ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview | ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಸಂದರ್ಶನ

Published 2 ಮೇ 2023, 3:16 IST
Last Updated 2 ಮೇ 2023, 3:16 IST
ಅಕ್ಷರ ಗಾತ್ರ

ಬಿ.ಎಸ್‌. ಸುರೇಶ್‌ (ಭೈರತಿ)– ಕಾಂಗ್ರೆಸ್‌

‘ನುಡಿದಂತೆ ನಡೆದಿದ್ದೇನೆ. ಮತ್ತೆ ಜನಾಶೀರ್ವಾದ ಖಚಿತ’

* ಶಾಸಕರಾಗಿ ನಿಮ್ಮ ಸಾಧನೆಗಳನ್ನು ಪಟ್ಟಿ ಮಾಡಬಹುದೇ?

ಶಾಸಕ ನಿಧಿಯ ಅನುದಾನಕ್ಕಿಂತಲೂ ನನ್ನ ಸ್ವಂತ ಹಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕೊಳಗೇರಿ ಪ್ರದೇಶದ ಜನರಿಗಾಗಿ ₹ 60 ಲಕ್ಷ ಧನಸಹಾಯ, ₹ 1 ಕೋಟಿ ವೆಚ್ಚದಲ್ಲಿ ಕೋವಿಡ್‌ ಆಸ್ಪತ್ರೆ ನಿರ್ಮಾಣ, ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ₹ 3 ಲಕ್ಷ ವೆಚ್ಚದಲ್ಲಿ ಉಚಿತ ಡಯಾಲಿಸಿಸ್‌, ಉಚಿತ ಶಸ್ತ್ರಚಿಕಿತ್ಸೆ, ₹ 2 ಲಕ್ಷ ರೇಷನ್‌ ಕಿಟ್‌, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹ 20 ಸಾವಿರ ಧನ ಸಹಾಯ, ಅಂಗನವಾಡಿ ಕೇಂದ್ರಗಳಿಗೆ ಪೀಠೋಪಕರಣ, ಉಚಿತ ಅಂಬುಲೆನ್ಸ್‌ ಸೇವೆ, ಅಂಗವಿಕಲರಿಗೆ ತಳ್ಳುವ ಗಾಡಿ, ಎರಡು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಎಂಜಿನಿಯರಿಂಗ್‌, ವೈದ್ಯಕೀಯ ಓದುವ ವಿದ್ಯಾರ್ಥಿಗಳ ಶುಲ್ಕ, ಇಸ್ಕಾನ್‌ ಜೊತೆ ಸೇರಿ ಉಚಿತ ಊಟದ ವ್ಯವಸ್ಥೆ ಈ ಎಲ್ಲ ಕೆಲಸಗಳಿಗೆ ಸ್ವಂತ ಹಣ ಬಳಸಿದ್ದೇನೆ. 30 ವರ್ಷಗಳ ಹಿಂದಿನ ಪೈಪ್‌ಲೈನ್‌ ಬದಲಾವಣೆ, ಏಳು ಸಮುದಾಯ ಭವನಗಳ ನಿರ್ಮಾಣ, 35 ಬಸ್‌ ನಿಲ್ದಾಣಗಳ ನವೀಕರಣ, ‌ದೇವಸ್ಥಾನ, ಮಸೀದಿ, ಚರ್ಚ್‌ಗಳ ಜೀರ್ಣೊದ್ಧಾರ ಹೀಗೆ ಹಲವು ಕೆಲಸಗಳು ನಿಮಗೇ ಕಣ್ಣಿಗೆ ಕಾಣುತ್ತದೆ.

* ಮತ್ತೊಮ್ಮೆ ಜನ ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕು?

ಹೆಬ್ಬಾಳವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಧ್ಯೇಯ. ಅದಕ್ಕೆಂದೇ ನನ್ನದೇ ಆದ ‘2023–28 ಪ್ರಣಾಳಿಕೆ’ ಮುಂದಿಟ್ಟಿದ್ದೇನೆ. ಅದರಲ್ಲಿ 200 ಹಾಸಿಗೆಗಳ ಸುಜ್ಜಿತ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕಾವೇರಿ ನೀರು ಪೂರೈಕೆಗೆ ನೀರ ಸಂಗ್ರಹಣಾ ಟ್ಯಾಂಕ್‌, 1ರಿಂದ 10ನೇ ತರಗತಿವರೆಗಿನ 1,000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಪ್ರತಿ ಮನೆಗೆ ಪೈಪ್‌ಲೈನ್‌ ಮೂಲಕ ನೀರು, ಸ್ಲಂನಲ್ಲಿ 15 ವರ್ಷಗಳಿಂದ ಇರುವವರಿಗೆ ಹಕ್ಕುಪತ್ರ, 1,000 ಮಹಿಳೆಯರಿಗೆ ಟೈಲರಿಂಗ್‌ ತರಬೇತಿ, ಜೊತೆಗೆ ಮೆಷಿನ್‌ ವಿತರಣೆ, ಸ್ತ್ರೀ ಶಕ್ತಿ ಗುಂಪುಗಳಿಗೆ ಸಹಾಯಧನ, ಕ್ಷೇತ್ರಕ್ಕೊಂದು ಎಂಜಿನಿಯರಿಂಗ್‌ ಕಾಲೇಜು, ಬಡಜನರಿಗೆ ಉಚಿತ ವಿವಾಹ, ಶಸ್ತ್ರಚಿಕಿತ್ಸೆಗೆ ₹ 50 ಸಾವಿರ ಸಹಾಯಧನ ಹೀಗೆ ಹಲವು ಭರವಸೆಗಳನ್ನು ನೀಡಿದ್ದೇನೆ.

* ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ತಂದಿದ್ದೀರಿ ಎಂಬ ಮಾತಿದೆಯಲ್ಲ?

ನನ್ನ ಕ್ಷೇತ್ರಕ್ಕೆ ಇಡೀ 5 ವರ್ಷದಲ್ಲಿ ಬಂದಿರುವುದು ಕೇವಲ ₹ 300 ಕೋಟಿ. ಆದರೆ, ಈ ಬಗ್ಗೆ ಗೊತ್ತಿಲ್ಲದವರು ಏನೇನೊ ಆರೋಪ ಮಾಡುತ್ತಾರೆ. ಸರ್ಕಾರ ಕೊಟ್ಟಿದ್ದಕ್ಕಿಂತ ಹೆಚ್ಚು ಸ್ವಂತ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರಾಜಕೀಯದಿಂದ ಹಣ ಮಾಡುವ ಉದ್ದೇಶ ನನಗಿಲ್ಲ. ನನ್ನದೇ ವ್ಯವಹಾರ, ದಾರಿಗಳಿವೆ. ಜನರ ಸೇವೆ ಮಾಡಬೇಕು ಅಷ್ಟೆ.

 * ನಿಮ್ಮ ಪ್ರತಿಸ್ಪರ್ಧಿ ಬಗ್ಗೆ ಏನು ಹೇಳುತ್ತೀರಿ?

ಬಿಜೆಪಿ ಅಭ್ಯರ್ಥಿ ವಿರುದ್ಧ ನಾನು ಹೇಳುವಂತದ್ದೇನೂ ಇಲ್ಲ. ತಮ್ಮ ಮೇಲಿನ ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಅವರೇ ತಮ್ಮ ಅಫಿದಾವಿತ್‌ನಲ್ಲಿಯೇ ಘೋಷಿಸಿಕೊಂಡಿದ್ದಾರೆ. ಅಂಥವರು ರಾಜಕಾರಣದಲ್ಲಿ ಇರಲು ಯಾವುದೇ ನೈತಿಕತೆ ಇಲ್ಲ. ಆದರೆ, ಅವರ ವಿರುದ್ಧ ಸ್ಪರ್ಧಿಸುವುದು ಅನಿವಾರ್ಯವಾಗಿದೆ. ನಾನು 80 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ. ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸಗಳು ನನ್ನ ಕೈ ಹಿಡಿಯುವುದು ಖಚಿತ.

* ಸಯ್ಯದ್‌ ಮೊಹಿದ್ ಅಲ್ತಾಫ್‌ (ಜೆಡಿಎಸ್‌)

‘ಜನ ಬದಲಾವಣೆ ಬಯಸಿದ್ದಾರೆ. ಗೆಲುವಿನ ವಿಶ್ವಾಸವಿದೆ’

* ನಿಮ್ಮ ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

ನಾವು (ಜೆಡಿಎಸ್‌) ಬಹಿರಂಗ ಸಭೆ ಸಮಾವೇಶಗಳ ಮೂಲಕ ಮತದಾರರನ್ನು ಸಂಪರ್ಕಿಸುವ ಬದಲು ಪ್ರತಿ ಮನೆಗೆ ಭೇಟಿ ನೀಡುತ್ತಿದ್ದೇವೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಬಿಜೆಪಿ ಸರ್ಕಾರ ಜನರ ನಿರೀಕ್ಷೆಯಂತೆ ಆಡಳಿತ ನೀಡಿಲ್ಲ. ಈಗ ಭರವಸೆಗಳನ್ನು ನೀಡಿ ಮತ್ತೆ ಅಧಿಕಾರ ನೀಡುವಂತೆ ಮನವಿ ಮಾಡುತ್ತಿವೆ. ಅವರ ಅಧಿಕಾರದ ಕಾರ್ಯವೈಖರಿಯನ್ನು ಜನ ನೋಡಿದ್ದಾರಲ್ಲವೇ. ನಮಗೂ ಪೂರ್ಣಾವಧಿ ಅಧಿಕಾರ ನಡೆಸಲು ಒಮ್ಮೆ ಅವಕಾಶ ಕೊಟ್ಟು ನೋಡಿ ಎಂದು ಮತಬಿಕ್ಷೆ ಕೇಳುತ್ತಿದ್ದೇವೆ.

* ನಿಮ್ಮ ಆದ್ಯತೆಗಳೇನು?

ಜನರಿಗೆ ಮುಖ್ಯವಾಗಿ ಬೇಕಿರುವುದು ಶಿಕ್ಷಣ ಮತ್ತು ಆರೋಗ್ಯ. ಹೀಗಾಗಿ ಈ ಎರಡು ಕ್ಷೇತ್ರಗಳ ಕಡೆಗೆ ಹೆಚ್ಚು ಒತ್ತು ನೀಡುತ್ತೇನೆ. ಪಕ್ಷದ ‘ಪಂಚ ರತ್ನ’ ಯೋಜನೆಗಳ ಘೋಷಣೆಗಳಲ್ಲಿಯೇ ಎಚ್‌.ಡಿ. ಕುಮಾರಸ್ವಾಮಿ ಈ ವಿಷಯವನ್ನು ಹೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದ ಐದು ವರ್ಷಗಳ ಅವಧಿಯಲ್ಲಿ ಪಂಚರತ್ನ ಯೋಜನೆಗಳನ್ನು ಪೂರ್ಣಗೊಳಿಸುವ ವಿಶ್ವಾಸವಿದೆ.

* ಪ್ರತಿಸ್ಪರ್ಧಿ ಅಭ್ಯರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಎರಡನೇ ಬಾರಿ ಆಯ್ಕೆಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿದ್ದಾರೆ. ಅವರ ಪಕ್ಷ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಸಾಧುವಲ್ಲ. ಬಿಜೆಪಿ ಅಭ್ಯರ್ಥಿಯ ವಿರುದ್ಧ ಹಲವು ಪ್ರಕರಣಗಳಿವೆ. ಮತದಾರರನ್ನು ಓಲೈಸಲು ಕಾಂಗ್ರೆಸ್‌–ಬಿಜೆಪಿ ನಾನಾ ದಾರಿಗಳನ್ನು ಕಂಡುಕೊಂಡಿದೆ. ಆದರೆ ನನ್ನ ಪಕ್ಷ ಮತ್ತು ನನ್ನ ದಾರಿ ನೇರ.

* ಕಾಂಗ್ರೆಸ್‌ ಬಿಜೆಪಿ ಅಭ್ಯರ್ಥಿಗಳ ಅಬ್ಬರದ ಮಧ್ಯೆ ಗೆಲುವಿನ ಕನಸು ಕಾಣುತ್ತಿದ್ದೀರಲ್ವಾ?

ನಿಜ. ಕಾಂಗ್ರೆಸ್‌ ಬಿಜೆಪಿ ಅಭ್ಯರ್ಥಿಗಳು ಅಬ್ಬರ ಪ್ರಚಾರ ನಡೆಸುತ್ತಿದ್ದಾರೆ. ಆದರೆ ನಾನು ವಿದ್ಯಾವಂತ. ಸುಪ್ರೀಂ ಕೋರ್ಟ್‌ ವಕೀಲನಾಗಿರುವ ನಾನು ಜನಸೇವೆ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದೇನೆ. ಬದಲಾವಣೆ ಬಯಸುತ್ತಿರುವ ಜನರು ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸ ನನಗಿದೆ.

ಜಗದೀಶ ಕಟ್ಟಾ ಕೆ.ಎಸ್‌ (ಬಿಜೆಪಿ)

‘ತಂದೆಯ ಹೆಸರು ಮೋದಿ ಅಲೆ ನನಗೆ ಶಕ್ತಿ

* ಮೊದಲ ಬಾರಿ ಕಣದಲ್ಲಿದ್ದೀರಿ. ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

ಕ್ಷೇತ್ರದಲ್ಲಿ 60 ಸಾವಿರದಿಂದ 70 ಸಾವಿರ ಮನೆಗಳಿವೆ. ಈಗಾಗಲೇ ಶೇ 70ರಷ್ಟು ಮನೆಗಳನ್ನು ನಾನು ನೇರವಾಗಿ ತಲುಪಿದ್ದೇನೆ. ಪಕ್ಷದ ಮುಖಂಡರು ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು 2–3 ಬಾರಿ ಮನೆಗಳನ್ನು ಸಂಪರ್ಕಿಸಿದ್ದಾರೆ. ಹೀಗಾಗಿ ಪ್ರಚಾರದಲ್ಲಿ ಹಿಂದೆಬಿದ್ದಿಲ್ಲ. ಮುಂದಿರುವ ಕೆಲವು ದಿನಗಳಲ್ಲಿ ಇನ್ನಷ್ಟು ಬಿರುಸಿನಿಂದ ಕೆಲಸ ಮಾಡಬೇಕಿದೆ.

* ನಿಮ್ಮ ತಂದೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದರು. ಅವರು ಮಾಡಿದ್ದ ಕೆಲಸಗಳು ನೆರವಿಗೆ ಬರುವ ವಿಶ್ವಾಸ ಇದೆಯೇ?

ನೂರಕ್ಕೆ ನೂರಷ್ಟು ಆ ನಂಬಿಕೆ ನನಗಿದೆ. ತಂದೆಯವರು ಕ್ಷೇತ್ರದಲ್ಲಿ ಮನೆ ಮಗನಾಗಿ ಜನಪ್ರಿಯತೆ ಪಡೆದಿದ್ದರು. ನನ್ನನ್ನು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮಗ ಎಂದೇ ಗುರುತಿಸುತ್ತಾರೆ. ಅವರಿಂದಾಗಿಯೇ ನನ್ನ ಅಸ್ತಿತ್ವ. ಅದು ನನಗೆ ಶಕ್ತಿ. ಜೊತೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೂ ಕ್ಷೇತ್ರದಲ್ಲಿದೆ. ಹೀಗಾಗಿ ಗೆಲ್ಲುವ ವಿಶ್ವಾಸವಿದೆ.  

* ನಿಮ್ಮ ಮೇಲೆ ಹಲವು ಕ್ರಿಮಿನಲ್‌ ಪ್ರಕರಣಗಳಿವೆಯಲ್ಲ?

ಹಲವು ಪ್ರಕರಣಗಳಿವೆ ಎನ್ನುವುದೆಲ್ಲ ಸುಳ್ಳು. ನನ್ನ ಮೇಲಿರುವ ಐದು ಪ್ರಕರಣಗಳ ಬಗ್ಗೆ ನಾಮಪತ್ರದ ಜೊತೆ ಸಲ್ಲಿಸಿದ ಅಫಿದಾವಿತ್‌ನಲ್ಲಿಯೇ ಹೇಳಿದ್ದೇನೆ. ಆದರೆ ಕೆಲವರು ಅಪಪ್ರಚಾರ ಮಾಡುತ್ತಾರೆ.

* ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರತಿಸ್ಪರ್ಧಿಗಳು ಯಾರು ಎನ್ನುವುದು ನನಗೆ ಮುಖ್ಯವಲ್ಲ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದೂ ಇಲ್ಲ. ನನ್ನ ಬೆನ್ನ ಹಿಂದೆ ಪಕ್ಷ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ನಾಯಕರು ಇದ್ದಾರೆ. ಜೊತೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿರುವ ನನ್ನ ಪಕ್ಷದ ಅಭಿವೃದ್ಧಿ ಸಾಧನೆಗಳೂ ಜನರ ಮುಂದಿವೆ. ಅವು ನನ್ನನ್ನು ಗೆಲುವಿನ ದಡ ದಾಟಿಸಬಹುದೆಂಬ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT