ಬೆಂಗಳೂರು: ಕೋವಿಡ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಂಸದ ಡಾ.ಕೆ.ಸುಧಾಕರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಅವರು ತಾತ್ಕಾಲಿಕವಾಗಿ ಸ್ವಲ್ಪ ದಿನ ತಳ್ಳಬಹುದು. ಯಾವತ್ತಾದೂ ಒಂದು ದಿನ ಸುಧಾಕರ್ ಅವರ ಕುತ್ತಿಗೆಗೆ ಬಂದೇ ಬರುತ್ತದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ತಪ್ಪುಗಳು ಆಗಿವೆ. ₹500 ರ ಮುಖಗವುಸು ಯಾವ ಮೆಡಿಕಲ್ ಶಾಪ್‌ನಲ್ಲಿ ಸಿಗುತ್ತದೆಯೋ ಗೊತ್ತಿಲ್ಲ. ಕೋವಿಡ್‌ನಲ್ಲಿ ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಯಾವಾಗ ಶಿಕ್ಷೆ ಸಿಗುತ್ತದೆಯೋ ಗೊತ್ತಿಲ್ಲ. ಆದರೆ, ಕೋವಿಡ್ ಕಳ್ಳರಿಗೆ ಜನತಾ ನ್ಯಾಯಾಲಯ ಶಿಕ್ಷೆ ನೀಡಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಖಡಕ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಸಂಸತ್ ಚುನಾವಣೆಯಲ್ಲಿ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಗೆದ್ದಿದ್ದಾರೆ. ನಾನು ಚಿಕ್ಕಬಳ್ಳಾಪುರದಲ್ಲಿ ಅವರ ಮತಗಳಿಕೆ ಪ್ರಮಾಣ ಕಡಿಮೆ ಮಾಡಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್‌ನವರು ಸತ್ಯ ಹರಿಶ್ಚಂದ್ರರಲ್ಲ ಎಂಬ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 2013 ರಲ್ಲಿ ಆಂಜಿನಪ್ಪ ಅವರಿಗೆ ಟಿಕೆಟ್ ತಪ್ಪಿಸಿ ತಮಗೇ ಟಿಕೆಟ್ ತಂದರು. ಆಗ ಇವರು ಹರಿಶ್ಚಂದ್ರರಾಗಿದ್ರಾ? ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಪತನಗೊಳಿಸುವಲ್ಲಿ ಸುಧಾಕರ್ ಪ್ರಮುಖ ಪಾತ್ರವಹಿಸಿದ್ದರು. ಆಗ ಬಾಂಬೆ ಬಾಯ್ಸ್ ಆಗಿದ್ದ ಇವರು ಸತ್ಯ ಹರಿಶ್ಚಂದ್ರರಾಗಿದ್ರಾ ಎಂದು ಪ್ರಶ್ನಿಸಿದರು.