ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಕೊಡೆಗಳಂತೆ ಜಾಹೀರಾತು ಫಲಕ: ಹೈಕೋರ್ಟ್‌ ಕಳವಳ

Published 19 ಸೆಪ್ಟೆಂಬರ್ 2023, 16:53 IST
Last Updated 19 ಸೆಪ್ಟೆಂಬರ್ 2023, 16:53 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಚುನಾವಣಾ ಅನಧಿಕೃತ ಜಾಹೀರಾತು ಫಲಕಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು ಇದರಿಂದ ಶ್ರೀ ಸಾಮಾನ್ಯರು ಅತೀವ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

‘ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿ, ‘ಅನಧಿಕೃತ ಜಾಹೀರಾತು ಫಲಕ ಅಳವಡಿಕೆಗೆ ಸಂಬಂಧಿಸಿದಂತೆ 2022ರಲ್ಲಿ 76, 2021ರಲ್ಲಿ 19, 2020ರಲ್ಲಿ 120 ಪ್ರಕರಣ ದಾಖಲಾಗಿವೆ. 2023ರ ಆಗಸ್ಟ್ 30ರಿಂದ ಈತನಕ 701 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 164 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. 17 ಪ್ರಕರಣ ಇತ್ಯರ್ಥಗೊಂಡಿವೆ. 132 ಪ್ರಕರಣ ಬಾಕಿ ಇವೆ. 2023ರ ಆಗಸ್ಟ್‌ ತಿಂಗಳ ಒಂದರಲ್ಲೇ 327 ಪ್ರಕರಣ ದಾಖಲಾಗಿವೆ’ ಎಂದು ತಿಳಿಸಿದರು.

ಇದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ‘ಪಾಲಿಕೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ ಹಾಗೂ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಅರ್ಜಿದಾರರ ವಾದ ನ್ಯಾಯಸಮ್ಮತವಾಗಿದೆ. ಜಾಹೀರಾತುಗಳ ಹಾವಳಿಯಿಂದ ಸಾರ್ವಜನಿಕರು, ಅದರಲ್ಲೂ ಮುಖ್ಯವಾಗಿ ಬೆಂಗಳೂರು ನಗರದ ನಾಗರಿಕರು ಬಳಲುತ್ತಿದ್ದಾರೆ‘ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು.

‘ಅನಧಿಕೃತ ಚುನಾವಣಾ ಜಾಹೀರಾತು, ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳಿಂದ ವಾಹನ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಗಂಭೀರ ಅಡಚಣೆ ಉಂಟಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯೋನ್ಮುಖವಾಗಬೇಕು. ಈ ಕುರಿತಂತೆ ಸಮಗ್ರವಾದ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸಬೇಕು‘ ಎಂದು ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT