ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Legislative Council | ಗದ್ದಲ ಎಬ್ಬಿಸಿದ ಮರಿತಿಬ್ಬೇಗೌಡರ ಮೀನಿನ ಕಥೆ

Published 13 ಜುಲೈ 2023, 23:43 IST
Last Updated 13 ಜುಲೈ 2023, 23:43 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಗುರುವಾರ ನಡೆದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಹೇಳಿದ ಮೀನಿನ ಕಥೆ, ಪ್ರಧಾನಿ ನರೇಂದ್ರ ಮೋದಿಯವರ ಟೀಕೆ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಅವರ ಹೇಳಿಕೆಗಳನ್ನು ಖಂಡಿಸಿ ಸಭಾಪತಿ ಪೀಠದ ಮುಂದೆ ಬಿಜೆಪಿಯವರು ಧರಣಿ ನಡೆಸಿದರು.

‘ಗಂಗಾ ನದಿಯಲ್ಲಿ ಮೀನುಗಾರನಿಗೆ ಸಿಕ್ಕ ಮೀನೊಂದು ತನ್ನ ಎಲ್ಲ ಅಂಗಗಳನ್ನು ಕತ್ತರಿಸು ಆದರೆ, ಕಣ್ಣನ್ನು ಮಾತ್ರ ಬಿಡು ಎಂದು ವಿನಂತಿಸಿತಂತೆ. ಇದರಿಂದ ಚಕಿತನಾದ ಮೀನುಗಾರ ಕಾರಣ ಕೇಳಿದನಂತೆ. ಆಗ ಮೀನು ಮೋದಿ ಅವರ ಅಚ್ಚೇದಿನ ನೋಡಬೇಕು ಎಂಬ ಆಸೆ ಇದೆ ಎಂದಿತಂತೆ. ಇಂದಿಗೂ ಮೀನಿನ ಕಣ್ಣುಗಳು ಗಂಗಾನದಿ ತೀರದಲ್ಲೇ ಎದುರು ನೋಡುತ್ತಿವೆ’ ಎಂದರು.

‘ರಾಜ್ಯ ಸಂಕಷ್ಟದಲ್ಲಿದ್ದಾಗ ಬಾರದ ಪ್ರಧಾನಿ, ಚುನಾವಣೆಗೆ ಬಂದರು. ಸಂಸ್ಕೃತಿಯ ಬಗ್ಗೆ ಮಾತನಾಡುವ ಬಿಜೆಪಿ ಮೋದಿ ಮೇಲೆ ₹15 ಕೋಟಿ ಹೂ ಸುರಿಯಿತು, ಅದನ್ನು ಜನರು ಕಾಲಲ್ಲಿ ತುಳಿದರು. ಪ್ರಧಾನಿ ಮಣಿಪುರಕ್ಕೂ ಕಾಲಿಟ್ಟಿಲ್ಲ. ಅವರ ‘ಮಂಕಿಬಾತ್‌’ ಮಾತ್ರ ನಿಂತಿಲ್ಲ. ಕೋವಿಡ್‌ ಸಾವಿನ ಲೆಕ್ಕವನ್ನೇ ಕೊಡಲಿಲ್ಲ. ಆರ್‌ಎಸ್‌ಎಸ್‌ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ’ ಎಂದು ಮರಿತಿಬ್ಬೇಗೌಡರು ಹೇಳಿದ್ದು, ಬಿಜೆಪಿ ಸದಸ್ಯರನ್ನು ಕೆರಳಿಸಿದವು. ಮಾತು ಮುಂದುವರಿಸಲು ಅವಕಾಶ ನೀಡದೆ ಗದ್ದಲ ಎಬ್ಬಿಸಿದರು. ‘ಪ್ರಧಾನಿ ಟೀಕೆ ದೇಶದ್ರೋಹ. ಸಭಾಪತಿ ಸಹ ಉದ್ದೇಶಪೂರ್ವಕವಾಗಿ ಅವರಿಗೆ ಪ್ರಧಾನಿ ಟೀಕೆ ಮಾಡಲು ಅವಕಾಶ ಕೊಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರ ಮಾತಿಗೆ ಬಸವರಾಜ ಹೊರಟ್ಟಿ ಬೇಸರ ಹೊರಹಾಕಿದರು. 

ಭಾರತಿಶೆಟ್ಟಿ, ರವಿಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಕೇಶವ ಪ್ರಸಾದ್, ಡಿ.ಎಸ್.ಅರುಣ್‌ ಮತ್ತಿತರರು ಧರಣಿ ನಡೆಸಿದರು. ನಂತರ ಸಭಾಪತಿ ಹೊರಟ್ಟಿ ಆಕ್ಷೇಪಾರ್ಹ ಪದಗಳಿದ್ದರೆ, ಅವುಗಳನ್ನು ಕಡತದಿಂದ ತೆಗೆದು ಹಾಕುವ ಭರವಸೆ ನೀಡಿದ ನಂತರ ಮತ್ತೆ ಕಲಾಪ ಆರಂಭವಾಯಿತು.

ಆಗಲೂ ಬಿಜೆಪಿ ಸದಸ್ಯರು ‘ಮರಿತಿಬ್ಬೇಗೌಡರು ಕಾಂಗ್ರೆಸ್‌ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್‌ ಗ್ಯಾರಂಟಿ’ ಎಂದರು.

ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್‌ ಮಾತನಾಡಿ, ವೈವಿಧ್ಯಮಯ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಸಲ್ಲದು. ಹಿಂದೂ ಧರ್ಮದಲ್ಲೇ ಹಲವು ಆಚರಣೆಗಳಿವೆ. ಇದರಿಂದ ಅಂತಹ ಪ್ರಯತ್ನ ಸರಿಯಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಹಿಂದೂ ಧರ್ಮದ ಬಗ್ಗೆ ಮಾತನಾಡಲು ನಿಮಗೆ ಏನು ಅರ್ಹತೆ ಇದೆ ಎಂದು ಪ್ರಶ್ನಿಸಿದರು. ಸಚಿವ ಸಂತೋಷ್‌ ಲಾಡ್‌ ಸೇರಿದಂತೆ ಕಾಂಗ್ರೆಸ್‌ ಸದಸ್ಯರು  ನಜೀರ್‌ ಬೆಂಬಲಕ್ಕೆ ನಿಂತರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT