ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡಾಟಿಕೆ ಉತ್ತೇಜಿಸಬೇಡಿ: ಗಾಯಕ ಟಿ.ಎಂ.ಕೃಷ್ಣ ಮನದಾಳದ ಮಾತು

Last Updated 23 ನವೆಂಬರ್ 2018, 1:06 IST
ಅಕ್ಷರ ಗಾತ್ರ

ಮೈಸೂರು: ‘ಅಧಿಕಾರದ ಉನ್ನತ ಸ್ಥಾನದಲ್ಲಿರುವ ನಾಯಕರು ಮೌನ ಮುರಿದು ಬುದ್ಧಿವಾದ ಹೇಳಿದರೆ ಹಿಂಬಾಲಕರು ಸರಿ ಹೋಗುತ್ತಾರೆ. ಆದರೆ, ಅವರ ಮೌನದಿಂದಾಗಿ ಪುಂಡಾಟಿಕೆಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚುತ್ತಿದೆ. ಇದು ದುರದೃಷ್ಟಕರ. ಇಂಥ ಮೌನವು ಗೂಂಡಾ ಪ್ರವೃತ್ತಿಯನ್ನು ಉತ್ತೇಜಿಸುವ ಅಪಾಯವಿದೆ’

–ಹೀಗೆಂದು ಸಲಹೆ ಜೊತೆಗೆ ಎಚ್ಚರಿಕೆ ಮಾತುಗಳನ್ನಾಡಿದ್ದು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ.ಕೃಷ್ಣ.

‘ಜಗತ್ತಿನಲ್ಲಿ ನನ್ನ ಪಾಲಿಗೆ ಪವಿತ್ರ ವಿಚಾರವೆಂದರೆ ಪ್ರಾಮಾಣಿಕವಾಗಿ ಪ್ರಶ್ನಿಸುವುದು. ಪ್ರಶ್ನೆ, ಸಂವಾದ, ವಿಚಾರ ವಿನಿಮಯಕ್ಕೆ ಅವಕಾಶ, ವೇದಿಕೆ ಇಲ್ಲದಿದ್ದರೆ ಅದು ಸಮಾಜವೇ ಅಲ್ಲ. ಆಡಳಿತ ನಡೆಸುವವರು ಭಿನ್ನದನಿಗಳನ್ನು ಆಲಿಸಬೇಕು, ಗೌರವಿಸಬೇಕು’ ಎಂದು ಸಲಹೆ ನೀಡಿದರು.

ಮೈಸೂರಿನಲ್ಲಿ ಗುರುವಾರ ಆಯೋಜಿಸಿದ್ದ ಸಂಗೀತ ಕಛೇರಿಗೆ ಮುನ್ನ ‘ಪ್ರಜಾವಾಣಿ’ ಜೊತೆ ತಮ್ಮ ವಿಚಾರ ಹಂಚಿಕೊಂಡರು.

l ಬಲಪಂಥೀಯರನ್ನು ಎದುರು ಹಾಕಿಕೊಂಡಿರುವುದೇ ನಿಮ್ಮ ಸಂಗೀತ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತವಾಗಲು ಕಾರಣವೇ?

ಇದೇನು ನನಗೆ ಹೊಸತಲ್ಲ. ಈಗಾಗಲೇ ಮೂರು ಬಾರಿ ನನ್ನ ಕಾರ್ಯಕ್ರಮ ರದ್ದುಗೊಂಡಿದೆ. ವಾಷಿಂಗ್ಟನ್‌ ಡಿ.ಸಿ, ನವದೆಹಲಿ, ಚೆನ್ನೈನಲ್ಲಿ ಗಾಯನ ಕಛೇರಿಗಳು ರದ್ದಾಗಿದ್ದವು. ಮೈಸೂರಿನ ಕಛೇರಿಗೂ ಬೆದರಿಕೆಯ ವದಂತಿಗಳು ಇದ್ದವು. ವಿರೋಧ ವ್ಯಕ್ತವಾಗಿತ್ತು. ಈಗ ನನಗೆ ಒದಗಿಸಿರುವ ಭದ್ರತೆಯೇ ಅದಕ್ಕೆ ಸಾಕ್ಷಿ.

l ಕಲೆ, ಸಂಸ್ಕೃತಿ, ಆಹಾರವನ್ನು ರಾಜಕೀಯಗೊಳಿಸುವ ಷಡ್ಯಂತ್ರ ನಡೆಯುತ್ತಿದೆಯೇ?

ರಾಜಕೀಯ ಹೊರತಾಗಿ ಈ ಪ್ರಪಂಚದಲ್ಲಿ ಯಾವುದೂ ಇಲ್ಲ, ಏನೂ ನಡೆಯುವುದಿಲ್ಲ. ರಾಜಕೀಯೇತರ ವ್ಯಕ್ತಿ ಪ್ರಜೆಯೇ ಅಲ್ಲ. ರಾಜಕೀಯ ಎಂಬುದು ಸುಂದರವಾದ ವಿಷಯ. ಆದರೆ, ಪ್ರಸಕ್ತ ರಾಜಕೀಯ ವ್ಯವಸ್ಥೆಯು ಆಲೋಚನೆಗಳನ್ನು ಹಾಗೂ ಜನರನ್ನು ವಿಭಜಿಸುತ್ತಿದೆ. ಚಿಂತನೆ, ಪರಿಕಲ್ಪನೆ, ಭಾವನೆ, ಚರ್ಚೆ, ವಾದ, ಅಭಿಪ್ರಾಯ, ದೃಷ್ಟಿಕೋನ, ಪ್ರತಿರೋಧಗಳಿಗೆ ಕಡಿವಾಣ ಹಾಕುವ ಷಡ್ಯಂತ್ರಗಳು ನಡೆಯುತ್ತಿವೆ.

l ನಿಮ್ಮ ಪ್ರಕಾರ ಸಂಸ್ಕೃತಿ ಎಂದರೇನು?

ಸಂಸ್ಕೃತಿ ಎಂಬುದು ಸಂಕೀರ್ಣ ಪದ. ಆದರೆ, ಇದನ್ನು ವಿಭಜನೆಗೆ ಬಳಸಿಕೊಳ್ಳಬಾರದು. ಸಂಸ್ಕೃತಿಗಳು ನಾವು ನಕಾಶೆಯ ಮೇಲೆ ಎಳೆದ ಗೆರೆಗಳ ಮಧ್ಯೆ ಬಂದಿಯಾಗಿಲ್ಲ. ಹಾಗೆಯೇ, ನಮ್ಮ ದೇಶ ಒಂದು ಸಂಸ್ಕೃತಿಗೆ ಸೀಮಿತವಾಗಿಲ್ಲ. ಹೀಗಾಗಿಯೇ, ಭಾರತೀಯ ಸಂಸ್ಕೃತಿ ಎಂಬುದು ಇಲ್ಲ. ಇದು ಬಹುಸಂಸ್ಕೃತಿಗಳ ರಾಷ್ಟ್ರ. ಇದೇ ಕಾರಣಕ್ಕೆ ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗಿದೆ. ಇಂಥ ಆಹಾರ ಸೇವಿಸಬೇಕು, ಇಂಥ ಉಡುಗೆ ತೊಡಬೇಕು, ಇಂಥ ಸಿದ್ಧಾಂತ ಪಾಲಿಸಬೇಕು ಎಂಬ ಮಾತುಗಳಿಗೆ ಅರ್ಥವಿಲ್ಲ.

l ನರೇಂದ್ರ ಮೋದಿ, ರಾಹುಲ್‌ ಗಾಂಧಿಗಿಂತ ಉತ್ತಮ ನಾಯಕರು ದೇಶಕ್ಕೆ ಬೇಕು ಎಂದಿದ್ದೀರಿ. ಇದರ ಅರ್ಥ?

ದೇಶದ ಪ್ರತಿ ಪ್ರಜೆಯ ಭಾವನೆಗಳಿಗೆ ಸ್ಪಂದಿಸುವ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕರು ನಮಗೆ ಬೇಕಿದೆ. ಅದು ಯಾವುದೇ ವ್ಯಕ್ತಿಯಾದರೂ ಪರವಾಗಿಲ್ಲ.

l ಸಂಗೀತದ ಹೊರತಾಗಿ ಈಚೆಗೆ ಭಾಷಣ, ಬರವಣಿಗೆಯಲ್ಲೂ ತೊಡಗಿದ್ದೀರಿ. ಇದರ ಹಿಂದೆ ಬೇರೆ ಉದ್ದೇಶವಿದೆಯೇ?

ಇದು ನನ್ನ ವ್ಯಕ್ತಿತ್ವ. ಕೇವಲ ಸಂಗೀತಗಾರ ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ. ಇಂಥದ್ದೇ ಕ್ಷೇತ್ರದ ವ್ಯಕ್ತಿ ಎಂದು ಜನರು ನನ್ನನ್ನು

ಬ್ರ್ಯಾಂಡ್‌ ಮಾಡಬಾರದು. ಅಭಿಪ್ರಾಯ ವ್ಯಕ್ತಪಡಿಸಲು ನಾನು ಕಂಡುಕೊಂಡಿರುವ ಮಾರ್ಗಗಳು ಇವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT