ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್‌ 2023| ರೈತರಿಗೆ ಬಡ್ಡಿರಹಿತ ಸಾಲ ₹5 ಲಕ್ಷಕ್ಕೆ ಏರಿಕೆ

ಸಣ್ಣ, ಅತಿ ಸಣ್ಣ ರೈತರಿಗೆ ಜೀವನ್‌ ಜ್ಯೋತಿ ವಿಮಾ ಯೋಜನೆ
Last Updated 18 ಫೆಬ್ರುವರಿ 2023, 2:07 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿಕರಿಗೆ ಬಜೆಟ್‌ನಲ್ಲಿ ಹಲವು ಆಕರ್ಷಕ ಕೊಡುಗೆ ನೀಡಲಾಗಿದೆ. ಸಾಲದ ಮಿತಿ ಏರಿಕೆ ಹಾಗೂ ‘ಭೂ ಸಿರಿ’ ಮತ್ತು ‘ಜೀವನ್‌ ಜ್ಯೋತಿ ವಿಮಾ ಯೋಜನೆ’ ಜಾರಿಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷವರೆಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. 30 ಲಕ್ಷಕ್ಕೂ ಅಧಿಕ ರೈತರಿಗೆ ₹25 ಸಾವಿರ ಕೋಟಿ ಸಾಲ ವಿತರಿಸಲು ಪ್ರಸ್ತಾಪಿಸಲಾಗಿದೆ.

56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ₹180 ಕೋಟಿ ವೆಚ್ಚದಲ್ಲಿ ‘ಜೀವನ್‌ ಜ್ಯೋತಿ ವಿಮಾ’ ಯೋಜನೆಯ ನೆರವಿನೊಂದಿಗೆ ಅವರ ಬದುಕಿಗೆ ಭದ್ರತೆ ಒದಗಿಸಲು ಪ್ರಸ್ತಾಪಿಸಲಾಗಿದೆ.

ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್‌ ಹಾರ್ವೆಸ್ಟರ್‌ ಗಳನ್ನು ಹಂತ ಹಂತವಾಗಿ ಒದಗಿಸಲು ಉದ್ದೇಶಿಸಲಾಗಿದೆ. 2023–24ನೇ ಸಾಲಿನಲ್ಲಿ 100 ಹೈಟೆಕ್‌ ಹಾರ್ವೆಸ್ಟರ್‌ಗಳಿಗೆ ತಲಾ ₹50 ಲಕ್ಷದಂತೆ ಈ ವರ್ಷ ₹50 ಕೋಟಿ ಒದಗಿಸಲು ಉದ್ದೇಶಿಸಲಾಗಿದೆ.

ಇಸ್ರೊ ಸಹಯೋಗದೊಂದಿಗೆ ಡಿಜಿಟಲ್‌ ಕೃಷಿಯಲ್ಲಿ ಜಿಯೋ–ಸ್ಪೇಷಿಯಲ್‌ ತಾಂತ್ರಿಕತೆ ಅಳವಡಿಸಲು ₹50 ಕೋಟಿ ವೆಚ್ಚದ ಹೊಸ ಯೋಜನೆ ರೂಪಿಸಲಾಗಿದೆ. ಉತ್ತಮ ರೈತ ಉತ್ಪಾದಕರ ಸಂಸ್ಥೆಗಳನ್ನು (ಎಫ್‌ಪಿಒ) ಪ್ರೋತ್ಸಾಹಿಸಲು ತಲಾ ₹10 ಲಕ್ಷವರೆಗಿನ ಬಂಡವಾಳಕ್ಕೆ ಬಡ್ಡಿ ಸಹಾಯಧನ ಒದಗಿಸಲಾಗುವುದು ಎಂದು ವಿವರಿಸಲಾಗಿದೆ.

ಕಿರುಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ‘ರೈತ ಸಿರಿ ಯೋಜನೆ’ ಅಡಿ ₹10 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ಪ್ರಕಟಿಸಲಾಗಿದೆ. ಜತೆಗೆ, ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ‘ಜಲನಿಧಿ’ ಎನ್ನುವ ಹೊಸ ಯೋಜನೆ ಜಾರಿಗೊಳಿಸುವುದಾಗಿ ಉಲ್ಲೇಖಿಸಲಾಗಿದೆ.

ಗ್ರಾಮ ಪಂಚಾಯಿತಿಗಳಿಗೆ ಅನುದಾನ ಹೆಚ್ಚಳ

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ₹20,494 ಕೋಟಿ ಅನುದಾನ ಮೀಸಲಿಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ನೀಡುವ ₹12 ಲಕ್ಷದಿಂದ ₹35 ಲಕ್ಷವರೆಗಿನ ಅನುದಾನವನ್ನು ₹24 ಲಕ್ಷದಿಂದ ₹60 ಲಕ್ಷವರೆಗೆ ಹೆಚ್ಚಿಸಲಾಗಿದೆ.

* ಗ್ರಾಮೀಣ ಪ್ರದೇಶದ ಮನೆಗಳಿಗೆ ನಲ್ಲಿಗಳ ಸಂಪರ್ಕ ಒದಗಿಸಲು ಜಲಜೀವನ್‌ ಮಿಷನ್‌ ಯೋಜನೆಗೆ ₹6,234 ಕೋಟಿ ಹಂಚಿಕೆ.

* ನರೇಗಾ ಯೋಜನೆಯಡಿ ₹1,800 ಕೋಟಿ ವೆಚ್ಚದಲ್ಲಿ 88 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಗುರಿ.

* ಗ್ರಾಮೀಣ ರಸ್ತೆ ಮತ್ತು ಜಮೀನುಗಳನ್ನು ಸಂಪರ್ಕಿಸುವ ಐದು ಸಾವಿರ ಕಿ.ಮೀ. ರಸ್ತೆ ನಿರ್ಮಾಣಕ್ಕೆ ₹300 ಕೋಟಿ ಅನುದಾನ. ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ನರೇಗಾ, ಸ್ವಚ್ಛ ಭಾರತ್‌ ಮಿಷನ್‌ ಅಡಿ ₹4,190 ಕೋಟಿ ಅನುದಾನ.

* ಎರಡು ಸಾವಿರ ಕೆರೆಗಳ ಅಭಿವೃದ್ಧಿಗೆ ₹200 ಕೋಟಿ ವೆಚ್ಚ.

* ಗ್ರಂಥಾಲಯಗಳಿಲ್ಲದ 330 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಸ್ಥಾಪನೆ. ಅಂಗವಿಕಲ ಮಕ್ಕಳಿಗಾಗಿ 1,000 ಗ್ರಾಮೀಣ ಗ್ರಂಥಾಲಯಗಳ ಉನ್ನತೀಕರಣಗೊಳಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT