ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಒಮ್ಮೆ ಕೈಬೀಸಿ ಹೋದರೆ ಜನರಿಗೆ ಬರೆ ಎಳೆದಿದ್ದಾರೆ ಎಂದರ್ಥ: ಕಾಂಗ್ರೆಸ್ ಲೇವಡಿ

Last Updated 1 ಮಾರ್ಚ್ 2023, 9:32 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆ ಕೈಬೀಸಿ ಹೋದರೆ ಜನರಿಗೆ ಬರೆ ಎಳೆದಿದ್ದಾರೆ ಎಂದರ್ಥ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸಿಲಿಂಡರ್ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರಗಳ ವಿರುದ್ಧ ಕಿಡಿಕಾರಿದೆ.

‘ಗೃಹಬಳಕೆಯ ಸಿಲಿಂಡರ್ ದರ ಇಂದಿನಿಂದ ಮತ್ತೆ ₹50 ಏರಿಕೆಯಾಗಿದೆ. ಮೋದಿ ಅವರ ಅಚ್ಛೆ ದಿನಗಳಲ್ಲಿ ಜನರು ಕಾಡುಮೇಡು ಅಲೆದು ಗೆಡ್ಡೆಗೆಣಸು ತಿಂದು ಬದುಕುವ ಹಂತಕ್ಕೆ ಬರುವುದು ನಿಶ್ಚಿತ. ಈ ಅಮಾನವೀಯ ಬೆಲೆ ಏರಿಕೆಯಲ್ಲಿ ನೆರವು ನೀಡಲೆಂದೇ ನಾವು ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತರುಲಿದ್ದೇವೆ’ ಎಂದು ಕಾಂಗ್ರೆಸ್‌ ಹೇಳಿದೆ.

‘ರೈತರಿಗೆ ಅವಮಾನಿಸುವುದನ್ನು ಬಿಜೆಪಿ ನಿಲ್ಲಿಸುವುದು ಯಾವಾಗ?, ರೈತರನ್ನು ‘ಹೇಡಿಗಳು’ ಎಂದಿದ್ದ ಬಿಜೆಪಿ ಈಗ ‘ಸೋಂಬೇರಿಗಳು’ ಎನ್ನುತ್ತಿದೆ. ರೈತರು ಅಕ್ಕಿ ಪಡೆದು ಕೆಲಸ ಮಾಡುವುದನ್ನೇ ನಿಲ್ಲಿಸಿದ್ದಾರೆ ಎನ್ನುವ ಬಿಜೆಪಿ ಸಂಸದರು ಒಂದು ದಿನವಾದರೂ ರೈತರ ಗೋಳು ಆಲಿಸಿದ್ದಾರೆಯೇ? ಉತ್ತಿ ಬಿತ್ತಿದ್ದಾರೆಯೇ?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

‘ಮಿತ್ರಕಾಲದಲ್ಲಿ ಮೋದಿ ಸರ್ಕಾರದಿಂದ ಹೋಳಿಯಲ್ಲೂ ಬೆಲೆ ಏರಿಕೆಯ ಆರ್ಭಟ, ಗೃಹಬಳಕೆ ಸಿಲಿಂಡರ್ ₹50 ಹಾಗೂ ವಾಣಿಜ್ಯ ಸಿಲಿಂಡರ್ ₹350 ದುಬಾರಿಯಾಗಿದೆ. ಈಗ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ದರ ₹1103ಕ್ಕೆ ಏರಿಕೆ ಹಾಗೂ ವಾಣಿಜ್ಯ ಸಿಲಿಂಡರ್ ದರ ₹2119.50ಕ್ಕೆ ಏರಿಕೆಯಾಗಿದೆ. ಮೋದಿಯವರೇ, ಗೆಳೆಯನೊಂದಿಗೆ ಸೇರಿ ಜನಸಾಮಾನ್ಯರನ್ನು ಬೆಲೆ ಏರಿಕೆ ಬೇಗುದಿಯಲ್ಲಿ ಇನ್ನೆಷ್ಟು ಬೇಯಿಸುವಿರಿ’ ಎಂದು ಕಾಂಗ್ರೆಸ್‌ ಗುಡುಗಿದೆ.

‘ಅಚ್ಛೆ ದಿನಗಳಲ್ಲಿ ಅನ್ನ ಬೇಯಿಸಿ ತಿನ್ನುವುದೂ ಕೂಡ ‘ಐಷಾರಾಮಿ ಜೀವನ’ ಎನ್ನುವ ಸ್ಥಿತಿಗೆ ತಂದಿಟ್ಟಿದ್ದಕ್ಕೆ ಮೋದಿ ಅವರಿಗೆ ಧನ್ಯವಾದಗಳು. ಮೊದಲು ಹೊಗೆಯಿಂದ ಕಣ್ಣೀರು ಬರ್ತಿತ್ತು, ಇದೀಗ ಬಿಜೆಪಿ ಸರ್ಕಾರ ಸಿಲಿಂಡರ್‌ನಲ್ಲೂ ಕೂಡ ಕಣ್ಣೀರು ತರಿಸುತ್ತಿದೆ ಅಲ್ಲವೇ’ ಎಂದು ಕಾಂಗ್ರೆಸ್‌ ಕಿಚಾಯಿಸಿದೆ

‘ಇಂದು ಬಿಎಸ್‌ವೈ ಅವರ ಕಾಲು ಹಿಡಿಯುತ್ತಿರುವ ಬಿಜೆಪಿ ಕಣ್ಣೀರು ಹಾಕಿಸಿ ಯಡಿಯೂರಪ್ಪನವರ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬುದನ್ನು ಉತ್ತರಿಸಲಿ. ಇಂದಿಗೂ ಸಿಗದ ಉತ್ತರ ಸಿಗದ ಪ್ರಶ್ನೆಗಳು ಇಂತಿವೆ... ಅವಧಿ ಪೂರೈಸುತ್ತೇನೆ ಎನ್ನುತ್ತಿದ್ದ ಯಡಿಯೂರಪ್ಪ ಅವರನ್ನು ಇದ್ದಕ್ಕಿದ್ದಂತೆ ದೆಹಲಿಗೆ ಹೋಗಿ ಬಂದು ರಾಜೀನಾಮೆ ಕೊಟ್ಟಿದ್ದೇಕೆ?, ಕಣ್ಣೀರು ಹಾಕಿ ಗೋಳಾಡಿದ್ದೇಕೆ? ಇದರ ಬಗ್ಗೆ ಉತ್ತರಿಸಲಿ’ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

‘ಪ್ರಲ್ಹಾದ್ ಜೋಶಿ, ಬಿ.ಎಲ್‌. ಸಂತೋಷ ಅವರ ಮುಖ ತೋರಿಸಿದರೆ ನಾಲ್ಕು ಮತಗಳು ಸಿಗುವುದಿಲ್ಲ ಎಂಬ ವಾಸ್ತವ ಸಂಗತಿ ಅರಿವಾಗುತ್ತಲೇ ಯಡಿಯೂರಪ್ಪ ಅವರನ್ನು ಉತ್ಸವ ಮೂರ್ತಿ ಮಾಡಲು ಹೊರಟಿರುವ ಇದೇ ಬಿಜೆಪಿ ಹಿಂದೆ ಬಿಎಸ್‌ವೈರನ್ನು ಹೇಗೆಲ್ಲಾ ನಡೆಸಿಕೊಂಡಿತ್ತು ಎಂಬುದನ್ನು ಜನತೆ ನೋಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಯಡಿಯೂರಪ್ಪ ಎಂಬ ಉತ್ಸವ ಮೂರ್ತಿಯನ್ನು ವಿಸರ್ಜನಾ ಮೂರ್ತಿ ಮಾಡಲಿದೆ ಬಿಜೆಪಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT