ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಕಿಹೊಳಿ ಸೋದರರ ಸಿಟ್ಟು ತಣಿಸಿದ ಎಚ್‌ಡಿಕೆ

‘ಕೈ’ ನಾಯಕರು ದೆಹಲಿಗೆ; ಬಿಜೆಪಿ ಶಾಸಕರ ವಿಶೇಷ ಸಭೆ
Last Updated 18 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿತಲ್ಲಣ ಸೃಷ್ಟಿಸಿದ್ದ ಜಾರಕಿಹೊಳಿ ಸಹೋದರರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯ ನಂತರ ಬಂಡಾಯದ ಬಾವುಟವನ್ನು ಬದಿಗೆ ಇಟ್ಟಿದ್ದಾರೆ.

ಕಾಂಗ್ರೆಸ್‌ನೊಳಗೆ ಎದ್ದಿರುವ ದಾವಾನಲವನ್ನು ತಣಿಸಲು ಮುಂದಾಗಿರುವ ಹೈಕಮಾಂಡ್‌, ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪ‍ರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಅವರು ಬುಧವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ಬಿ.ಎಸ್‌. ಯಡಿಯೂರಪ್ಪ ಅವರು ಬುಧವಾರ ತಮ್ಮ ಪಕ್ಷದ ಶಾಸಕರ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರಿಗೆ ಬರುವಂತೆ ಪಕ್ಷದ ಶಾಸಕರಿಗೆ ಸೋಮವಾರವೇ ಬುಲಾವ್‌ ನೀಡಿದ್ದರು.

ಫಲ ನೀಡಿದ ಕುಮಾರ ಸಂಧಾನ: ಸಿದ್ದರಾಮಯ್ಯ ಅವರು ಸೋಮವಾರ ನಡೆಸಿದ ಸಂಧಾನಕ್ಕೆ ಜಗ್ಗದ ಜಾರಕಿಹೊಳಿ ಸಹೋದರರನ್ನು ತಾಜ್‌ ವೆಸ್ಟ್ಎಂಡ್‌ ಹೋಟೆಲ್‌ಗೆ ಮಂಗಳವಾರ ಕರೆಸಿಕೊಂಡ ಕುಮಾರಸ್ವಾಮಿ, ಸಿಟ್ಟು ಶಮನಗೊಳಿಸುವ ಯತ್ನ ಮಾಡಿದರು. ‘ಸರ್ಕಾರದ ಕಡೆಯಿಂದ ಏನು ಆಗಬೇಕೋ ಎಲ್ಲವನ್ನೂ ಮಾಡಿಕೊಡುವೆ; ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ತಾಳ್ಮೆ ವಹಿಸಿ’ ಎಂದೂ ಕಿವಿಮಾತು ಹೇಳಿದರು. ಆದರೆ, ‘ನಿಮ್ಮ ಪಕ್ಷದ ಆಂತರಿಕ ವಿಷಯವನ್ನು ನಿಮ್ಮ ಮುಖಂಡರ ಜತೆ ಮಾತನಾಡಿ ಬಗೆಹರಿಸಿಕೊಳ್ಳಿ’ ಎಂದು ತಿಳಿಹೇಳಿದರು.

ಮುಖ್ಯಮಂತ್ರಿ ನೀಡಿದ ಭರವಸೆಗಳಿಗೆ ಮಣಿದಿರುವ ರಮೇಶ ಜಾರಕಿಹೊಳಿ, ‌ಕಾದುನೋಡುವ ತಂತ್ರ ಅನುಸರಿಸಲು ಮುಂದಾಗಿದ್ದಾರೆ. ಇದು ಅತೃಪ್ತ ಕಾಂಗ್ರೆಸ್‌ ಶಾಸಕರಲ್ಲಿ ಆಶಾಭಾವನೆ ಮೂಡಿಸಿದೆ. ಹೀಗಾಗಿ, ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿದ್ದ ಸಂಕಷ್ಟ ತಾತ್ಕಾಲಿಕವಾಗಿ ದೂರವಾಗಿದೆ.

ಮುಖ್ಯಮಂತ್ರಿ ಜತೆ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸತೀಶ ಜಾರಕಿಹೊಳಿ, ‘ಸರ್ಕಾರ ಮಟ್ಟದಲ್ಲಿ ಕೆಲಸಗಳು ಆಗುತ್ತಿರಲಿಲ್ಲ. ಎಲ್ಲ ಕೆಲಸಗಳನ್ನು ಮಾಡಿಕೊಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

‘ಬೆಳಗಾವಿಯಲ್ಲಿ ಪಕ್ಷದ ರಾಜಕಾರಣದ ಬಗ್ಗೆ ಬೇಸರ ಇದೆ. ಬಳ್ಳಾರಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೇಳಿದ್ದೇವೆ. ನಮ್ಮ ಸಮುದಾಯದ (ವಾಲ್ಮೀಕಿ) ಇನ್ನೊಬ್ಬರಿಗೆ ಸಚಿವ ಸ್ಥಾನ ಸಿಗಬೇಕಿದೆ. ಈ ವಿಷಯ ಇತ್ಯರ್ಥ ಆಗಿಲ್ಲ’ ಎಂದು ಸತೀಶ ತಿಳಿಸಿದರು.

‘ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂಬುದು ಸುಳ್ಳು. ನಾವು ಯಾವುದೇ ಒತ್ತಡ ತಂತ್ರ ಅನುಸರಿಸಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ ಹೆಚ್ಚಿನ ಕೆಲಸಗಳು ಆಗಲು ಸಾಧ್ಯ. ಸಿದ್ದರಾಮಯ್ಯ ಅವರಿಂದ ಈಡೇರಿಸಲು ಆಗದೇ ಇದ್ದುದನ್ನು ಮುಖ್ಯಮಂತ್ರಿ ಮಾಡಿದ್ದಾರೆ’ ಎಂದೂ ಅವರು ಹೇಳಿದರು.

‘ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕೇ ಅಥವಾ ಬೇರೆ ಶಾಸಕರಿಗೆ ನೀಡಬೇಕೇ ಎಂಬ ಬಗ್ಗೆ ನಿರ್ಧಾರವಾಗಿಲ್ಲ. ನಮ್ಮಲ್ಲಿ ಅಸಮಾಧಾನ ಇತ್ತು. ಆದರೆ ಭಿನ್ನಾಭಿಪ್ರಾಯ ಇರಲಿಲ್ಲ. ಕೆಲವು ವಿಷಯಗಳು ಹೈಕಮಾಂಡ್‌ ಮಟ್ಟದಲ್ಲಿ ಬುಧವಾರ ಇತ್ಯರ್ಥ ಆಗಲಿವೆ’ ಎಂದರು.

ಬೇಡಿಕೆ ಮಂಡಿಸಿದ ಜಾರಕಿಹೊಳಿ: ತಾವು ಹೇಳಿದ ಅಧಿಕಾರಿಗಳ ವರ್ಗಾವಣೆ ಆಗಬೇಕು, ತಮ್ಮ ಮತ್ತು ಬೆಂಬಲಿಗರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಬೇಡಿಕೆಗಳನ್ನು ಜಾರಕಿಹೊಳಿ ಸಹೋದರರು ಮುಂದೆ ಇಟ್ಟರು.ಇದಕ್ಕೆ ಕುಮಾರಸ್ವಾಮಿ ಸಮ್ಮತಿಸಿದರು.

ನಾಯಕ ಸಮುದಾಯಕ್ಕೆ ಸೇರಿದವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ, ಶಿವಕುಮಾರ್‌ ಹಸ್ತಕ್ಷೇಪಕ್ಕೆ ಕಡಿವಾಣ ಹಾಗೂ ಲಕ್ಷ್ಮಿ ಹೆಬ್ಬಾಳಕರ ಅವರ ದಬ್ಬಾಳಿಕೆಗೆ ನಿಯಂತ್ರಣ ಹಾಕಬೇಕು ಎಂಬ ಬೇಡಿಕೆಯನ್ನು ಜಾರಕಿಹೊಳಿ ಸಹೋದರರು ಮುಂದಿಟ್ಟಿದ್ದಾರೆ. ಇದನ್ನು ಪಕ್ಷ ಈಡೇರಿಸದೇ ಇದ್ದರೆ ಮುಂದಿನ ದಾರಿ ನೋಡಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ. ಇದು ಸರ್ಕಾರದ ಮೇಲಿನ ತೂಗುಗತ್ತಿಯನ್ನು ಹಾಗೆಯೇ ಉಳಿಸಿದೆ.

‘ಚಿಲ್ಲರೆ ರಾಜಕಾರಣ ಮಾಡಲ್ಲ’

‘ಡಿ.ಕೆ ಸಾಹೇಬ್ರು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ. ಅವರು ತಮ್ಮದೇ ಶಕ್ತಿ ಮತ್ತು ಶ್ರಮದಿಂದ ಬೆಳೆದು ಬಂದ ನಾಯಕ. ತಮ್ಮ ಲೆವೆಲ್‌ಗೆ ತಕ್ಕಂತೆ ರಾಜಕಾರಣ ಮಾಡುತ್ತಾರೆ’ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

‘ಮಂತ್ರಿಗಿರಿ ಸಿಗಲು ಹಣೆಯಲ್ಲಿ ಬರೆದಿರಬೇಕು. ಮಂತ್ರಿ ಸ್ಥಾನಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುವವಳು ನಾನಲ್ಲ. ಪಕ್ಷ ನನಗೆ ಉತ್ತಮ ಸ್ಥಾನ ಮತ್ತು ಅವಕಾಶಗಳನ್ನು ನೀಡಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರು ಅಲ್ಲ’ ಎಂದು ಪರೋಕ್ಷವಾಗಿ ಜಾರಕಿಹೊಳಿ ಸಹೋದರರನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರು ಪಕ್ಷ ತೊರೆಯುವುದಿಲ್ಲ: ಸಿದ್ದರಾಮಯ್ಯ

‘ನಮ್ಮ ಶಾಸಕರು ಪಕ್ಷವನ್ನು ತೊರೆಯುವುದಿಲ್ಲ. ಅಧಿಕಾರ ದಾಹದಿಂದ ಕುದಿಯುತ್ತಿರುವ ಬಿಜೆಪಿ, ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ರಯತ್ನಿಸುತ್ತಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಇಷ್ಟರಲ್ಲೇ ಸಚಿವ ಸಂಪುಟದ ವಿಸ್ತರಣೆ ಆಗಬೇಕಿತ್ತು. ವಿಧಾನಪರಿಷತ್‌ ಚುನಾವಣೆ ಬಂದಿರುವುದರಿಂದ ವಿಸ್ತರಣೆ ಪ್ರಕ್ರಿಯೆ ಮುಂದೂಡಲಾಗಿದೆ’ ಎಂದೂ ಅವರು ಹೇಳಿದರು.

‘ಪಕ್ಷದಲ್ಲಿ ಭಿನ್ನಮತವಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ಅಷ್ಟೇ ಅಲ್ಲ, ಯಾರಿಗೂ ಅಸಮಾಧಾನವಿಲ್ಲ. ಸಚಿವ ಸ್ಥಾನ, ನಿಗಮ– ಮಂಡಳ ಅಧ್ಯಕ್ಷ ಸ್ಥಾನಗಳ ಆಕಾಂಕ್ಷಿಗಳಿರುವುದು ನಿಜ. ಈ ಕಾರಣಕ್ಕೆ ಶಾಸಕರು ಪಕ್ಷ ಬಿಡುತ್ತಾರೆ ಎಂಬುದರಲ್ಲಿ ಹುರುಳಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.


ದಿನದ ರಾಜಕೀಯ ಬೆಳವಣಿಗೆ

* ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸತೀಶ ಜಾರಕಿಹೊಳಿ, ಬಿ.ನಾಗೇಂದ್ರ ಮಾತುಕತೆ

* ಸಮಸ್ಯೆ ಬಗೆಹರಿದಿದೆ ಎಂದು ಹೇಳಿಕೆ ನೀಡಿದ ಸತೀಶ ಜಾರಕಿಹೊಳಿ

*ಸಿದ್ದರಾಮಯ್ಯ ಮನೆಗೆ ತೆರಳಿದ ಸತೀಶ, ರಮೇಶ ಜಾರಕಿಹೊಳಿ ಮತ್ತು ನಾಗೇಂದ್ರ

*ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿದ್ದರಾಮಯ್ಯ

*ಸಂಜೆ ಸಿದ್ದರಾಮಯ್ಯ,ದಿನೇಶ್‌ ಗುಂಡೂರಾವ್‌, ಪರಮೇಶ್ವರ ದೆಹಲಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT