ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸನ್ನಡತೆ: 77 ಕೈದಿಗಳ ಬಿಡುಗಡೆ

ಬಂಧಮುಕ್ತವಾದ ಸಂಭ್ರಮದಲ್ಲಿ ಮನೆಯತ್ತ ಹೆಜ್ಜೆ...
Published 9 ಜುಲೈ 2024, 15:36 IST
Last Updated 9 ಜುಲೈ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಏಳು ಕೇಂದ್ರ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 77 ಕೈದಿಗಳಿಗೆ ಮಂಗಳವಾರ ಬಿಡುಗಡೆ ಭಾಗ್ಯ ಸಿಕ್ಕಿತು.

ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಆ ಬಳಿಕ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೂ 34 ಕೈದಿಗಳು ಬಿಡುಗಡೆಯಾದರು.

ಗೃಹ ಸಚಿವ ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಬಂಧನದಿಂದ ಬಿಡುಗಡೆಯಾದ ಕೈದಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಇದೇ ವೇಳೆ ಮೈಸೂರು ಕೇಂದ್ರ ಕಾರಾಗೃಹದಿಂದ ಏಳು, ಬೆಳಗಾವಿ ಜೈಲಿನಿಂದ ಐದು, ಕಲಬುರಗಿ ಕಾರಾಗೃಹದಿಂದ ಒಂಬತ್ತು, ವಿಜಯಪುರ ಜೈಲಿನಿಂದ ಆರು, ಬಳ್ಳಾರಿ ಕೇಂದ್ರ ಕಾರಾಗೃಹದಿಂದ 10, ಧಾರವಾಡ ಜೈಲಿನಿಂದ ಆರು ಕೈದಿಗಳು ಬಿಡುಗಡೆಯಾದರು.

ಕೆಲವರನ್ನು ಕರೆದೊಯ್ಯಲು ಕುಟುಂಬಸ್ಥರು ಜೈಲಿನ ಬಳಿಗೆ ಬಂದಿದ್ದರು. ಬಿಡುಗಡೆಯಾದವರನ್ನು ಸಂಭ್ರಮದಿಂದ ಸ್ವಾಗತಿಸಿ ಮನೆಗೆ ಕರೆದೊಯ್ದರು. ‘ಇನ್ನು ಮುಂದೆ ಈ ರೀತಿಯ ಪ್ರಮಾದ ಎಸಗುವುದಿಲ್ಲ ಎಂಬುದಾಗಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಎಲ್ಲರನ್ನೂ ಕಳುಹಿಸಲಾಯಿತು’ ಎಂದು ಜೈಲಾಧಿಕಾರಿಯೊಬ್ಬರು ತಿಳಿಸಿದರು.

‘ಪುನರ್ಜನ್ಮ ಸಿಕ್ಕಿದೆ...’:

‘15 ವರ್ಷ ಜೈಲುವಾಸ ಅನುಭವಿಸಿದ್ದೇನೆ. ಆಕಸ್ಮಿಕ ಘಟನೆಯಿಂದ ಜೈಲಿಗೆ ಬರಬೇಕಾಯಿತು. ನನ್ನ ಪುತ್ರಿಯ ಉನ್ನತ ವ್ಯಾಸಂಗದ ಗುರಿ ಸಾಧಿಸಲು ಆಗಲಿಲ್ಲ. ಜೈಲಿನಲ್ಲಿದ್ದುಕೊಂಡು ಬಿ.ಎ ಪದವಿ ಪೂರ್ಣಗೊಳಿಸಿದ್ದೇನೆ. ಈ ದಿನ ನನಗೆ ಪುನರ್ಜನ್ಮ ಸಿಕ್ಕಿದೆ’ ಎಂದು ಬಂಧಮುಕ್ತರಾದ ದಾನೇಶ್ ಹರ್ಷ ವ್ಯಕ್ತಪಡಿಸಿದರು.

ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಸಚಿವ ಪರಮೇಶ್ವರ ಅವರು, ‘ಪರಿವರ್ತನೆ ತಂದುಕೊಂಡರೆ ಸಮಾಜದಲ್ಲಿ ಬದುಕಲು ಮತ್ತೊಂದು ಅವಕಾಶ ಸಿಗುತ್ತದೆ. ಯಾವುದೇ ಕಾರಣಕ್ಕೂ ಮತ್ತೆ ತಪ್ಪು ಮಾಡಲು ಹೋಗಬೇಡಿ. ಜೀವನದ ಉಳಿದ ಅವಧಿಯನ್ನು ಕುಟುಂಬದವರ ಜತೆಗೆ ಉತ್ತಮ ರೀತಿಯಲ್ಲಿ ಕಳೆಯಿರಿ’ ಎಂದು ಕಿವಿಮಾತು ಹೇಳಿದರು.

‘ರಾಜ್ಯದ 54 ಕಾರಾಗೃಹಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿಡಬೇಕು. ಕೌಶಲ ತರಬೇತಿ, ಶಿಕ್ಷಣದ ಮೂಲಕ ಅವರನ್ನು ಸುಧಾರಿಸಿ ಪರಿವರ್ತನೆ ತರುವ ಜವಾಬ್ದಾರಿ ಇಲಾಖೆಯ ಮೇಲಿದೆ. ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಅನೇಕ ಪ್ರಸ್ತಾವಗಳನ್ನು ಸಲ್ಲಿಸಿದ್ದು ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಇಂದಿನಿಂದ ಹೊಸ ಅಧ್ಯಾಯ ಆರಂಭವಾಗಿದೆ. ಆಹಾರ ಮತ್ತು ಸ್ವಾತಂತ್ರ್ಯದ ಮಹತ್ವ ಏನೆಂಬುದು ಜೈಲು ವಾಸದಲ್ಲಿ ಗೊತ್ತಾಗಿದೆ

–ಸತೀಶ್ ಆಚಾರ್ಯ ಬಿಡುಗಡೆಯಾದವರು

‘ದರ್ಶನ್‌ಗೆ ವಿಶೇಷ ಸೌಲಭ್ಯವಿಲ್ಲ’

‘ಕೊಲೆ ಆರೋಪಿ ದರ್ಶನ್‌ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡುತ್ತಿಲ್ಲ. ಇತರ ಕೈದಿಗಳಿಗೆ ಯಾವ ಸೌಲಭ್ಯವಿದೆಯೊ ಅದನ್ನೇ ದರ್ಶನ್‌ ಅವರಿಗೂ ನೀಡಲಾಗುತ್ತಿದೆ. ಬಿರಿಯಾನಿ ಕೊಟ್ಟರು ಎಂದು ಕೆಲವರು ಆರೋಪಿಸಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ‌’ ಎಂದು ಸಚಿವ ಪರಮೇಶ್ವರ ಹೇಳಿದರು. ‘ಜೈಲಿನಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ ಜಾಮರ್ ಹಾಕಿರುವುದರಿಂದ ಸುಮಾರು 800 ಮೀಟರ್ ವ್ಯಾಪ್ತಿಯವರೆಗೂ ಕಾರ್ಯನಿರ್ವಹಿಸುತ್ತದೆ. ಇದರಿಂದ ಜೈಲಿನ ಸುತ್ತಮುತ್ತಲ ನಿವಾಸಿಗಳಿಗೆ ನೆಟ್‌ವರ್ಕ್‌ ಸಿಗುತ್ತಿರಲಿಲ್ಲ. ಜಾಮರ್ ಕಾರ್ಯನಿರ್ವಹಣೆ ವ್ಯಾಪ್ತಿಯನ್ನು 100 ಮೀಟರ್‌ಗೆ ಇಳಿಸಲಾಗಿದೆ. ಜಾಮರ್‌ಗಳನ್ನು ತೆಗೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT