ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲದ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ

ಅಸಲು ಪಾವತಿಸಿದರೆ ಮಾತ್ರ ಸೌಲಭ್ಯ; ಸಹಕಾರಿ ಬ್ಯಾಂಕ್‌ಗಳಿಗೆ ಮಾತ್ರ ಅನ್ವಯ
Published 16 ಡಿಸೆಂಬರ್ 2023, 0:30 IST
Last Updated 16 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ವಿಧಾನಸಭೆ/ವಿಧಾನಪರಿಷತ್ತು (ಸುವರ್ಣಸೌಧ, ಬೆಳಗಾವಿ): ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಸಲನ್ನು ಸಕಾಲದಲ್ಲಿ ಪಾವತಿಸಿದವರಿಗೆ ಮಾತ್ರ ಈ ರಿಯಾಯಿತಿ ದೊರೆಯಲಿದೆ. ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಉಭಯ ಸದನಗಳಲ್ಲಿ ಉತ್ತರ ನೀಡಿದ ಅವರು ಈ ವಿಚಾರವನ್ನು ಶುಕ್ರವಾರ ಪ್ರಕಟಿಸಿದರು. 

‘ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಭರವಸೆಯನ್ನು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರಲಿಲ್ಲ. ಆದರೆ ಬರ ಮತ್ತು ರೈತರ ಸಂಕಷ್ಟದ ಕಾರಣದಿಂದ ಬಡ್ಡಿ ಮನ್ನಾ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದರು.

‘2018ರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ ₹1 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಕೃಷಿ ಸಾಲ ಮನ್ನಾ ಮಾಡಲಿಲ್ಲ. ವಿಧಾನಪರಿಷತ್‌ನಲ್ಲಿ ವಿ.ಎಸ್‌. ಉಗ್ರಪ್ಪ ಅವರು ಈ ವಿಷಯ ಪ್ರಸ್ತಾಪಿಸಿದಾಗ, ‘ನಾವು ನೋಟು ಪ್ರಿಂಟ್‌ ಮಾಡುವ ಯಂತ್ರ ಇಟ್ಟಿಲ್ಲ’ ಎಂದು ಯಡಿಯೂರಪ್ಪ ಉತ್ತರ ಕೊಟ್ಟಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತ್ಯೇಕ ರಾಜ್ಯ ಬೇಡಿಕೆ ಸಲ್ಲದು:

‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ. ಅದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ’ ಎಂದು ಅವರು ಹೇಳಿದರು.

‘ಪ್ರತ್ಯೇಕ ರಾಜ್ಯ ಬೇಡಿಕೆ ಏಕೀಕರಣಕ್ಕೆ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದವರಿಗೆ ನಾವು ಮಾಡುವ ಅಪಮಾನ. ಏಕೀಕರಣಕ್ಕಾಗಿ ರಾಜ್ಯದ ಉದ್ದಗಲ ಹಲವು ಜನ ಹೋರಾಟ ಮಾಡಿದ್ದರು’ ಎಂದು ಅವರು ತಿಳಿಸಿದರು.

ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌, ವೈಜನಾಥ್‌ ಪಾಟೀಲ ಮುಂತಾದವರು ಹೋರಾಡಿದ್ದರು. ಯುಪಿಎ ಅವಧಿಯಲ್ಲಿ ಅದು ಈಡೇರಿತು ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಖರ್ಚಾಗಿ ಅಭಿವೃದ್ಧಿಯಾಗಬೇಕು. ಕಿತ್ತೂರು ಕರ್ನಾಟಕದ 5 ತಾಲ್ಲೂಕುಗಳು ಸೇರಿ ಅತಿ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೂ ಅನುದಾನ ಕೊಡಲಾಗುವುದು. ಕಲ್ಯಾಣ ಕರ್ನಾಟಕಕ್ಕೆ 2013–14 ರಿಂದ ಈವರೆಗೆ ಒಟ್ಟು ₹14,877.36 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ₹10,280 ಕೋಟಿ ಬಿಡುಗಡೆ ಆಗಿದೆ. ₹8,330 ಕೋಟಿ ಖರ್ಚಾಗಿದೆ ಎಂದು ಹೇಳಿದರು.

ಮುಂದಿನ ವರ್ಷದಿಂದ ₹5,000 ಕೋಟಿಗಳನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಲಾಗುವುದು. ಮುಂಬೈ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳಿಗೂ ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಆಕ್ಷೇಪಗಳಿಗೆ ಮುಖ್ಯಮಂತ್ರಿ ಉತ್ತರ:

* ಈಗ ಮಾಡಿರುವ ಎಲ್ಲ ಘೋಷಣೆಗಳಿಗೂ ಪೂರಕ ಅಂದಾಜುಗಳಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು.

* ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ ಅನುದಾನ ಒದಗಿಸಲಾಗುವುದು.

* ಸ್ಥಳೀಯರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಲು ಕಾನೂನು ತಿದ್ದುಪಡಿ ಕುರಿತು ಪರಿಶೀಲಿಸಲಾಗುವುದು.

* ವಿಜಯಪುರ ಜಿಲ್ಲೆಯಲ್ಲಿ ಒಣ ದ್ರಾಕ್ಷಿ ದಾಸ್ತಾನಿಗೆ ಶೈತ್ಯಾಗಾರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು

ಪ್ರಮುಖ ಘೋಷಣೆಗಳು

*ಬೆಳಗಾವಿ ಸಮೀಪ ಸುಮಾರು 2000 ಎಕರೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ಮತ್ತು  500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್‌ ಸ್ಥಾಪನೆ ಮಾಡಲಾಗುವುದು. ಜಿಲ್ಲೆಯಲ್ಲಿ ಏರೋಸ್ಪೇಸ್‌ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ವಿಶೇಷ ಒತ್ತು

*ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪಿಸಲಾಗುತ್ತಿದ್ದು ಈಗಾಗಲೇ 19 ಘಟಕಗಳು ₹1255 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಸುಮಾರು 2450 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಧಾರವಾಡ ಸಮೀಪವೇ 3000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುತ್ತದೆ.

* ರಾಯಚೂರಿನಲ್ಲಿ ಹತ್ತಿ ಉತ್ಪಾದನೆ ಹೆಚ್ಚಿರುವುದರಿಂದ ಈ ಜಿಲ್ಲೆಯಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಿಂದ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು.

*ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್‌ ಅನ್ನು ಅಂದಾಜು 1500 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವುದು.

* ಉತ್ತರ ಕರ್ನಾಟಕದಲ್ಲಿ ಮಹತ್ವದ ಪ್ರವಾಸೋದ್ಯಮ ತಾಣಗಳಿವೆ. ಈ ತಾಣಗಳು ಅಂತರ ರಾಷ್ಟ್ರಿಯವಾಗಿಯೂ ಮನ್ನಣೆ ಪಡೆದಿವೆ. ಈ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಉದ್ಯೋಗಾವಕಾಶ ಸೃಷ್ಟಿಸಲಾಗುವುದು.

* ಧಾರವಾಡದಲ್ಲಿರುವ ವಾಲ್ಮಿಯನ್ನು (ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ) ಉನ್ನತೀಕರಿಸಲಾಗುವುದು. ಇದನ್ನು ಜಲ ನಿರ್ವಹಣೆಯ ಶ್ರೇಷ್ಠತಾ ಕೇಂದ್ರವಾಗಿ ಪರಿವರ್ತಿಸಲಾಗುವುದು. ಇಲ್ಲಿ ಜಲ ಶಿಕ್ಷಣ ನೀಡುವುದರ ಜತೆಗೆ ಉತ್ತರ ಕರ್ನಾಟಕದ ಮಣ್ಣಿನ ಸವುಳು–ಜವುಳು ಸಮಸ್ಯೆಯನ್ನು ನಿರ್ವಹಿಸಲಾಗುವುದು. ರೈತರ ಆದಾಯ ಹೆಚ್ಚಳದ ಕಡೆಗೆ ಒತ್ತು ನೀಡಲಾಗುವುದು.

ಗದ್ದಲದ ಮಧ್ಯೆಯೇ ಕಲಾಪ ಅಂತ್ಯ

ಮುಖ್ಯಮಂತ್ರಿಯವರ ಉತ್ತರದಲ್ಲಿ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಯಾವುದೇ ಅಂಶಗಳಿಲ್ಲ ಎಂದು ದೂರಿದ ಬಿಜೆಪಿ ಸದಸ್ಯರು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು. ಬಿಜೆಪಿ ಸದಸ್ಯರು ಮತ್ತೆ ಸದನಕ್ಕೆ ಬರುತ್ತಿದ್ದಂತೆಯೇ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಈ ಅಧಿವೇಶನದ ವರದಿಯನ್ನು ಓದಲಾರಂಭಿಸಿದರು. ವಸತಿ ಸಚಿವ ಬಿ.ಜೆಡ್. ಜಮೀರ್‌ ಅಹಮದ್ ಖಾನ್‌ ಹೇಳಿಕೆ ಸೇರಿದಂತೆ ತಾವು ಪ್ರಸ್ತಾಪಿಸಿದ್ದ ಕೆಲವು ವಿಷಯಗಳ ಕುರಿತು ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಸ್ಪೀಕರ್‌ ವರದಿ ಓದುವುದನ್ನು ಮುಂದುವರಿಸಿದರು. ಸಭಾಧ್ಯಕ್ಷರ ಪೀಠದ ಎದುರು ಧಾವಿಸಿದ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು. ಗದ್ದಲದ ಮಧ್ಯೆಯೇ ವರದಿ ಓದುವುದನ್ನು ಪೂರ್ಣಗೊಳಿಸಿದ ಸ್ಪೀಕರ್‌ ರಾಷ್ಟ್ರಗೀತೆಯೊಂದಿಗೆ ಸದನದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಪ್ರಕಟಿಸಿದರು.

ಪ್ರತ್ಯೇಕ ರಾಜ್ಯ ಬೇಡಿಕೆ ಸಲ್ಲದು: ‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ. ಅದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ’ ಎಂದು ಅವರು ಹೇಳಿದರು. ತಾರತಮ್ಯ ನಿವಾರಣೆಗೆ ಉನ್ನತಾಧಿಕಾರ ಸಮಿತಿ: ನಂಜುಂಡಪ್ಪ ವರದಿಯ ಅನುಷ್ಠಾನದ ಬಳಿಕವೂ ತಾಲ್ಲೂಕುಗಳು ಹಿಂದುಳಿದಿರುವಿಕೆಗೆ ಕಾರಣ ಹುಡುಕಿ ಅಧ್ಯಯನ ವರದಿ ಪಡೆಯಲು ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT