ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣ ವಚನ, ಆತ್ಮೀಯ ಮಾತುಕತೆ: ಹೀಗಿತ್ತು ವಿಧಾನಸಭೆ ಅಧಿವೇಶನದ ಮೊದಲ ದಿನ...

Published 22 ಮೇ 2023, 12:19 IST
Last Updated 22 ಮೇ 2023, 12:19 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಕಣದಲ್ಲಿ ರೋಷಾವೇಶದಿಂದ ಹೋರಾಡಿ ಮೊದಲ ಬಾರಿ ಗೆದ್ದು ಬಂದವರ ಸಂಭ್ರಮ, ಹಿರಿಯರ ಸಂತೃಪ್ತಿ, ಹಳೆ ಮಿತ್ರರ ಸಮಾಗಮಕ್ಕೆ ವಿಧಾನಸಭೆ ಅಧಿವೇಶನದ ಮೊದಲ ದಿನ ವೇದಿಕೆಯಾಗಿತ್ತು. ನಗು, ಹಾಸ್ಯ, ಪರಸ್ಪರ ಕಾಲೆಳೆಯುವಿಕೆಯ ಮಧ್ಯೆಯೇ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯಿತು.

ಮೊದಲ ದಿನವೇ ವಿಧಾನಸಭೆಯಲ್ಲಿ ಶಾಸಕರು ತುಂಬಿ ತುಳುಕಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಮೊದಲ ಬಾರಿ ಆಯ್ಕೆ ಆದವರೂ ಸೇರಿ ಸಾಕಷ್ಟು ಶಾಸಕರು ಅಧಿವೇಶನಕ್ಕೆ ಬಂದಿರಲಿಲ್ಲ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇತರ ಎಲ್ಲರಿಗಿಂತಲೂ ಹೆಚ್ಚು ಚುರುಕಿನಿಂದ ಓಡಾಡುತ್ತಿದ್ದರು. ಆಡಳಿತ ಪಕ್ಷದ ಮೊಗಸಾಲೆಯಲ್ಲೂ ಓಡಾಡಿ ಸಿಕ್ಕಿದ ಶಾಸಕರನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ವಿರೋಧ ಪಕ್ಷದ ಸದಸ್ಯರು ಪ್ರವೇಶಿಸುವ ದ್ವಾರದ ಮೂಲಕ ಒಳಗೆ ಬಂದು ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದ ಬಿಜೆಪಿ–ಜೆಡಿಎಸ್‌ ಶಾಸಕರನ್ನು ಮಾತನಾಡಿಸಿದರು. ಕೆಲವರನ್ನು ಅಪ್ಪಿಕೊಂಡರೆ, ಇನ್ನು ಕೆಲವರ ಬೆನ್ನಿಗೆ ಗುದ್ದಿ ಆತ್ಮೀಯತೆ ಪ್ರದರ್ಶಿಸಿದರು.

ಕಾಂಗ್ರೆಸ್‌ ತನ್ವೀರ್‌ ಸೇಠ್ ಅವರು ಬಿಜೆಪಿಯ ಎಲ್ಲ ನಾಯಕರನ್ನು ಅವರು ಕೂತಿದ್ದ ಆಸನದ ಬಳಿಯೇ ಹೋಗಿ ಹಸ್ತಲಾಘವ ನೀಡಿ ಶುಭ ಕೋರಿದರು. ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್‌, ಗಣೇಶ್, ಅನಿಲ್‌ ಚಿಕ್ಕಮಾದು ಸೇರಿದಂತೆ ಹಲವರು ವಿರೋಧ ಪಕ್ಷದ ಸಾಲಿಗೆ ಬಂದು ಹಿರಿಯ ಶಾಸಕರನ್ನು ಮಾತನಾಡಿಸಿದರು. ಕೆಲವು ಹೊಸ ಮತ್ತು ಯುವ ಶಾಸಕರು ಹಿರಿಯ ಶಾಸಕರ ಕಾಲು ಮುಟ್ಟಿ ಆಶೀರ್ವಾದ ಕೋರಿದರು.

ಹಂಗಾಮಿ ಸಭಾಧ್ಯಕ್ಷ ಪೀಠಕ್ಕೆ ಬರುವವರೆಗೂ ಇದು ನಡೆದೇ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಆಸನದಲ್ಲೇ ಕುಳಿತು ಪರಸ್ಪರ ನಮಸ್ಕಾರ ವಿನಿಮಯ ಮಾಡಿಕೊಂಡರು. ಖಾನಾಪುರ ಶಾಸಕ ವಿಠಲರಾವ್ ಹಲಗೇಕರ ಅವರು ಕೇಸರಿ ಪೇಠ ಧರಿಸಿ ಬಂದಿದ್ದರೆ, ಬಸನಗೌಡ ಪಾಟೀಲ ಯತ್ನಾಳ ಕೇಸರಿ ವಾಸ್ಕೋಟ್‌ ಧರಿಸಿದ್ದರು. ಕಾಂಗ್ರೆಸ್‌ನ ಅಶೋಕ ಪಟ್ಟಣ್ಣ ನೀಲಿ ಬಣ್ಣದ ಶೇರ್ವಾನಿ ಧರಿಸಿ ಬಂದಿದ್ದರು. ಅಶೋಕ ಪಟ್ಟಣ ಅವರನ್ನು ಉದ್ದೇಶಿಸಿ ಬಸವರಾಜ ಬೊಮ್ಮಾಯಿ, ’ಬ್ಲೂ ಡೇ‘ ಎಂದು ಕಿಚಾಯಿಸಿದರು.

ಸದನದ ಅತ್ಯಂತ ಹಿರಿಯ ಶಾಸಕರೂ ಆಗಿರುವ ಆರ್‌.ವಿ.ದೇಶಪಾಂಡೆ ಹಂಗಾಮಿ ಸಭಾಧ್ಯಕ್ಷರಾಗಿ ಶಾಸಕರಿಗೆ ಪ್ರಮಾಣ ವಚನ ಬೋಧಿಸುವಂತೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿ ಹಿರಿಯರು ಮತ್ತು ಹೊಸಬರು ಬಂದಿದ್ದಾರೆ. ಎಲ್ಲರೂ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಬೇಕು. ನಾಡಿನ ಪ್ರಗತಿ ಮತ್ತು ವಿಶ್ವದಲ್ಲೇ ಕರ್ನಾಟಕ ಆದರ್ಶ, ಶಾಂತಿ, ಸಮೃದ್ಧಿ ಮತ್ತು ಪ್ರೀತಿ ವಿಶ್ವಾಸಗಳ ನಾಡು ಎಂಬ ಖ್ಯಾತಿ ಪಡೆಯುವ ನಿಟ್ಟಿನಲ್ಲಿ ರಾಜ್ಯವನ್ನು ಕಟ್ಟಬೇಕು ಎಂದು ಸಲಹೆ ನೀಡಿದರು.

ಆಡಳಿತ ಸಾಲಿನಲ್ಲಿದ್ದವರ ಮುಖ ಅರಳಿದ್ದರೆ, ವಿರೋಧಿ ಸಾಲಿನಲ್ಲಿದ್ದ ಬಹುತೇಕರು ಬೇಸರದ ಮೂಡ್‌ನಲ್ಲೇ ಇದ್ದರು. ಪರಸ್ಪರ ತಿಳಿ ಹಾಸ್ಯದ ಮೂಲಕ ಬೇಸರದ ಭಾವವೂ ತಿಳಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT