ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ದೋಷಾರೋಪ ಪಟ್ಟಿ ಪ್ರಕಟಣೆಗೆ ಹೈಕೋರ್ಟ್‌ ನಿರ್ಬಂಧ

Published : 10 ಸೆಪ್ಟೆಂಬರ್ 2024, 12:28 IST
Last Updated : 10 ಸೆಪ್ಟೆಂಬರ್ 2024, 12:28 IST
ಫಾಲೋ ಮಾಡಿ
Comments

ಬೆಂಗಳೂರು: ‘ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿ ಮತ್ತು ಅದಕ್ಕೆ ಪೂರಕವಾದ ಇತರೆ ಯಾವುದೇ ಅಂಶಗಳನ್ನು ಮಾಧ್ಯಮಗಳು ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯೂ ಆದ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಮಧ್ಯಂತರ ಆದೇಶ ಹೊರಡಿಸಿತು.

‘ಅರ್ಜಿದಾರರು ಕೋರಿರುವ ಮನವಿಯು ಮೇಲ್ನೋಟಕ್ಕೆ ಸೂಕ್ತವಾಗಿದೆ. ಹೀಗಾಗಿ ಮಾಧ್ಯಮಗಳು, ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಯಲ್ಲಿನ ಗೋಪ್ಯ ಮಾಹಿತಿಯನ್ನು ಮುಂದಿನ ಆದೇಶದವರೆಗೆ ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು. ಈ ಆದೇಶವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪ್ರಕರಣದ ಪ್ರತಿವಾದಿಗಳಾಗಿರುವ 37ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳಿಗೆ ರವಾನಿಸಬೇಕು. ನ್ಯಾಯಾಲಯದ ಆದೇಶ ಮತ್ತು ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು‘ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ದರ್ಶನ್‌ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಈಗಾಗಲೇ ದರ್ಶನ್ ಅವರ ಪತ್ನಿ ಮಾಧ್ಯಮಗಳ ವಿರುದ್ಧ ಸಿವಿಲ್‌ ದಾವೆ ಹೂಡಿ ತಾತ್ಕಾಲಿಕ ಪ್ರತಿಬಂಧಕ ಆದೇಶ ಪಡೆದಿದ್ದಾರೆ. ಆದಾಗ್ಯೂ, ಮಾಧ್ಯಮಗಳು ದಿನದ 24 ತಾಸುಗಳಲ್ಲಿ ಕನಿಷ್ಠ 8 ತಾಸುಗಳನ್ನು ದರ್ಶನ್‌ಗೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡುವುದರಲ್ಲಿ ನಿರತವಾಗಿವೆ. ಇದು ದರ್ಶನ್ ಅವರ ಮೂಲಭೂತ ಹಕ್ಕಿಗೆ ಧಕ್ಕೆ ಉಂಟು ಮಾಡಿದೆ. ಆದ್ದರಿಂದ, ನಿರ್ಬಂಧ ವಿಧಿಸಬೇಕು’ ಎಂದು ಕೋರಿದ್ದರು. ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌ ವಾದ ಮಂಡಿಸಿದರು.

‘ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯಲ್ಲಿನ ಮಾಹಿತಿಗಳನ್ನು ಪ್ರಸಾರ, ಪ್ರಚಾರ, ಮುದ್ರಣ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ದರ್ಶನ್ ಈ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT