ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಬ್‌ಜಿ ಇಂಡಿಯಾ’ ನಿಯಂತ್ರಣಕ್ಕೆ ಸಿದ್ಧತೆ; ಹೊಸ ಅವತಾರದಲ್ಲಿ ಗೇಮ್ ಬಿಡುಗಡೆ

ಹೆಸರು ಬದಲಿಸಿ ಹೊಸ ಅವತಾರದಲ್ಲಿ ಗೇಮ್ ಬಿಡುಗಡೆ
Last Updated 3 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ನಿಷೇಧಿಸಲಾಗಿದ್ದ ‘ಪಬ್‌ಜಿ’ ಆನ್‌ಲೈನ್‌ ಗೇಮ್‌, ಹೊಸ ಅವತಾರದಲ್ಲಿ ‘ಪಬ್‌ಜಿ ಇಂಡಿಯಾ’ ಹೆಸರಿನಲ್ಲಿ ಭಾರತಕ್ಕೆ ಲಗ್ಗೆ ಇಟ್ಟಿದೆ. ಚಾಲ್ತಿಯಲ್ಲಿರುವ ಕಾನೂನು ಉಲ್ಲಂಘಿಸುತ್ತಿರುವ ಆರೋಪ ಎದುರಿಸುತ್ತಿರುವ ಗೇಮ್‌ಗೆ ರಾಜ್ಯದಲ್ಲಿ ನಿಯಂತ್ರಣ ಹೇರಲು ಗೃಹ ಇಲಾಖೆ ಸಿದ್ಧತೆ ಆರಂಭಿಸಿದೆ.

ಕೆಲ ತಿಂಗಳ ಹಿಂದಷ್ಟೇ ಚೀನಾದ 118 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಭಾರತದಲ್ಲಿ ಕೋಟ್ಯಂತರ ಬಳಕೆದಾರರನ್ನು ಹೊಂದಿದ್ದ ಆ್ಯಪ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಇದಕ್ಕೆ ಪರಿಹಾರ ಕಂಡುಕೊಂಡಿರುವ ಕೆಲ ಗೇಮ್‌ ಆ್ಯಪ್‌ ಕಂಪನಿಗಳು, ‘ಇಂಡಿಯಾ’ ಹೆಸರಿನಲ್ಲಿ ಕಂಪನಿ ನೋಂದಣಿ ಮಾಡಿಸಿಕೊಂಡು ದೇಶದೊಳಗೆ ಪುನಃ ಪ್ರವೇಶಿಸಿವೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮನ್ನಣೆ: ಕೇಂದ್ರ ಸರ್ಕಾರದ ನಿಷೇಧವಿದ್ದರೂ ಪುನಃ ಕಾರ್ಯಾಚರಣೆ ಆರಂಭಿಸಿರುವ ‘ಪಬ್‌ಜಿ ಇಂಡಿಯಾ’ ಆನ್‌ಲೈನ್ ಗೇಮ್‌ ಕಂಪನಿ ವಿರುದ್ಧ ವಕೀಲ ಅನಿಲ್ ಸ್ಟೇವೆನಸನ್ ಜನಗಮ್ ಎಂಬುವರು ತೆಲಂಗಾಣ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

ಅರ್ಜಿ ಮನ್ನಿಸಿರುವ ಹೈಕೋರ್ಟ್, ಗೇಮ್‌ ನಿರ್ವಹಣೆ ಮಾಡುತ್ತಿರುವ ‘ಪಬ್‌ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿ ಹಾಗೂ ಗೇಮ್ ಅಭಿವೃದ್ಧಿಪಡಿಸಿರುವ ‘ಕ್ರಾಫ್ಟೊನ್’ ಕಂಪನಿಗೆ ನೋಟಿಸ್ ನೀಡಿದೆ. ಆ್ಯಪ್‌ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಕೇಂದ್ರ ಸರ್ಕಾರವನ್ನೂ ಅರ್ಜಿಯಲ್ಲಿ ಎದುರಾಳಿಯಾಗಿ ಉಲ್ಲೇಖಿಸಲಾಗಿದೆ.

‘ಪಬ್‌ಜಿ ಗೇಮ್, ಮಕ್ಕಳು–ಯುವಜನರಲ್ಲಿ ಹಿಂಸಾ ಮನೋಭಾವ ಹೆಚ್ಚಿಸುತ್ತಿದೆ. ಹಿಂಸೆಗೆ ಪ್ರಚೋದನೆ ಸಹ ನೀಡುತ್ತಿದೆ. ನಿಷೇಧವಿದ್ದರೂ ಹೆಸರು ಬದಲಾಯಿಸಿಕೊಂಡು ದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದೆ’ ಎಂಬ ಅಂಶವೂ ಅರ್ಜಿಯಲ್ಲಿತ್ತು.

ಕಾನೂನು ತಜ್ಞರ ಅಭಿಪ್ರಾಯ: ತೆಲಂಗಾಣ ಹೈಕೋರ್ಟ್‌ ಆದೇಶ ಪ್ರತಿ ತರಿಸಿಕೊಂಡಿರುವ ಗೃಹ ಇಲಾಖೆ, ರಾಜ್ಯದಲ್ಲೂ ಪಬ್‌ಜಿ ನಿಯಂತ್ರಣಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳಬಹುದೆಂಬುದನ್ನು ತಿಳಿಯಲು ಕಾನೂನು ತಜ್ಞರ ಅಭಿಪ್ರಾಯ ಕೇಳಿದೆ.

‘ಪಬ್‌ಜಿ ಗೇಮ್‌ನಿಂದಾಗಿ ಮಕ್ಕಳು ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದು, ಈ ಬಗ್ಗೆ ನಿಮ್ಹಾನ್ಸ್ ವೈದ್ಯರು ಅನೇಕ ವರದಿಗ
ಳನ್ನು ಸಲ್ಲಿಸಿದ್ದಾರೆ. ಹೀಗಾಗಿ, ಕರ್ನಾಟಕದಲ್ಲೂ ಈ ಗೇಮ್ ನಿಯಂತ್ರಣಕ್ಕೆ ಕ್ರಮ ಜರುಗಿಸಲು ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

'ಕಾನೂನಿನ ಚೌಕಟ್ಟಿನಡಿ ಷರತ್ತುಗಳನ್ನು ವಿಧಿಸುವುದು, ಗೇಮ್‌ ಆ್ಯಪ್‌ಗಳ ಕಂಪನಿಗಳ ವ್ಯವಹಾರದ ಮೇಲೆ ನಿಗಾ ವಹಿಸಲು ಸೂಕ್ತ ಪ್ರಾಧಿಕಾರ ರಚಿಸುವುದು ಸೇರಿದಂತೆ ಹಲವು ಮಾರ್ಗೋಪಾಯಗಳು ನಮ್ಮ ಮುಂದಿವೆ’ ಎಂದೂ ತಿಳಿಸಿದರು.

‘ಪ್ರತ್ಯೇಕ ಕಾಯ್ದೆಗೆ ಒತ್ತಾಯ’

‘ಆನ್‌ಲೈನ್‌ ಜೂಜು ಹಾಗೂ ಬೆಟ್ಟಿಂಗ್ ಮೇಲೆ ನಿಷೇಧ ವಿಧಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ಇತ್ತೀಚೆಗಷ್ಟೇ ತಿದ್ದುಪಡಿ ತರಲಾಗಿದೆ. ಪಬ್‌ಜಿ ಹಾಗೂ ಇತರೆ ಆ್ಯಪ್‌ಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವಂತೆಯೂ ಬೇಡಿಕೆಗಳಿವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT