತೆಗೆದುಕೊಂಡಿಲ್ಲ. 1971ರಲ್ಲಿ ಬಾಂಗ್ಲಾದೇಶದಿಂದ ಬಂದ ಎಲ್ಲರಿಗೂ ಕಾಂಗ್ರೆಸ್ ಪೌರತ್ವ ನೀಡಲು ನಿರ್ಧರಿಸಿದ್ದರು. ಜತೆಗೆ, ಉಗಾಂಡ ದೇಶದವರಿಗೂ ಪೌರತ್ವವನ್ನು ಕಾಂಗ್ರೆಸ್‌ ನೀಡಿತ್ತು ಎಂದು ಹೇಳಿದರು.

ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೆ ಕಾಂಗ್ರೆಸ್ ಅವಕಾಶ ನೀಡದೇ ಇದ್ದಿದ್ದರೆ, ಈ ಮಸೂದೆಯ ಅಗತ್ಯವೇ ಇರಲಿಲ್ಲ. ದೇಶದೊಳಗಿನ ಯಾವುದೇ ಮುಸ್ಲಿಂ ವ್ಯಕ್ತಿ ಪೌರತ್ವಕ್ಕೆ ಅರ್ಜಿ ಸಲ್ಲಿಸಿದರೆ ಮುಕ್ತ ಮನಸ್ಸಿನಿಂದ ಪರಿಗಣಿಸಲಾಗುತ್ತಿದೆ ಎಂದು ಮನು ಮುತ್ತಪ್ಪ ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ.ಭಾರತೀಶ್‌ ಮಾತನಾಡಿ, ‌ಕಾಯ್ದೆಯ ಸತ್ಯಾಂಶ ತಿಳಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ಭೇಟಿ ಕಾರ್ಯಕ್ರಮ ನಡೆಯುತ್ತಿದೆ. ಮುಸ್ಲಿಂ ಬಂಧುಗಳು ಕೂಡ ಈ ಕಾಯ್ದೆ ಒಪ್ಪಿಕೊಂಡಿದ್ದಾರೆ. ಆದರೆ, ಕೆಲವರೂ ಈ ಕಾಯ್ದೆಗೆ ರಾಜಕೀಯ ಬಣ್ಣ ಹಚ್ಚಿ ಸಂಘರ್ಷಕ್ಕೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರ ವೇದಿಕೆ ಪ್ರಮುಖರಾದ ಜಿ.ಟಿ. ರಾಘವೇಂದ್ರ ಮಾತನಾಡಿ, ದೇಶದ ಗಡಿಭಾಗವನ್ನು ರಕ್ಷಿಸುವುದು, ಒಳ ನುಸುಳುಕೋರರನ್ನು ನಿಲ್ಲಿಸುವುದು ಪ್ರತಿ ದೇಶದ ಕರ್ತವ್ಯ. ಆ ದಿಸೆಯಲ್ಲಿ ಪೌರತ್ವ ತಿದ್ದುಪಡಿಯಾಗಿದೆ. ವಿದೇಶಿ ಪ್ರಜೆಗಳಿಗೆ ಪೌರತ್ವ ನೀಡಲು ಯಾವುದೇ ದೇಶ ಉತ್ತಮ ಕಾನೂನು ರೂಪಿಸಿಲ್ಲ. ಹೊರ ದೇಶದಲ್ಲಿರುವ ಶೋಷಣೆಗೊಳಗಾದ ಭಾರತೀಯರಿಗಷ್ಟೆ ಪೌರತ್ವದ ಹಕ್ಕು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಂವಾದದಲ್ಲಿ ಪಕ್ಷದ ಪ್ರಮುಖರಾದ ಎಂ.ಬಿ.ದೇವಯ್ಯ, ನಾಪಂಡ ಕಾಳಪ್ಪ, ಚೀ.ನಾ.ಸೋಮೇಶ್‌ ಭಾಗವಹಿಸಿ ತಮ್ಮ ಅನಿಸಿಕೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT