ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಎದೆ, ಮರ್ಮಾಂಗಕ್ಕೆ ಒದ್ದಿದ್ದ ದರ್ಶನ್

Published : 9 ಸೆಪ್ಟೆಂಬರ್ 2024, 16:16 IST
Last Updated : 9 ಸೆಪ್ಟೆಂಬರ್ 2024, 16:16 IST
ಫಾಲೋ ಮಾಡಿ
Comments

ಬೆಂಗಳೂರು: ‘ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಸ್ವಾಮಿಯ ತಲೆ, ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಕಾಲಿನಿಂದ ಬಲವಾಗಿ ಒದ್ದೆ. ಮರದ ಕೊಂಬೆಯಿಂದಲೂ ಹೊಡೆದೆ. ಸ್ಥಳಕ್ಕೆ ಬಂದ ಪವಿತ್ರಾಗೌಡ ನನ್ನ ಸೂಚನೆಯಂತೆ ಚಪ್ಪಲಿಯಿಂದ ಆತನಿಗೆ ಹೊಡೆದಳು. ನನ್ನ ಕಾರಿನ ಚಾಲಕ ಲಕ್ಷ್ಮಣ ಸಹ ಕುತ್ತಿಗೆ, ಬೆನ್ನಿಗೆ ಹೊಡೆದ. ನಂದೀಶ್‌ ಆತನನ್ನು ಜೋರಾಗಿ ಎತ್ತಿ ಕೆಳಕ್ಕೆ ಹಾಕಿದ’ ಎಂದು ಆರೋಪಿ ದರ್ಶನ್‌ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ದರ್ಶನ್‌ ನೀಡಿರುವ ಈ ಹೇಳಿಕೆಯು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

‘ಪವಿತ್ರಾ ಗೌಡ ಅವರಿಗೆ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ಓದುತ್ತಿದ್ದಂತೆ ಕುಪಿತರಾದ ದರ್ಶನ್‌ ಅವರು ರೇಣುಕಸ್ವಾಮಿಯ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದರು’ ಎಂದು ಮತ್ತೊಬ್ಬ ಆರೋಪಿ ಪವನ್‌ ನೀಡಿರುವ ಹೇಳಿಕೆಯೂ ಆರೋಪಪಟ್ಟಿಯ ಭಾಗವಾಗಿದೆ.

ಕುಪಿತರಾಗಿದ್ದ ದರ್ಶನ್ ತಂಡ, ರೇಣುಕಸ್ವಾಮಿ ಅವರ ಮೇಲೆ ಹೇಗೆಲ್ಲ ಹಲ್ಲೆ ನಡೆಸಿ, ಅವರ ಮರಣಕ್ಕೆ ಕಾರಣವಾಯಿತು ಎಂಬುದನ್ನು ಆರೋಪ ಪಟ್ಟಿ ಸವಿವರವಾಗಿ ಉಲ್ಲೇಖಿಸಿದೆ. 

‘ರೇಣುಕಸ್ವಾಮಿಯು ಪವಿತ್ರಾಗೌಡ ಅಲ್ಲದೇ ಇತರೆ ಸಿನಿಮಾ ನಟಿಯರಿಗೂ ಅಶ್ಲೀಲ ಸಂದೇಶ ಕಳುಹಿಸಿರುವುದನ್ನು ಪವನ್ ತಿಳಿಸಿದ. ಆಗ ಆತನಿಗೆ ಬೈದು ಕಾಲಿನಿಂದ ಒಂದೆರಡು ಬಾರಿ ಒದ್ದು ಅಲ್ಲಿಂದ ಹೊರಟು ಹೋದೆ. ರಾತ್ರಿ 7.30ಕ್ಕೆ ಪ್ರದೂಷ್‌ ಮನೆಗೆ ಬಂದು, ರೇಣುಕಸ್ವಾಮಿ ಮೃತಪಟ್ಟಿರುವ ವಿಚಾರ ತಿಳಿಸಿದ. ಈ ವಿಷಯವನ್ನು ನೋಡಿಕೊಳ್ಳುವುದಾಗಿ ಹೇಳಿ ಪ್ರದೂಷ್‌ ₹30 ಲಕ್ಷ ನಗದು ಪಡೆದ. ಕೆಲ ಹೊತ್ತಿನ ಬಳಿಕ ವಿನಯ್ ಬಂದು ₹10 ಲಕ್ಷ ಪಡೆದುಕೊಂಡು ಹೋದ’ ಎಂದು ದರ್ಶನ್ ಹೇಳಿದ್ದಾಗಿ ಆರೋಪ ಪಟ್ಟಿಯಲ್ಲಿದೆ.

‘ಜೂನ್ 10ರ ರಾತ್ರಿ ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿದ್ದಾಗ ಪ್ರದೂಷ್, ನಾಗರಾಜು, ವಿನಯ್ ಬಂದು ಭೇಟಿ ಮಾಡಿದರು. ಅವರನ್ನು ವಿಚಾರಿಸಿದಾಗ, ರೇಣುಕಸ್ವಾಮಿಗೆ ಧನರಾಜ್ ವಿದ್ಯುತ್‌ ಶಾಕ್‌ ನೀಡಿದ್ದು, ಪವನ್ ಹಲ್ಲೆ ನಡೆಸಿದ್ದು, ನಂದೀಶ್ ರೇಣುಕಸ್ವಾಮಿಯನ್ನು ಮೇಲಿಂದ ಎತ್ತಿ ಕೆಳಕ್ಕೆ ಕುಕ್ಕಿದ್ದಾನೆ ಎಂದು ತಿಳಿಸಿದ. ಈ ಕೊಲೆಯ ಹೊಣೆಯನ್ನು ಬೇರೆಯವರಿಗೆ ಹೊರಿಸಲು ಹೆಚ್ಚಿನ ಹಣ ಬೇಕಾಗುತ್ತದೆ’ ಎಂದು ಹೇಳಿ ಹೊರಟು ಹೋದರು’ ಎಂದೂ ಆರೋಪ ಪಟ್ಟಿ ವಿವರಿಸಿದೆ.

ಪವಿತ್ರಾ ಮನೆ ಖರೀದಿಗೆ ₹1.75 ಕೋಟಿ ಸಾಲ: ‘ಹತ್ತು ವರ್ಷದಿಂದ ಪವಿತ್ರಾಗೌಡ ಜತೆ ಸಹಜೀವನ ನಡೆಸುತ್ತಿದ್ದೇನೆ. ಪವಿತ್ರಾಗೆ ಮನೆ ಖರೀದಿಸಲು 2018ರಲ್ಲಿ ಜೆಟ್‌ಲ್ಯಾಗ್‌ ಪಬ್‌ ಮಾಲೀಕ ದಿವಂಗತ ಸೌಂದರ್ಯ ಜಗದೀಶ್ ಅವರಿಂದ ₹1.75 ಕೋಟಿ ಸಾಲ ಪಡೆದು, ಆಕೆಯ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದೆ. ಈ ಸಾಲದ ಹಣವನ್ನು ಎರಡು ವರ್ಷಗಳ ಹಿಂದೆಯೇ ಸೌಂದರ್ಯ ಜಗದೀಶ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದೆ’ ಎಂದು ದರ್ಶನ್‌ ಪೊಲೀಸರಿಗೆ ತಿಳಿಸಿದ್ದಾರೆ.

‘ರೇಣುಕ’ನನ್ನು ಸಾಯಿಸುವಂತೆ ಹೇಳಿದ್ದ ಪವಿತ್ರಾ

‘ಪಟ್ಟಣಗೆರೆ ಶೆಡ್‌ನಲ್ಲಿ ಟಿ ಶರ್ಟ್ ಧರಿಸಿ ನೀಲಿ ಬಣ್ಣದ ಒಳ ಉಡುಪಿನಲ್ಲಿ ಕುಳಿತಿದ್ದ ರೇಣುಕಸ್ವಾಮಿಗೆ ಚಪ್ಪಲಿಯಿಂದ ಕಪಾಳ ಹಾಗೂ ತಲೆಗೆ ಹೊಡೆದೆ. ಆತನನ್ನು ಬಿಡಬೇಡಿ ಸಾಯಿಸಿ ಎಂದು ಅಲ್ಲಿದ್ದವರಿಗೆ ಹೇಳಿದ್ದೆ’ ಎಂದು ನಟ ದರ್ಶನ್ ಅವರ ಪ್ರೇಯಸಿ ಪವಿತ್ರಾಗೌಡ ವಿಚಾರಣೆ ವೇಳೆ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ.

‘ಜೂನ್ 8ರಂದು ಮಧ್ಯಾಹ್ನ 1 ರಿಂದ 2 ರ ಸಮಯದಲ್ಲಿ ದರ್ಶನ್ ಕರೆ ಮಾಡಿ ನಮ್ಮ ಹುಡುಗರು ರೇಣುಕಸ್ವಾಮಿಯನ್ನು ಅಪಹರಿಸಿಕೊಂಡು ಬಂದಿದ್ದಾರೆ ಎಂದರು. ಪವನ್ ಪ್ರದೂಷ್‌ ಜತೆ ಸ್ಕಾರ್ಪಿಯೊ ವಾಹನದಲ್ಲಿ ಬಂದ ದರ್ಶನ್ ‘ಆತನಿಗೆ ಬುದ್ಧಿ ಕಲಿಸೋಣ ಬಾ’ ಎಂದು ನನ್ನನ್ನು ಶೆಡ್‌ಗೆ ಕರೆದೊಯ್ದರು. ಅಲ್ಲಿದ್ದ  ವ್ಯಕ್ತಿ ಗೋಳಾಡಿಕೊಂಡು ಕ್ಷಮೆ ಕೋರುತ್ತಿದ್ದ. ‘ಈತನೇ ‘ಗೌತಮ್‌ ಕೆ.ಎಸ್. 1990’ ಖಾತೆಯಿಂದ ಅಶ್ಲೀಲ ಸಂದೇಶ ಕಳುಹಿಸಿದ್ದು ಈತನ ನಿಜವಾದ ಹೆಸರು ರೇಣುಕಸ್ವಾಮಿ’ ಎಂದು ದರ್ಶನ್ ಹೇಳಿದರು. ದರ್ಶನ್‌ ನಾಗರಾಜು ಪವನ್ ನಂದೀಶ್ ಅವರು ರೇಣುಕಸ್ವಾಮಿಯ ತಲೆ ಎದೆ ಕೈ ಕಾಲುಗಳ ಮೇಲೆ ಮರದ ರೆಂಬೆಯಿಂದ ಥಳಿಸಿದರು’ ಎಂದು ಪವಿತ್ರಾ ನೀಡಿರುವ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಲಗತ್ತಿಸಲಾಗಿದೆ.

‘ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿ ಇವನೇನಾ?’ ಎಂದು ನಾನು ಸಹ ಚಪ್ಪಲಿಯಿಂದ ಆತನ ಕಪಾಳ ಮತ್ತು ಮುಖಕ್ಕೆ ಹೊಡೆದು ಬಿಡಬೇಡಿ ಸಾಯಿಸಿ ಎಂದು ಅಲ್ಲಿದವರಿಗೆ ಹೇಳಿದೆ. ಅವರೆಲ್ಲರೂ ಹಲ್ಲೆ ನಡೆಸಿದರು. ಆಗ ದರ್ಶನ್‌ ನನ್ನನ್ನು ಮನೆಗೆ ಹೋಗಲು ಹೇಳಿದರು’ ಎಂದು ಪವಿತ್ರಾ ಹೇಳಿಕೆ ನೀಡಿದ್ದಾರೆ. ‘ನಾವು ಹಲ್ಲೆ ಮಾಡಿದ ವ್ಯಕ್ತಿ ಮೃತಪಟ್ಟಿದ್ದು ಈ ವಿಷಯ ನಾವು ನೋಡಿಕೊಳ್ತೀವಿ ಎಂದು ದರ್ಶನ್ ಹಾಗೂ ಪವನ್ ರಾತ್ರಿ 9.30ಕ್ಕೆ ನನಗೆ ಹೇಳಿದ್ದರು’ ಎಂದೂ ಪವಿತ್ರಾಗೌಡ ತಿಳಿಸಿದ್ದಾರೆ.

‘ಬುಲ್ ಬುಲ್’ ಚಿತ್ರದ ವೇಳೆ ಪರಿಚಯ

ಬಾಲ್ಯದ ಜೀವನ ವಿವಾಹ ದರ್ಶನ್ ಜೊತೆಗಿನ ಪ್ರೀತಿ ಸೇರಿದಂತೆ ಹಲವು ವಿಚಾರಗಳನ್ನು ಪವಿತ್ರಾಗೌಡ ಅವರು ಪೊಲೀಸರಿಗೆ ತಮ್ಮ ಹೇಳಿಕೆ ದಾಖಲಿಸುವ ವೇಳೆ ತಿಳಿಸಿದ್ದಾರೆ. ‘2014ರಲ್ಲಿ ಬುಲ್ ಬುಲ್ ಚಿತ್ರದ ಆಡಿಷನ್‌ಗೆ ಹೋಗಿದ್ದ ವೇಳೆ ದರ್ಶನ್ ಪರಿಚಯವಾಯಿತು. ಅವರ ಮ್ಯಾನೇಜರ್ ಮೂಲಕ ಮೊಬೈಲ್‌ ನಂಬರ್ ಪಡೆದು ಚಿತ್ರದಲ್ಲಿ ಅವಕಾಶ ನೀಡುವಂತೆ ಕೋರಿದೆ. ಇದನ್ನೇ  ಸಲುಗೆಯಾಗಿ ತೆಗೆದುಕೊಂಡು ದರ್ಶನ್‌ ನನಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸುತ್ತಿದ್ದರು. ನಮ್ಮ ಮನೆಗೂ ಬಂದು ಹೋಗುತ್ತಿದ್ದರು. ನಾನು ಮತ್ತು ದರ್ಶನ್ ಪ್ರೀತಿಸುತ್ತಿದ್ದೆವು’ ಎಂದು ಪವಿತ್ರಾಗೌಡ ಹೇಳಿದ್ದಾರೆ.

‘ಜೆ.ಪಿ. ನಗರದಲ್ಲಿನ ನಮ್ಮ ನಿವಾಸಕ್ಕೆ ದರ್ಶನ್ ಬರುತ್ತಿದ್ದರು. ನಾನು ಮಗಳು ಹಾಗೂ ದರ್ಶನ್ ಜೊತೆಯಾಗಿ ವಾಸ ಮಾಡಲು ಆರ್. ಆರ್. ನಗರದ ಅವರ ಮನೆ ಹತ್ತಿರ ನನಗಾಗಿ ಮನೆ ಖರೀದಿಸಿದ್ದರು’ ಎಂಬ ಅವರ ಹೇಳಿಕೆಯನ್ನು ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT