ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ವಿಶ್ಲೇಷಣೆ | ಕುಗ್ಗಿದ ಸಂತೋಷ; ಬಿಎಸ್‌ವೈ ಮಂದಹಾಸ

2013ರ ರಾಜಕಾರಣ ಮತ್ತೆ ಮುನ್ನೆಲೆಗೆ: ವರಿಷ್ಠರಿಗೂ ಅನಿವಾರ್ಯವೇ?
Published 4 ಜುಲೈ 2023, 0:30 IST
Last Updated 4 ಜುಲೈ 2023, 0:30 IST
ಅಕ್ಷರ ಗಾತ್ರ

ವಯಸ್ಸಿನ ಕಾರಣ ನೀಡಿ ವರಿಷ್ಠರು ಉರುಳಿಸಿದ ದಾಳದಿಂದ ಮುಖ್ಯಮಂತ್ರಿ ಪಟ್ಟ ಕಳೆದುಕೊಂಡು, ಬಿಜೆಪಿಯ ‘ಹಿರಿಯರ’ ಪಡಸಾಲೆ ಸೇರಿದ್ದ ಬಿ.ಎಸ್‌. ಯಡಿಯೂರಪ್ಪ, ಪಕ್ಷವನ್ನು ಮತ್ತೆ ಬಿಗಿ ಮುಷ್ಟಿಗೆ ತೆಗೆದುಕೊಳ್ಳುವತ್ತ ದಾಂಗುಡಿ ಇಟ್ಟಿದ್ದಾರೆ.

ವಿಧಾನಸಭೆ ಚುನಾವಣೆಗೆ ಮುನ್ನ ಹೆಣೆದ ಎಲ್ಲ ತಂತ್ರಗಾರಿಕೆಗಳು ವಿಫಲಗೊಂಡು, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕೈಹಿಡಿಯದೇ ಹೀನಾಯ ಸೋಲುಕಂಡ ಬಿಜೆಪಿ ನಿಸ್ತೇಜಗೊಂಡಿದೆ. ಈ ಹೊತ್ತಿನಲ್ಲಿ ಸರ್ಕಾರದ ವಿರುದ್ಧದ ಸಮರಕ್ಕೆ ಉಮೇದಿನಿಂದ ಅಣಿಯಾಗುತ್ತಿರುವ ಯಡಿಯೂರಪ್ಪನವರ ಆಸರೆ, ಪಕ್ಷದ ವರಿಷ್ಠರಿಗೂ ಬೇಕಾದಂತಿದೆ. ‘ನಿಮ್ಮಿಂದ ಆಗುವುದಿಲ್ಲ’ ಎಂದು ದೂರ ತಳ್ಳಿದವರೇ, ಲೋಕಸಭೆ ಚುನಾವಣೆಯ ಗೆಲುವಿಗೆ ಯಡಿಯೂರಪ್ಪನವರ ಕೈಹಿಡಿದು ಗೋಗರೆವ ಪರಿಸ್ಥಿತಿಗೆ ತಲುಪಿದ್ದಾರೆ.

ಅಲ್ಲಿಗೆ, ದಶಕದ ಹಿಂದಿನ ರಾಜಕೀಯದ ಸ್ಥಿತಿಗೆ ಕರ್ನಾಟಕ ಬಿಜೆಪಿ ಮರಳಿದಂತಾಗಿದೆ. ಹಿರಿಯರು, ಜನಸಮೂಹವನ್ನು ಸೆಳೆಯಬಲ್ಲ ನಾಯಕರನ್ನೆಲ್ಲ ಹೊರಗಿಟ್ಟು, ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಜೋಡಿ ನಡೆಸಿದ್ದ ‘ಆಟ’ಕ್ಕೆ ತೆರೆಬಿದ್ದಂತಾಗಿದೆ. ಚುನಾವಣೆ ಸೋಲಿನ ಬಳಿಕ ತಮ್ಮ ಹಿತೈಷಿಗಳನ್ನು ಮುಂದೆ ಬಿಟ್ಟು, ತಮ್ಮ ವೈಫಲ್ಯವನ್ನು ಮುಚ್ಚಿಡಲು ‘ಹೊಂದಾಣಿಕೆ ರಾಜಕಾರಣ’ದ ಕೂಗೆಬ್ಬಿಸಿದ್ದ ಸಂತೋಷ್‌ ಬಣ ದುರ್ಬಲಗೊಂಡಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಲು ಆರಂಭಿಸಿವೆ.

2011ರಲ್ಲಿ ಯಡಿಯೂರಪ್ಪ ಅವಧಿ ಪೂರೈಸದೇ ಮುಖ್ಯಮಂತ್ರಿ ಸ್ಥಾನದಿಂದ ಇಳಿದಿದ್ದರು. 2013 ಚುನಾವಣೆಗೆ ಮುನ್ನ ತಮ್ಮ ಪಟಾಲಂ ಜತೆಗೆ ಪಕ್ಷದಿಂದ ಹೊರಬಿದ್ದು, ಕೆಜೆಪಿ ಕಟ್ಟಿದ್ದರು. ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಗಲೂ ಅಧಿಕಾರಕ್ಕೆ ಬಂದಿತ್ತು. ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಜಗದೀಶ ಶೆಟ್ಟರ್ ಇದ್ದರು. ಕೇವಲ ಆರು ಸ್ಥಾನಗಳನ್ನು ಹೊಂದಿದ್ದ ಕೆಜೆಪಿ ನಾಯಕ ಯಡಿಯೂರಪ್ಪ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹೋರಾಟವನ್ನು ನಡೆಸುತ್ತಲೇ ಇದ್ದರು.

ಮುನ್ನೆಲೆಗೆ ಯಡಿಯೂರಪ್ಪ: ಯಡಿಯೂರಪ್ಪನವರನ್ನು ಹಿಂಬದಿಗೆ ತಳ್ಳುವಲ್ಲಿ ಪ್ರಮುಖ ಪಾತ್ರವನ್ನು ಕೆಲವರು ನಿರ್ವಹಿಸಿದ್ದರೂ ಅದರ ಪೂರ್ಣಭಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಬೇಕು. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ, ಪಕ್ಷವನ್ನು ಪುನರ್ ಸಂಘಟಿಸಲು ರಾಜ್ಯ ಪ್ರವಾಸ ಮಾಡುವುದಾಗಿ ಪದೇ ಪದೇ ಅವರು ಹೇಳುತ್ತಿದ್ದರೂ ಅವಕಾಶವನ್ನೇ ಕೊಟ್ಟಿರಲಿಲ್ಲ. ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾದಾಗ ಪಕ್ಷದ ಸಂಸದೀಯ ಮಂಡಳಿಯಲ್ಲಿ ಸದಸ್ಯ ಸ್ಥಾನವನ್ನು ಕೊಟ್ಟರು. ಹಾಗಿದ್ದರೂ ಅವರು ಹೇಳಿದವರಿಗೆಲ್ಲ ಟಿಕೆಟ್ ಸಿಗಲಿಲ್ಲ.

ಯಡಿಯೂರಪ್ಪಗೆ ಮತ್ತೆ ಪಕ್ಷದಲ್ಲಿ ಆದ್ಯತೆ ಸಿಗಲಾರಂಭಿಸಿದೆ. ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರಕ್ಕೆ ಜುಲೈ 2ರಂದು ಅಮಿತ್ ಶಾ, ಜೆ.ಪಿ. ನಡ್ಡಾ ನಡೆಸಿದ ಸಭೆಗೆ ಸಂತೋಷ್, ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ ಯಾರನ್ನೂ ಕರೆದಿರಲಿಲ್ಲ. ಆಮಂತ್ರಣವಿದ್ದುದು ಯಡಿಯೂರಪ್ಪ ಅವರಿಗೆ ಮಾತ್ರ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ‘ಎಲ್ಲ ಗ್ಯಾರಂಟಿಗಳನ್ನು ಅವರು ಈಡೇರಿಸುತ್ತಾರೆ’ ಎಂದು ಯಡಿಯೂರಪ್ಪ ಹೇಳಿದ್ದರು. ಪಕ್ಷ ತನ್ನ ಹಿಡಿತಕ್ಕೆ ಮರಳುತ್ತಿದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ ವರಸೆ ಬದಲಿಸಿ, ‘ಅಕ್ಕಿಯಲ್ಲಿ ಒಂದು ಗ್ರಾಂ ಕಡಿಮೆಯಾದರೂ ಸಹಿಸುವುದಿಲ್ಲ. ಸದನದ ಒಳಗೂ–ಹೊರಗೂ ಹೋರಾಟ ನಡೆಸುತ್ತೇವೆ’ ಎನ್ನುತ್ತಾ ಅಖಾಡಕ್ಕೆ ಧುಮುಕಿದ್ದಾರೆ. ಇದನ್ನು ನೋಡಿದರೆ, ಮತ್ತೆ ಯಡಿಯೂರಪ್ಪ ಪ್ರವರ್ಧಮಾನಕ್ಕೆ ಬಂದಂತೆ ತೋರುತ್ತದೆ.

ಶೋಭಾ ಕರಂದ್ಲಾಜೆಗೆ ರಾಜ್ಯಾಧ್ಯಕ್ಷೆ ಪಟ್ಟ?

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇಮಕವಾಗುವ ಸಾಧ್ಯತೆ ಇದೆ. ವಿರೋಧ ಪಕ್ಷದ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಸಿಕ್ಕಿದರೆ, ಅಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ನೀಡಬೇಕಾಗುತ್ತದೆ. ಆ ಹೊತ್ತಿನಲ್ಲಿ, ತಮ್ಮ ಆಯ್ಕೆ ಹಿಂದೊಮ್ಮೆ ನಿಕಟವರ್ತಿಯಾಗಿದ್ದ ಶೋಭಾ ಕರಂದ್ಲಾಜೆ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ.

ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೋಭಾ ಅವರು ಸರ್ಕಾರದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ್ದರು. ಅವರು ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಯಡಿಯೂರಪ್ಪ ಅವರ ಕುಟುಂಬದವರು ಮಧ್ಯ ಪ್ರವೇಶಿಸಿ, ಶೋಭಾ ಅವರನ್ನು ಸರ್ಕಾರದಿಂದ ದೂರ ಇರಿಸಿದ್ದರು.

ಇತ್ತೀಚೆಗೆ ಯಡಿಯೂರಪ್ಪ, ವಿಜಯೇಂದ್ರ ಮತ್ತು ಶೋಭಾ ಮಧ್ಯೆ ಸಂಧಾನ ನಡೆದಿದ್ದು, ಎಲ್ಲರೂ ಒಟ್ಟಾಗಿ ಹೋಗುವ ನಿರ್ಧಾರಕ್ಕೆ ಬರಲಾಗಿದೆ. ಸಂತೋಷ್‌ ಬಣ ನಿತ್ರಾಣಗೊಳ್ಳುತ್ತಿದ್ದಂತೆ ಯಡಿಯೂರಪ್ಪ ಸಕ್ರಿಯರಾಗಲು ಇದೂ ಒಂದು ಕಾರಣ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT