ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ವ ಸೊಸೈಟಿ ವಂಚನೆ: ₹426 ಕೋಟಿ ಮೌಲ್ಯದ ಆಸ್ತಿ ಜಪ್ತಿ

10,125 ಠೇವಣಿದಾರರಿಂದ ₹500 ಕೋಟಿ ಸಂಗ್ರಹಿಸಿ ಮೋಸ
Published 2 ಆಗಸ್ಟ್ 2023, 0:50 IST
Last Updated 2 ಆಗಸ್ಟ್ 2023, 0:50 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ವಿರುದ್ಧ 2019 ಹಾಗೂ 2020ರಲ್ಲಿ ದಾಖಲಾಗಿರುವ ವಂಚನೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಇದುವರೆಗೆ ₹426 ಕೋಟಿ ₹19 ಲಕ್ಷ ಮೌಲ್ಯದ 118 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಕಣ್ವ ಸಮೂಹ ಸಂಸ್ಥೆ ಅಧೀನದಲ್ಲಿ ಸ್ಥಾಪಿಸಲಾಗಿದ್ದ ಸೊಸೈಟಿಯಿಂದ ವಂಚನೆ ಆಗಿರುವುದಾಗಿ ಠೇವಣಿದಾರರು ದೂರಿದ್ದರು. ಈ ಸಂಬಂಧ ಬಸವೇಶ್ವರನಗರ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 21 ಎಫ್‌ಐಆರ್‌ಗಳು ದಾಖಲಾಗಿದ್ದವು.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಕಣ್ವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸೊಸೈಟಿಯ ಸಂಸ್ಥಾಪಕ ಎನ್‌. ನಂಜುಂಡಯ್ಯ ಹಾಗೂ ಇತರರನ್ನು ಬಂಧಿಸಿದ್ದರು.

ಬಡ್ಡಿ ಆಮಿಷವೊಡ್ಡಿ ವಂಚನೆ: ‘ಹಣ ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿ ನೀಡುವುದಾಗಿ ಸೊಸೈಟಿ ಹೇಳಿತ್ತು. ಅದನ್ನು ನಂಬಿದ್ದ ಹಿರಿಯ ನಾಗರಿಕರು, ಸರ್ಕಾರಿ ನೌಕರರು, ಕಂಪನಿ ಉದ್ಯೋಗಿಗಳು ಸೇರಿದಂತೆ ಹಲವರು ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಹೂಡಿಕೆ ಹಣವನ್ನೆಲ್ಲ ಆರೋಪಿಗಳು, ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದರು. ಠೇವಣಿ ಹಣವನ್ನು ವಾಪಸು ನೀಡದೇ ವಂಚಿಸಿದ್ದರು’ ಎಂದು ತಿಳಿಸಿವೆ.

ರಾಜ್ಯದ ಹಲವೆಡೆ ಆಸ್ತಿ ಖರೀದಿ: ‘ಪ್ರಕರಣದ ಪ್ರಮುಖ ಆರೋಪಿ ಎನ್‌. ನಂಜುಂಡಯ್ಯನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು. ಸೊಸೈಟಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಸಿದ್ದೇಗೌಡ, ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪ್ರಶಾಂತ್‌ಕುಮಾರ್ ಎಚ್‌.ಡಿ., ನಿರ್ದೇಶಕರಾದ ವಿಜಯ್‌ಕುಮಾರ್, ನವೀನ್‌ಕುಮಾರ್, ಲಿಂಗರಾಜು ಮತ್ತು ಇತರರು ಸೇರಿಕೊಂಡು ಕೃತ್ಯ ಎಸಗಿರುವುದಾಗಿ ನಂಜುಂಡಯ್ಯ ತಪ್ಪೊಪ್ಪಿಗೆ ನೀಡಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಸೊಸೈಟಿ ಹಾಗೂ ಆರೋಪಿಗಳ ಹೆಸರಿನಲ್ಲಿದ್ದ 118 ಆಸ್ತಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಇವುಗಳ ಒಟ್ಟು ಮೌಲ್ಯ ₹426 ಕೋಟಿ ₹19 ಲಕ್ಷ’ ಎಂದು ತಿಳಿಸಿವೆ.

10,125 ಠೇವಣಿದಾರರಿಗೆ ವಂಚನೆ: ‘ಸೊಸೈಟಿಯಿಂದ ವಂಚನೆಯಾಗಿರುವ ಬಗ್ಗೆ 10,125 ಠೇವಣಿದಾರರು ದಾಖಲೆ ಸಮೇತ ಈಗಾಗಲೇ ದೂರು ಸಲ್ಲಿಸಿದ್ದಾರೆ. ಇವರಿಗೆ ₹500 ಕೋಟಿ ವಂಚನೆ ಆಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT