ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಪುಟ್ಟಣ್ಣ ‘ಕೈ’ ಹಿಡಿದ ಬೆನ್ನಲ್ಲೆ ವಿರೋಧ

Last Updated 9 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಪುಟ್ಟಣ್ಣ, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಮತ್ತು ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಗುರುವಾರ ‘ಕೈ’ ತೆಕ್ಕೆಗೆ ಜಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪುಟ್ಟಣ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.‌

ಆದರೆ, ಇದರ ಬೆನ್ನಲ್ಲೆ ರಾಜಾಜಿನಗರ ಕ್ಷೇತ್ರದ ಕೆಲವು ಕಾಂಗ್ರೆಸ್‌ ನಾಯಕರು, ಟಿಕೆಟ್‌ ಆಕಾಂಕ್ಷಿಗಳು ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಪುಟ್ಟಣ್ಣ ಅವರಿಗೆ ಟಿಕೆಟ್‌ ನೀಡಬೇಡಿ’ ಎಂದೂ ಗದ್ದಲ ನಡೆಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆಗ ಸಿದ್ದರಾಮಯ್ಯ ಕೆರಳಿದ ಘಟನೆಯೂ ನಡೆಯಿತು.

‘ಪುಟ್ಟಣ್ಣ ಇನ್ನೂ ಪಕ್ಷದ ಸದಸ್ಯತ್ವ ಪಡೆಯದೇ ಇರುವುದರಿಂದ ಟಿಕೆಟ್ ನೀಡುವ ವಿಚಾರ ಈಗ ಅಪ್ರಸ್ತುತ’ ಎಂದು ಶಿವಕುಮಾರ್ ಹೇಳಿದರು.

ಪುಟ್ಟಣ್ಣ ಮಾತನಾಡಿ, ‘ಯಾವ ಉದ್ದೇಶದಿಂದ ನಾನು ಬಿಜೆಪಿ ಸೇರಿದ್ದೆನೋ ಅದನ್ನು ಮಾಡಲು ಸಾಧ್ಯವಾಗಿಲ್ಲ. ಅಲ್ಲಿ ಸತ್ತಂತೆ ಬದುಕುವ ಪರಿಸ್ಥಿತಿ ಇದೆ. ಶಿಕ್ಷಕರ ಕ್ಷೇತ್ರದ ಯಾವುದೇ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ’ ಎಂದರು.

ಟಿಕೆಟ್‌ಗಾಗಿ ಲಾಬಿ: ‘ಕೈ’ ವರಿಷ್ಠರ ಎಚ್ಚರಿಕೆ
ಬೆಂಗಳೂರು:
‘ನಿಮ್ಮ ಬೆಂಬಲಿಗರಿಗೆ ಟಿಕೆಟ್ ತೆಗೆದುಕೊಳ್ಳಿ. ಆದರೆ, ಅವರನ್ನು ಗೆಲ್ಲಿಸುವ ಹೊಣೆಯನ್ನೂ ನೀವೇ ಹೊತ್ತುಕೊಳ್ಳಬೇಕು. ಒಂದೊಮ್ಮೆ ಸೋತರೆ ‌ಆ ಹಣೆಪಟ್ಟಿಯನ್ನೂ ನೀವೇ ಕಟ್ಟಿಕೊಳ್ಳಬೇಕು’ ಎಂದು ತಮ್ಮ ಬೆಂಬಲಿಗರ ಪರ ಲಾಬಿ‌ ನಡೆಸುತ್ತಿರುವ ಮುಖಂಡರಿಗೆ ಕಾಂಗ್ರೆಸ್‌ ವರಿಷ್ಠರು ಸಂದೇಶ ರವಾನಿಸಿದ್ದಾರೆ.

‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ, ಎಂ.ಬಿ ಪಾಟೀಲ ಸೇರಿದಂತೆ ಕೆಲವು ಪ್ರಭಾವಿ ನಾಯಕರ ಮೂಲಕ ಟಿಕೆಟ್ ಆಕಾಂಕ್ಷಿಗಳು ಒತ್ತಡ ಹಾಕುತ್ತಿರುವುದನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ, ಯಾವುದೇ ಒತ್ತಡಕ್ಕೆ ಮಣಿಯದೆ ಗೆಲ್ಲುವವರಿಗೆ ಮಾತ್ರ ಮಣೆ ಹಾಕುವಂತೆ ಸೂಚನೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಮುಲಾಜು, ಪ್ರಭಾವಕ್ಕೆ ಅವಕಾಶ ಇಲ್ಲ. ಅದರ ಹೊರತಾಗಿಯೂ ಬೆಂಬಲಿಗರ ಪರ ಕೆಲವು ಮುಖಂಡರು ಲಾಬಿ ನಡೆಸುತ್ತಿದ್ದಾರೆ. ಜಾತಿ, ಸಮುದಾಯದ ಕೋಟಾ ನೆಪದಲ್ಲಿ ಕೆಲವರು ಟಿಕೆಟ್‌ ನೀಡುವಂತೆ ತಂತ್ರ ಅನುಸರಿಸುತ್ತಿದ್ದಾರೆ. ಸಂಭವನೀಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಎಐಸಿಸಿಸಿ ನೇಮಿಸಿದ್ದ ಸ್ಕ್ರೀನಿಂಗ್ ಸಮಿತಿಯ ಸಭೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಈ ವಿಚಾರವೂ ಚರ್ಚೆಯಾಗಿದೆ’ ಎಂದೂ ಮೂಲಗಳು ಹೇಳಿವೆ. ಲಿಂಗಾಯತ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡುವಂತೆ ಎಂ.ಬಿ. ಪಾಟೀಲ ಬೇಡಿಕೆ ಇಟ್ಟಿದ್ದರು. ಕೆಲವು ಸಮುದಾಯಗಳ ಮುಖಂಡರೂ ಟಿಕೆಟ್‌ಗಾಗಿ ನಾಯಕರ ಹಿಂದೆಮುಂದೆ ಸುತ್ತಾಡುತ್ತಿದ್ದಾರೆ.

‘ಟಿಕೆಟ್ ಕೇಳಿದರೆ ಎಷ್ಟು ಕೋಟಿಯಿದೆ ಎಂದು ಕೇಳುತ್ತಾರೆ’
ಶಿವಮೊಗ್ಗ:
‘ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೇಳಿದರೆ ನಿಮ್ಮ ಬಳಿ ಎಷ್ಟು ಕೋಟಿ ಹಣವಿದೆ ಎಂದು ಪಕ್ಷದ ನಾಯಕರು ಕೇಳುತ್ತಾರೆ. ಇದರಿಂದ ಬೇಸರಗೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.

‘ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರಿಂದ ಪಕ್ಷದ ಮುಖಂಡರು ಹಣವನ್ನು ಮಾತ್ರ ನಿರೀಕ್ಷಿಸುತ್ತಿದ್ದಾರೆ. ಗಂಟು ನೋಡುತ್ತಾರೆಯೇ ವಿನಾ ನಂಟು ನೋಡುತ್ತಿಲ್ಲ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ತೊರೆದರೂ ಬೇರೆ ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT