ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ |ಶಾಂತಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಅಭ್ಯರ್ಥಿಗಳ ಸಂದರ್ಶನ
Published 1 ಮೇ 2023, 4:53 IST
Last Updated 1 ಮೇ 2023, 4:53 IST
ಅಕ್ಷರ ಗಾತ್ರ

ಎನ್‌.ಎ. ಹ್ಯಾರಿಸ್ (ಕಾಂಗ್ರೆಸ್) ಧರ್ಮ–ಜಾತಿ ಭೇದವಿಲ್ಲದೇ ಜನರಿಗಾಗಿ ದುಡಿಯುತ್ತಿದ್ದೇನೆ

ಪ್ರ

ಕ್ಷೇತ್ರದ ಜನರು ನಿಮಗೆ ಏಕೆ ಮತ ಹಾಕಬೇಕು?

ಕ್ಷೇತ್ರ ಹಾಗೂ ಜನರಿಗಾಗಿ ದುಡಿಯುತ್ತಿದ್ದೇನೆ. ಜನರ ಎಲ್ಲ ಸಮಸ್ಯೆಗಳಿಗೂ ತ್ವರಿತವಾಗಿ ಸ್ಪಂದಿಸುತ್ತಿದ್ದೇನೆ. ಶಾಂತಿ ಬಯಸುವ ಜನರಿರುವ ನನ್ನ ಕ್ಷೇತ್ರದಲ್ಲಿ ಧರ್ಮ–ಜಾತಿ ಭೇದವಿಲ್ಲದೇ ಕೆಲಸ ಮಾಡುತ್ತಿದ್ದೇನೆ. ಟೆಂಡರ್ ಶ್ಯೂರ್ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸುಸಜ್ಜಿತ ರಸ್ತೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ಸರ್ಕಾರಿ ಶಾಲೆ–ಕಾಲೇಜು ಕಟ್ಟಡ, ಸಮುದಾಯ ಭವನಗಳ ನಿರ್ಮಾಣ ಹಾಗೂ ಸಕಲ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಿದ್ದೇನೆ. ಕ್ಷೇತ್ರದ ಜನರಿಗೆ ಸರ್ಕಾರಿ ಸೇವೆಗಳು ಹಾಗೂ ಅಧಿಕಾರಿಗಳು ಒಂದೇ ಕಡೆ ಸಿಗಬೇಕೆಂಬ ಉದ್ದೇಶದಿಂದ ಆಸ್ಟಿನ್‌ಟೌನ್‌ನಲ್ಲಿ ‘ಶಾಂತಿನಗರ ಒನ್’ ಬಹುಮಹಡಿ ಕಟ್ಟಡ ನಿರ್ಮಿಸಲು ತಯಾರಿ ನಡೆಸುತ್ತಿದ್ದೇನೆ. ಮತ್ತೊಮ್ಮೆ ಅವಕಾಶ ಸಿಕ್ಕರೆ, ಮಾದರಿ ಕ್ಷೇತ್ರ ಮಾಡಲು ಶ್ರಮಿಸುವೆ

ಪ್ರ

ಕ್ಷೇತ್ರದಲ್ಲಿ ನಿಮಗೆ ಜನರ ಬೆಂಬಲ ಹೇಗಿದೆ ?

ಬಹಳ ಚೆನ್ನಾಗಿದೆ. 15 ವರ್ಷ ಶಾಸಕನಾಗಿ ಜನರ ಜೊತೆಗೆ ಕೆಲಸ ಮಾಡಿದ್ದೇನೆ. ಹೀಗಾಗಿ, ಜನರೆಲ್ಲರೂ ನನ್ನ ಜೊತೆಗಿದ್ದಾರೆ. ಜನರ ಪ್ರತಿಯೊಂದು ಸಮಸ್ಯೆಗಳು ಗೊತ್ತಿರುವುದರಿಂದ, ಅವರೆಲ್ಲರ ಆಶೀರ್ವಾದ ನನ್ನ ಮೇಲಿದೆ.

ಪ್ರ

ನಿಮ್ಮ ನಿಜವಾದ ಪ್ರತಿಸ್ಪರ್ಧಿ ಯಾರು?

ಬಿಜೆಪಿ ಅಭ್ಯರ್ಥಿಯೇ ಪ್ರತಿಸ್ಪರ್ಧಿ. ಆದರೆ, ಜನರಿಗೆ ಅಭ್ಯರ್ಥಿಗಳ ಬಗ್ಗೆ ಗೊತ್ತಿದೆ. ಶಾಂತಿನಗರದ ಜನ, ಶಾಂತಿಪ್ರಿಯರು. ಅಶಾಂತಿ ವಾತಾವರಣಕ್ಕೆ ಆಸ್ಪದ ನೀಡುವುದಿಲ್ಲ. ನಾನು ಮಾಡಿರುವ ಕೆಲಸ ನೋಡಿರುವ ಜನ, ನನ್ನ ಗೆಲುವು ಬಯಸುತ್ತಿದ್ದಾರೆ.

ಕೆ. ಶಿವಕುಮಾರ್ (ಬಿಜೆಪಿ)

ಜನರ ಸಮಸ್ಯೆಗಳ ಅರಿವು ನನಗಿದೆ

ಪ್ರ

ಕ್ಷೇತ್ರದ ಜನರು ನಿಮಗೆ ಏಕೆ ಮತ ಹಾಕಬೇಕು?

ಜನರ ಸೇವೆಗೆಂದು ಜೀವನ ಮುಡಿಪಾಗಿಟ್ಟಿದ್ದೇನೆ. 10 ವರ್ಷ ಕಾರ್ಪೊರೇಟರ್ ಆಗಿ ಜನರ ಸೇವೆ ಮಾಡಿದ್ದೇನೆ. ಕ್ಷೇತ್ರದ ಜನರ ಸಮಸ್ಯೆಗಳು ಯಾವುವು ಎಂಬುದು ನನಗೆ ಗೊತ್ತಿದೆ. ಸದ್ಯದ ಶಾಸಕ, ತಮ್ಮ ಕಾರ್ಯಕರ್ತರನ್ನಷ್ಟೇ ಅಭಿವೃದ್ಧಿಪಡಿಸಿದ್ದಾರೆ. ಕ್ಷೇತ್ರದ ಜನರ ಸಮಸ್ಯೆ ಈಡೇರಿಸಿಲ್ಲ. ವಸತಿ ವಂಚಿತರಿಗೆ ಹಕ್ಕು ಪತ್ರ ವಿತರಿಸಿಲ್ಲ. ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಸರ್ಕಾರಿ ಶಾಲೆ, ಆಸ್ಪತ್ರೆ, ರಸ್ತೆ, ಉದ್ಯಾನಗಳ ಅಭಿವೃದ್ಧಿ ಶೂನ್ಯ. ಜನರೊಂದಿಗೆ ನಿತ್ಯವೂ ಸಂಪರ್ಕದಲ್ಲಿರುವ ನಾನು, ಅವರ ಸಮಸ್ಯೆಗಳನ್ನು ತ್ವರಿತವಾಗಿ ಈಡೇರಿಸಲು ಬದ್ಧ.

ಪ್ರ

ಕ್ಷೇತ್ರದಲ್ಲಿ ನಿಮಗೆ ಜನರ ಬೆಂಬಲ ಹೇಗಿದೆ ?

ಚೆನ್ನಾಗಿದೆ. ಬಿಜೆಪಿ ಕೆಲಸಗಳನ್ನು ಮೆಚ್ಚಿ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಕ್ಷೇತ್ರದ ಜನರು, ನನಗೆ ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ.

ಪ್ರ

* ನಿಮ್ಮ ನಿಜವಾದ ಪ್ರತಿಸ್ಪರ್ಧಿ ಯಾರು?

ಕಾಂಗ್ರೆಸ್ ಅಭ್ಯರ್ಥಿ. ಕ್ಷೇತ್ರದ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ಶೇ 100ರಷ್ಟು ಗೆಲುವು ನನ್ನದು.

ಎಚ್‌. ಮಂಜುನಾಥ್ (ಜೆಡಿಎಸ್)

ಬದಲಾವಣೆ ಬಯಸುತ್ತಿರುವ ಜನ

ಪ್ರ

ಕ್ಷೇತ್ರದ ಜನರು ನಿಮಗೆ ಏಕೆ ಮತ ಹಾಕಬೇಕು?

ಬಡವರ ಪರವಿರುವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಜನರಿಗೆ ಹೆಚ್ಚಿನ ಒಲವಿದೆ. ರೈತರ ಸಾಲ ಮನ್ನಾ, ಬೆಂಗಳೂರಿಗೆ ಕುಡಿಯುವ ನೀರು, ಮೇಲ್ಸೇತುವೆಗಳ ನಿರ್ಮಾಣ, ಪಿಂಚಣಿ ವ್ಯವಸ್ಥೆ ಹಾಗೂ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದು ನಮ್ಮ ಜೆಡಿಎಸ್. ಶಾಂತಿನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕನಸು ಕಂಡಿದ್ದೇನೆ. ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್, ಗರ್ಭಿಣಿಯರಿಗೆ ₹6 ಸಾವಿರ ಭತ್ಯೆ, ರೈತ ಯುವಕರನ್ನು ಮದುವೆಯಾಗುವವರಿಗೆ ₹ 2 ಲಕ್ಷ ಪ್ರೋತ್ಸಾಹ ಧನ, ಹಿರಿಯ ನಾಗರಿಕರಿಗೆ ₹ 5 ಸಾವಿರ ಪಿಂಚಣಿ ಹಾಗೂ ಇತರೆ ಮೂಲ ಸೌಕರ್ಯ ಕಲ್ಪಿಸಲು ಜೆಡಿಎಸ್ ಪಣ ತೊಟ್ಟಿದೆ.

ಪ್ರ

ಕ್ಷೇತ್ರದಲ್ಲಿ ನಿಮಗೆ ಜನರ ಬೆಂಬಲ ಹೇಗಿದೆ ?

ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ಜನರಿಂದ ಅದ್ಭುತ ಬೆಂಬಲ ಸಿಗುತ್ತಿದೆ. ಕುಮಾರಸ್ವಾಮಿ ಅವರ ಅಭಿವೃದ್ಧಿ ಕೆಲಸಗಳನ್ನು ಜನರು ಹೊಗಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಈ ಬಾರಿ ಸೋಲಿಸಿ, ಜೆಡಿಎಸ್ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ

ಪ್ರ

ನಿಮ್ಮ ನಿಜವಾದ ಪ್ರತಿಸ್ಪರ್ಧಿ ಯಾರು?

ಬಿಜೆಪಿ ಅಭ್ಯರ್ಥಿಯೇ ಪ್ರತಿಸ್ಪರ್ಧಿ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ, 15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕ್ಷೇತ್ರದಲ್ಲಿ ಡ್ರಗ್ಸ್ ಹಾಗೂ ಅಕ್ರಮ ಚಟುವಟಿಕೆಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ಜನರಲ್ಲಿ ಆಕ್ರೋಶವಿದೆ. ನನ್ನ ಗೆಲುವು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT