ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಿವಾರ್ಡ್’ನಲ್ಲಿ ಜಲಾನಯನ ಪ್ರದೇಶ ಪುನಶ್ಚೇತನ: ಚಲುವರಾಯಸ್ವಾಮಿ

Published 26 ಜೂನ್ 2023, 16:01 IST
Last Updated 26 ಜೂನ್ 2023, 16:01 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಜಲಾನಯನ ಪ್ರದೇಶದ ಪುನಶ್ಚೇತನಕ್ಕೆ ₹ 600 ಕೋಟಿಯ ನೆರವು ನೀಡಲು ವಿಶ್ವಬ್ಯಾಂಕ್ ಈಗಾಗಲೇ ಸಮ್ಮತಿಸಿದೆ. ಐದು ವರ್ಷಗಳ ‘ರಿವಾರ್ಡ್’ (ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ) ಮೂಲಕ ಜಲಾನಯನ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

‘ರಿವಾರ್ಡ್’ ಯೋಜನೆ ಕುರಿತಂತೆ ವಿಶ್ವ ಬ್ಯಾಂಕ್ ಅಧಿಕಾರಿಗಳ ನಿಯೋಗದ ಜೊತೆಗೆ ಸೋಮವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ರಾಜಸ್ಥಾನ ಹೊರತುಪಡಿಸಿದರೆ, ಕರ್ನಾಟಕದಲ್ಲಿ ಅತೀ ಹೆಚ್ಚು ಒಣ ಭೂಮಿಯಿದೆ. ವಿಶ್ವ ಬ್ಯಾಂಕಿನ ಅಧಿಕಾರಿಗಳ ನಿಯೋಗ ಹಲವು ಸಲಹೆಗಳನ್ನು ನೀಡಿದೆ. ಅದನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದ್ದೇವೆ’ ಎಂದರು.

‘ವಿಶ್ವ ಬ್ಯಾಂಕಿನ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಜಾನ್ ರೂಮ್ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗ ರಾಜ್ಯಕ್ಕೆ ಭೇಟಿ ನೀಡಿತ್ತು. ಜೂನ್ ಅಂತ್ಯದವರೆಗೆ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿಶ್ವ ಬ್ಯಾಂಕ್ ಅನುದಾನಿತ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ರಾಜ್ಯ ಸರ್ಕಾರದ ಜೊತೆ ಸೇರಿ ವಿವಿಧ ವಲಯಗಳನ್ನು ಬಲಪಡಿಸುವ ಕುರಿತು ಚರ್ಚಿಸಲು ತಂಡ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದೆ’ ಎಂದು ಸಚಿವರು ತಿಳಿಸಿದರು.

ವಾಡಿಕೆಗಿಂತ ಕಡಿಮೆ ಮಳೆ:‌ ವಾಡಿಕೆ ಪ್ರಕಾರ, ಇಲ್ಲಿಯವರೆಗೆ 167 ಮಿಲಿ ಮೀಟರ್‌ ಮಳೆ ಬರಬೇಕಾಗಿತ್ತು. ಆದರೆ, 66 ಮಿಲಿ ಮೀಟರ್‌ ಮಳೆಯಾಗಿದೆ. ಅಂದರೆ, ಶೇ 58ರಷ್ಟು ಕೊರತೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದು, ಈವರೆಗೆ 10.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ 82ರಷ್ಟು ಕಡಿಮೆ ಬಿತ್ತನೆಯಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.

‘ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಂಗಾರು ಇನ್ನೂ ಮುಗಿದಿಲ್ಲ. ಕಾಂಗ್ರೆಸ್ ಅಧಿಕಾರ ಬಂದಾಗ ಬರಗಾಲ ಬಂದಿದೆ. ಬಿಜೆಪಿ, ಜೆಡಿಎಸ್ ಬಂದಾಗ ಬರಗಾಲ ಬಂದಿದೆ ಎನ್ನುವುದು ಮುಖ್ಯ ಅಲ್ಲ. ಮಳೆ ಹೆಚ್ಚು ಬಂದರೂ ಕಷ್ಟ, ಕಡಿಮೆ ಬಂದರು ಕಷ್ಟ’ ಎಂದರು.

‘ಹವಾಮಾನ ವರದಿ ಪ್ರಕಾರ 2–3 ದಿನಗಳಲ್ಲಿ ಮಳೆಯಾಗುವ ಸಾಧ್ಯತೆಗಳಿಗೆ. ತಜ್ಞರ ಪ್ರಕಾರ ಜುಲೈ5ರವರೆಗೆ ಮಳೆಗೆ ಕಾಯಬಹುದು. ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ. ಮಳೆ ಬಂದರೆ ಬಿತ್ತನೆಗೆ ನಾವು ಸಿದ್ಧರಾಗಿದ್ದೇವೆ. ಮಳೆ ಬಾರದೇ ಇದ್ದರೆ ಏನೂ ಮಾಡಲು ಆಗಲ್ಲ’ ಎಂದೂ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT