ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ದೂಷಿಸಿಕೊಂಡ ಬಿಎಸ್‌ವೈ– ಬಿಎಲ್‌ಎಸ್‌ ಬಣಗಳು

Published 8 ಜೂನ್ 2023, 19:35 IST
Last Updated 8 ಜೂನ್ 2023, 19:35 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹೊಣೆ ಹೊರುವ ವಿಚಾರದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಬಣ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬಣದ ಶಾಸಕರು, ಮುಖಂಡರು ಆತ್ಮಾವಲೋಕನ ಸಭೆಯಲ್ಲೇ ಪರಸ್ಪರ ದೂಷಿಸಿಕೊಂಡಿದ್ದಾರೆ.

ಸೋಲಿನ ಕುರಿತು ಪರಾಮರ್ಶೆ ನಡೆಸುವುದಕ್ಕಾಗಿ ಪಕ್ಷದ ರಾಜ್ಯ ಘಟಕದ ಕಚೇರಿಯಲ್ಲಿ ಗುರುವಾರ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಜತೆ ಎರಡು ಪ್ರತ್ಯೇಕ ಸಭೆಗಳನ್ನು ನಡೆಯಿತು. ‘ಎರಡೂ ಸಭೆಗಳಲ್ಲಿ ಯಡಿಯೂರಪ್ಪ ಮತ್ತು ಸಂತೋಷ್‌ ಬಣದವರು ಸೋಲಿನ ಹೊಣೆಯನ್ನು ಪರಸ್ಪರ ವಿರೋಧಿಗಳ ಮೇಲೆ ಹೊರಿಸಲು ಪ್ರಯತ್ನಿಸಿದರು’ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಡಿ.ವಿ. ಸದಾನಂದ ಗೌಡ, ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿದ್ದರು.

ಕೆ.ಎಸ್‌. ಈಶ್ವರಪ್ಪ, ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ಹಿರಿಯ ಶಾಸಕರನ್ನು ಕಡೆಗಣಿಸಿದ್ದು ಸೋಲಿಗೆ ಪ್ರಮುಖ ಕಾರಣ ಎಂಬರ್ಥದಲ್ಲಿ ಯಡಿಯೂರಪ್ಪ ಬಣದ ಕೆಲವರು ಮಾತನಾಡಿದ್ದಾರೆ. ಈ ವಾದವನ್ನು ಒಪ್ಪಿಕೊಳ್ಳದ ಸಂತೋಷ್‌ ಬಣದವರು, ಹೊಸಬರನ್ನು ಕಣಕ್ಕಿಳಿಸದೇ ಇದ್ದರೆ ಬಿಜೆಪಿ ಶಾಸಕರ ಸಂಖ್ಯೆ ಇನ್ನೂ ಕುಸಿಯುತ್ತಿತ್ತು ಎಂಬುದಾಗಿ ಪ್ರತಿವಾದ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವ ನಿರ್ಧಾರದಿಂದ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯ ಸಭೆಗಳಲ್ಲಿ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿದ್ದ ಶೇಕಡ 40ರಷ್ಟು ಲಂಚದ ಆರೋಪಕ್ಕೆ ಸರಿಯಾಗಿ ಉತ್ತರ ನೀಡದೇ ಇರುವುದೂ ಸೋಲಿಗೆ ಕಾರಣ ಎಂದು ಕೆಲವರು ಹೇಳಿದ್ದಾರೆ.

‘ಅನ್ನ ಭಾಗ್ಯ’ ಯೋಜನೆಯಡಿ ಬಿಪಿಎಲ್‌ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಹತ್ತು ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು. ಚುನಾವಣೆ ಸಮೀಪದಲ್ಲಿರುವಾಗ ಅದನ್ನು ತಲಾ ಆರು ಕೆ.ಜಿ.ಗೆ ಇಳಿಸಲಾಯಿತು. ಚುನಾವಣೆಯ ಹಿಂದಿನ ತಿಂಗಳು ನಾಲ್ಕು ಕೆ.ಜಿ. ಅಕ್ಕಿ ಮತ್ತು ಎರಡು ಕೆ.ಜಿ. ರಾಗಿ ವಿತರಿಸಿದರು. ಕಾಂಗ್ರೆಸ್‌ ತಲಾ ಹತ್ತು ಕೆ.ಜಿ. ಅಕ್ಕಿಯ ಭರವಸೆ ನೀಡಿತು. ಈ ವಿಚಾರದಲ್ಲಿ ಸರ್ಕಾರ ಮಾಡಿದ ತಪ್ಪಿನಿಂದ ತಮಗೆ ಸೋಲಾಯಿತು ಎಂಬುದಾಗಿ ಹಲವು ಅಭ್ಯರ್ಥಿಗಳು ದೂರಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆಯೂ ಹಲವರು ಸಭೆಯಲ್ಲಿ ಆಕ್ಷೇಪಿಸಿದ್ದಾರೆ. ಹೊರ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ ಪರಿಣಾಮ ಸ್ಥಳೀಯ ಕಾರ್ಯಕರ್ತರಿಗೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಇಂತಹ ತಪ್ಪುಗಳೇ ಪಕ್ಷದ ಸೋಲಿಗೆ ಕಾರಣ ಎಂಬುದಾಗಿ ಹಲವರು ದೂರಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT