ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ಅಕ್ರಮ ಸಾಗಣೆ ಆರೋಪ: ಪ್ರಕರಣ ರದ್ದು

Published 2 ಆಗಸ್ಟ್ 2023, 22:01 IST
Last Updated 2 ಆಗಸ್ಟ್ 2023, 22:01 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾರಿಯ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಡೀಸೆಲ್‌ ಸಾಗಣೆ ಮಾಡಲಾಗಿದೆ‘ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಾರಿ ಮಾಲೀಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿರುವ ಹೈಕೋರ್ಟ್‌; ‘ಇಂತಹ ಸಂದರ್ಭಗಳಲ್ಲಿ ದಾಳಿ, ತಪಾಸಣೆ ಮತ್ತು ಜಪ್ತಿ ಮಾಡುವಾಗ ಪೊಲೀಸ್‌ ಇಲಾಖೆಯ ಡಿವೈಎಸ್‌ಪಿ ಶ್ರೇಣಿಗಿಂತಲೂ ಕೆಳಗಿನ ಅಧಿಕಾರಿ ಇರಬಾರದು ಎಂಬ ಕಾನೂನು ಪಾಲನೆ ಅಗತ್ಯ‘ ಎಂದು ಆದೇಶಿಸಿದೆ.

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಸಾದಿಕ್‌ ಪಾಷ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌.ಸುನಿಲ್ ಕುಮಾರ್, ‘ಈ ಪ್ರಕರಣದಲ್ಲಿ ದಾಳಿ ನಡೆಸಿ ಲಾರಿ ಮತ್ತು ಡೀಸೆಲ್‌ ಅನ್ನು ವಶಪಡಿಸಿಕೊಂಡಿರುವ ಅಧಿಕಾರಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯಲ್ಲಿದ್ದು ಇದು ಕಾನೂನಿಗೆ ವಿರುದ್ಧವಾದ ನಡೆ. ಹೀಗಾಗಿ, ಪ್ರಕರಣವನ್ನು ರದ್ದುಪಡಿಸಬೇಕು‘ ಎಂದು ಕೋರಿದ್ದರು.

ಆದರೆ, ಪ್ರಾಸಿಕ್ಯೂಷನ್‌ ಪರ ವಕೀಲರಾದ ಕೆ.ಪಿ. ಯಶೋದಾ ಇದನ್ನು ಅಲ್ಲಗಳೆದಿದ್ದರು. ಆದರೆ, ಅಂತಿಮವಾಗಿ ಅರ್ಜಿದಾರರ ಪರ ವಾದಾಂಶವನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಐಪಿಸಿ ಕಲಂಗಳ ಅಡಿಯಲ್ಲಿ ದಾಖಲಿಸಿರುವ ಅಪರಾಧ ಇಲ್ಲಿ ಅನ್ವಯ ಆಗುವುದಿಲ್ಲ. ಅಂತೆಯೇ, ಮೋಟಾರು ಸ್ಪಿರಿಟ್‌ ಮತ್ತು ಹೈ–ಸ್ಪೀಡ್‌ ಡೀಸೆಲ್‌ ಸಾಗಣೆ, ನಿಯಂತ್ರಣ ವಿತರಣೆ ಮತ್ತು ಅಕ್ರಮ ತಡೆ ಆದೇಶ–1988ರ ಉಪನಿಯಮಗಳ ಅನುಸಾರ ಈ ಪ್ರಕರಣದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ಗೆ ದಾಳಿ, ತಪಾಸಣೆ ಮತ್ತು ಜಪ್ತಿ ಮಾಡುವ ಅಧಿಕಾರ ಇರುವುದಿಲ್ಲ‘ ಎಂಬುದನ್ನು ಎತ್ತಿ ಹಿಡಿದಿದೆ.

ಪ್ರಕರಣವೇನು?: ‘ಮುದಗಲ್‌–ಚಿತ್ತೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾನೂನು ಬಾಹಿರವಾಗಿ ಲಾರಿಯ ಟ್ಯಾಂಕರ್‌ನಲ್ಲಿ ಡೀಸೆಲ್‌ ಸಾಗಣೆ ಮಾಡಲಾಗುತ್ತಿದೆ‘ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು 2022ರ ಸೆಪ್ಟೆಂಬರ್ 15ರಂದು ದಾಳಿ ನಡೆಸಿದ್ದರು. ಸ್ಥಳದಲ್ಲೇ ಲಾರಿಯನ್ನು ಜಪ್ತಿ ಮಾಡಿ ಚಾಲಕ ಮತ್ತು ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 285, ಅಗತ್ಯ ವಸ್ತುಗಳ ಕಾಯ್ದೆ–1955 ಹಾಗೂ ಮೋಟಾರು ಸ್ಪಿರಿಟ್‌ ಮತ್ತು ಹೈ–ಸ್ಪೀಡ್‌ ಡೀಸೆಲ್‌ ಸಾಗಣೆ, ನಿಯಂತ್ರಣ ವಿತರಣೆ ಮತ್ತು ಅಕ್ರಮ ತಡೆ ಆದೇಶ–1988ರ ಉಪನಿಯಮಗಳ ಅನುಸಾರ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗಿತ್ತು. 

ಲಾರಿಯ ಮಾಲೀಕರಾದ ಸಾದಿಕ್‌ ಪಾಷ ಮುಳಬಾಗಿಲಿನಲ್ಲಿ ಎಸ್‌ಡಬ್ಲ್ಯುಎಸ್‌ & ಸನ್ಸ್‌ ಹೆಸರಿನಲ್ಲಿ ಪೆಟ್ರೊಲ್ ಬಂಕ್ ಹೊಂದಿದ್ದು, ‘ನಾನು ಡೀಸೆಲ್‌ ಸಾಗಣೆ ಪರವಾನಗಿ ಹೊಂದಿದ್ದು, ನನ್ನ ವಿರುದ್ಧ ಹೂಡಲಾಗಿರುವ ಪ್ರಕರಣ ಕಾನೂನುಬಾಹಿರವಾಗಿದೆ‘ ಎಂದು ಪ್ರತಿಪಾದಿಸಿದ್ದರು. ಅಂತೆಯೇ, ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT