ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌: ಸುಧಾಮ್‌ ದಾಸ್‌ ಆಯ್ಕೆಗೆ ತೀವ್ರ ವಿರೋಧ?

Published 26 ಜೂನ್ 2023, 0:48 IST
Last Updated 26 ಜೂನ್ 2023, 0:48 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ಗೆ ಮನ್ಸೂರ್ ಅಲಿ ಖಾನ್, ಎಂ.ಆರ್‌. ಸೀತಾರಾಮ್ ಮತ್ತು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿದ್ದ ಎಚ್‌.ಪಿ. ಸುಧಾಮ್ ದಾಸ್ ಅವರನ್ನು ನಾಮನಿರ್ದೇಶನ ಮಾಡಲು ಕಾಂಗ್ರೆಸ್‌ ಮುಂದಾಗಿರುವ ಬೆನ್ನಲ್ಲೆ, ಸುಧಾಮ್ ದಾಸ್ ಅವರ ಆಯ್ಕೆಗೆ ಪಕ್ಷದ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಅಲ್ಪಸಂಖ್ಯಾತ ಕೋಟಾದಿಂದ ಮನ್ಸೂರ್‌ ಅಲಿ ಖಾನ್‌, ಹಿಂದುಳಿದ ವರ್ಗಗಳ ಕೋಟಾದಿಂದ ಎಂ.ಆರ್‌. ಸೀತಾರಾಮ್‌, ಪರಿಶಿಷ್ಟ ಜಾತಿ ಎಡಗೈ ಬಣದಿಂದ ಸುಧಾಮ್ ದಾಸ್ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್‌ ಬಹುತೇಕ ಅಂತಿಮಗೊಳಿಸಿದೆ. ಆದರೆ, ಸುಧಾಮ್ ದಾಸ್ ಅವರನ್ನು ನಾಮನಿರ್ದೇಶನ ಮಾಡಬಾರದೆಂದು ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಎಡಗೈ ಬಣದ ಪ್ರಮುಖ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

‘ಪರಿಶಿಷ್ಟ ಸಮುದಾಯಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸುಧಾಮ್‌ ದಾಸ್ ಅವರು ಹೇಳಿಕೊಳ್ಳುವಂಥ ಯಾವುದೇ ಕೊಡುಗೆ ನೀಡಿಲ್ಲ. ಹೀಗಾಗಿ ಅವರನ್ನು ನೇಮಕ ಮಾಡಬಾರದು’ ಎಂದು ದಲಿತ ಎಡ ಸಮುದಾಯದ ಸಚಿವರು, ಶಾಸಕರು, ಮಾಜಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಸುಧಾಮ್‌ ದಾಸ್ ಅವರ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿರುವ ಸಚಿವರಾದ ಕೆ.ಎಚ್. ಮುನಿಯಪ್ಪ,‌ ಆರ್.ಬಿ. ತಿಮ್ಮಾಪುರ, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ ಅವರು ತಮ್ಮ ಅಭಿಪ್ರಾಯ ನೀಡಿದ್ದು, ಈ ಎಲ್ಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT