ಸಾಹಿತಿಗಳು ಮತ್ತು ಕೃತಿಗಳ ಕುರಿತು ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್ ಅವರ ಉಪನ್ಯಾಸ ಇರುವ ‘ನೂರು ಮರ–ನೂರು ಸ್ವರ’ ವಿಡಿಯೊ ಸರಣಿಯನ್ನು ಕಥನ ಸ್ಟುಡಿಯೊ ಆರಂಭಿಸಿದೆ. ಈ ಸರಣಿಯಲ್ಲಿ ಈವರೆಗೆ ಆರು ವಿಡಿಯೊಗಳು ರೂಪುಗೊಂಡಿವೆ. ಆಧುನಿಕ ಕನ್ನಡ ಸಾಹಿತ್ಯ ಈ ಹೊತ್ತಿನ ಸಾಹಿತ್ಯ ಮತ್ತು ಕುವೆಂಪು ಅವರ ಬದುಕು ಬರಹಗಳ ಬಗ್ಗೆ ಎಚ್ಚೆಸ್ಸಾರ್ ಅವರು ನೀಡಿರುವ ಉಪನ್ಯಾಸಗಳನ್ನು 10 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ‘ಕುವೆಂಪು ಶಿವರಾಮ ಕಾರಂತ ಬೇಂದ್ರೆ ಮಾಸ್ತಿ ಪುತಿನ ಕೆಎಸ್‌ನ ಮಧುರ ಚೆನ್ನ ಗೋಪಾಲಕೃಷ್ಣ ಅಡಿಗ ಯು.ಆರ್.ಅನಂತಮೂರ್ತಿ ಪಿ.ಲಂಕೇಶ್ ಪೂರ್ಣಚಂದ್ರ ತೇಜಸ್ವಿ ಯಶವಂತ ಚಿತ್ತಾಲ ದೇವನೂರ ಮಹಾದೇವರಂತಹ ಲೇಖಕರು ನವೋದಯ ನವ್ಯ ಬಂಡಾಯ ದಲಿತ ಮತ್ತು ಮಹಿಳಾ ಸಾಹಿತ್ಯ ರಂಗಭೂಮಿ ಮತ್ತು ವಿಮರ್ಶೆಗಳ ಕುರಿತಾದ ಉಪನಾಸ್ಯಗಳ ವಿಡಿಯೊವನ್ನು ವಾರಕ್ಕೊಂದರಂತೆ ಈ ಸರಣಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ’ ಎನ್ನುತ್ತಾರೆ ಕಥನ ಸ್ಟುಡಿಯೊ ರೂವಾರಿ ಚಂದನ್ ಗೌಡ.
ಅಲೆಮಾರಿಯ ಕತೆಗಳು...
ವಿಮರ್ಶಕ ರಹಮತ್ ತರೀಕೆರೆ ಅವರು ತಾವು ರಾಜ್ಯ ದೇಶ ವಿದೇಶಗಳ ಪ್ರವಾಸಿ ತಾಣಗಳಿಗೆ ನೀಡಿದ ಭೇಟಿ ಮತ್ತು ನಡೆಸಿದ ಚಾರಣಗಳ ಕಥನಗಳನ್ನು ಕಟ್ಟಿಕೊಡುವ ‘ಅಲೆಮಾರಿಯ ಕತೆಗಳು’ ವಿಡಿಯೊ ಸರಣಿಯನ್ನು ಈದಿನ.ಕಾಂ ತನ್ನ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ ಮಾಡುತ್ತಿದೆ. ಹಿಮಚ್ಛಾದಿತ ಕುಲು–ಮನಾಲಿ ಲಡಾಖ್‌ನ ಹಿಮ ಮರುಭೂಮಿಯ ಪ್ಯಾಂಗಾಂಗ್ ಸರೋವರ ಕ್ರೈಸ್ತ–ಇಸ್ಲಾಂ–ಯಹೂದಿ ಧರ್ಮಗಳಿಗೆ ಪ್ರಮುಖವಾದ ಸಿನಾಯಿ ಪರ್ವತ ಕಾವೇರಿ ಹರಿದುಹೋಗುವ ನಾಡುಗಳುದ್ದಕ್ಕೂ ಕೈಗೊಂಡ ಪಯಣದ ಬಗ್ಗೆ ರಹಮತ್ ಅವರು ಕಟ್ಟಿಕೊಟ್ಟ ಚಿತ್ರಣದ ವಿಡಿಯೊಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕದ ದಾರ್ಶನಿಕ ಪಂಥಗಳ ಬಗ್ಗೆ ಅವರ ವಿಶ್ಲೇಷಣಾ ವಿಡಿಯೊಗಳು 20 ಸಾವಿರದಷ್ಟು ವೀಕ್ಷಣೆಗಳನ್ನು ದಾಖಲಿಸಿವೆ.