ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇ ಚಲುವರಾಯಸ್ವಾಮಿ ಅಭಿಯಾನ: ವಿಚಾರಣೆಗೆ ಹೈಕೋರ್ಟ್‌ ತಡೆ

Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಸಚಿವ ಎನ್‌.ಚಲುವರಾಯ ಸ್ವಾಮಿ ವಿರುದ್ಧ ‘ಪೇ ಚಲುವರಾಯಸ್ವಾಮಿ‘ ಪೋಸ್ಟರ್ ಅಭಿಯಾನ ನಡೆಸಲಾಗಿದೆ ಎಂಬ ಆರೋಪದಡಿ ಮಂಡ್ಯದ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಬಿಜೆಪಿ ಕಾರ್ಯಕರ್ತರಾದ ಸಿ.ಟಿ.ಮಂಜುನಾಥ್, ಎಸ್‌.ಶಿವಕುಮಾರ್ ಆರಾಧ್ಯ, ಪ್ರಸನ್ನ ಕುಮಾರ್, ಶಿವಕುಮಾರ್ ಮತ್ತು ವಿನೂ ಭಾಯ್ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ಮಧು ಎನ್‌.ರಾವ್‌ ವಾದ ಮಂಡಿಸಿದರು.

ಪ್ರಕರಣವೇನು?: ಅರ್ಜಿದಾರರು ಸಚಿವ ಎಚ್‌.ಚಲುರಾಯಸ್ವಾಮಿ ಮತ್ತು ಸರ್ಕಾರದ ವಿರುದ್ಧ ‘ಪೇ ಸಿಎಸ್‌/ ಪೇ ಚೆಲುವರಾಯಸ್ವಾಮಿ‘ ಅಭಿಯಾನದ ಹೆಸರಿನಲ್ಲಿ 2023ರ ಆಗಸ್ಟ್‌ 10ರಂದು ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ ಅಂಟಿಸಿದ್ದರು. ಈ ಸಂಬಂಧ ಪೊಲೀಸರು ಐವರ ವಿರುದ್ಧ ಅಂದೇ, ಕರ್ನಾಟಕ ಮುಕ್ತ ಪ್ರದೇಶಗಳ ವಿರೂಪ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲು ಮಾಡಿದ್ದರು. ಅಂತೆಯೇ, 2023ರ ಆಗಸ್ಟ್‌ 30ರಂದು ಮಂಡ್ಯದ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT