ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಿ ಹುಲಿ ಯೋಜನೆ: ಒತ್ತುವರಿ ತಡೆಯದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

Published : 29 ಆಗಸ್ಟ್ 2024, 16:27 IST
Last Updated : 29 ಆಗಸ್ಟ್ 2024, 16:27 IST
ಫಾಲೋ ಮಾಡಿ
Comments

ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಯೋಜನೆ ಪ್ರದೇಶದಲ್ಲಿ ಹೊಸ ಒತ್ತುವರಿಗಳನ್ನು ತಡೆಯದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಈ ಕುರಿತು ಕರ್ನಾಟಕ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರ ಅರಣ್ಯ ಸಚಿವಾಲಯದ ಉಪ ಅರಣ್ಯ ಮಹಾ ನಿರೀಕ್ಷಕ ಮಹೇಶ್ ಕುಮಾರ್ ಶಂಭು ಪತ್ರ ಬರೆದಿದ್ದಾರೆ.

ಕಾಳಿ ಡಿಸಿಎಫ್ ಆಗಿದ್ದ ವೇಳೆ ಮರಿಯಾ ಕ್ರಿಸ್ತು ರಾಜ ಅವರು ಹೊಸ ಅರಣ್ಯ ಒತ್ತುವರಿಗಳನ್ನು ತಡೆಯಲು ವಿಫಲರಾಗಿದ್ದು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಸಾಮಾಜಿಕ ಕಾರ್ಯಕರ್ತ ಅಕ್ಷೀವ್ ಎಂಬುವರು ದೂರು ಸಲ್ಲಿಸಿದ್ದರು.

ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, 2017 ರಿಂದ 2023 ರವರೆಗೆ ಕಾಳಿ ಹುಲಿ ಪ್ರದೇಶದಲ್ಲಿ ಹೊಸದಾಗಿ 40 ಒತ್ತುವರಿ ಪ್ರಕರಣಗಳು ದಾಖಲಾಗಿವೆ. ಗುಂದ ವಲಯದಲ್ಲಿ 11 ಪ್ರಕರಣಗಳು ದಾಖಲಾಗಿವೆ. ಅತ್ಯಧಿಕ ಪ್ರಕರಣಗಳು ಕುಂಬಾರವಾಡ ವಲಯದಲ್ಲಿ ನಡೆದಿವೆ. 2020ರ ಫೆಬ್ರುವರಿ ತಿಂಗಳಿನಿಂದ 2023 ರ ಅಕ್ಟೋಬರ್‌ ವರೆಗೆ ಕುಂಬಾರವಾಡ ವಲಯದಲ್ಲಿ 26 ಕಡೆಗಳಲ್ಲಿ ಒತ್ತುವರಿ ಆಗಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. 

ಹೊಸದಾಗಿ ಒತ್ತುವರಿ ತಡೆಯಲು ವಿಫಲರಾದಲ್ಲಿ ಡಿಸಿಎಫ್ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಸರ ಸಚಿವಾಲಯ 2004ರಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಹೊಸ ಒತ್ತುವರಿ ತಡೆಗಟ್ಟಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು 2018ರಲ್ಲಿ ನಿರ್ದೇಶನ ಹೊರಡಿಸಿದ್ದರು. ಆದರೂ, ಅತಿಕ್ರಮಣ ಪ್ರಕರಣಗಳು ಕಡಿಮೆಯಾಗಿಲ್ಲ ಎಂದು ಅವರು ದೂರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT