ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಬಂದ್ ಮಾಡಿಸಬೇಕಾಗುತ್ತದೆ: ಕರ್ನಾಟಕ ಹೈಕೋರ್ಟ್‌ ಎಚ್ಚರಿಕೆ

Published 14 ಜೂನ್ 2023, 16:25 IST
Last Updated 14 ಜೂನ್ 2023, 16:25 IST
ಅಕ್ಷರ ಗಾತ್ರ

ಬೆಂಗಳೂರು: ’ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬರ ಪ್ರಕರಣದಲ್ಲಿ ತನಿಖೆಗೆ ಸೂಕ್ತ ಸಹಕಾರ ನೀಡುತ್ತಿಲ್ಲ ಎಂಬ ಮಂಗಳೂರು ಪೊಲೀಸರ ಆಕ್ಷೇಪವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಮತ್ತು ಭಾರತದಲ್ಲಿ ಫೇಸ್‌ಬುಕ್ ಕಾರ್ಯಚರಣೆ ಬಂದ್ ಮಾಡಲು ಆದೇಶ ಹೊರಡಿಸಬೇಕಾಗುತ್ತದೆ‘ ಎಂದು ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.

ಈ ಸಂಬಂಧ ಮಂಗಳೂರಿನ ಬಿಕರನಕಟ್ಟೆ ನಿವಾಸಿ ಶೈಲೇಶ್ ಕುಮಾರ ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

’ಫೇಸ್‌ಬುಕ್ ಸಂಸ್ಥೆಯು ಒಂದು ವಾರದಲ್ಲಿ ಘಟನೆಯ ಕುರಿತು ಸೂಕ್ತ ಮಾಹಿತಿ ಒಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಭಾರತೀಯ ಪ್ರಜೆ ಸುಳ್ಳು ಪ್ರಕರಣದಲ್ಲಿ ವಿದೇಶದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಮಾಹಿತಿ ನೀಡಬೇಕು. ಮಂಗಳೂರು ಪೊಲೀಸರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು‘ ಎಂದು ನ್ಯಾಯಪೀಠ ನಿರ್ದೇಶಿಸಿದೆ. ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?:

ಮಂಗಳೂರಿನ ಬಿಕರನಕಟ್ಟೆಯ 45 ವರ್ಷದ ಶೈಲೇಶ್ ಕುಮಾರ್ 25 ವರ್ಷಗಳಿಂದ ಸೌದಿ ಅರೇಬಿಯಾದ ಅಲ್‌ ಕುಬೆರ್ ಎಂಬಲ್ಲಿ ಉದ್ಯೋಗಿಯಾಗಿದ್ದಾರೆ. ಪತ್ನಿ ಮತ್ತು ಮಕ್ಕಳು ಬಿಕರನಕಟ್ಟೆಯಲ್ಲಿ ವಾಸ ಮಾಡುತ್ತಿದ್ದಾರೆ. 

ಶೈಲೇಶ್  2019ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ (ಎನ್‌ಆರ್‌ಸಿ) ಬೆಂಬಲಿಸಿ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದರಿಂದ ಅವರಿಗೆ ಅನಾಮಿಕರಿಂದ ಬೆದರಿಕೆ ಬಂದಿತ್ತು. ಹಾಗಾಗಿ, ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ರದ್ದುಪಡಿಸಿದ್ದರು.

ಏತನ್ಮಧ್ಯೆ ಶೈಲೇಶ್ ಕುಮಾರ್ ಹೆಸರಿನಲ್ಲಿ 2020ರ ಫೆಬ್ರುವರಿಯಲ್ಲಿ ಅನಾಮಧೇಯ ವ್ಯಕ್ತಿಗಳು ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ, ಅವರ ಧರ್ಮದ ಹೆಸರಿನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದು ತಮ್ಮ ಗಮನಕ್ಕೆ ಬಂದಕೂಡಲೇ ಶೈಲೇಶ್‌ ತಮ್ಮ ಸ್ನೇಹಿತರಿಗೆ ಮತ್ತು ಮಂಗಳೂರಿನ ಸಂಬಂಧಿಕರಿಗೆ ತಿಳಿಸಿದ್ದರು.

ಇದೇ ವೇಳೆ ಸೌದಿ ಪೊಲೀಸರು ಶೈಲೇಶ್‌ ಅವರನ್ನು ಬಂಧಿಸಿದ್ದರು. ಈ ಕುರಿತಂತೆ ಮಂಗಳೂರಿನಲ್ಲಿ ಪತ್ನಿ ಕವಿತಾ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಪೊಲೀಸರು, ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು, ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದವರ ಮಾಹಿತಿ ನೀಡುವಂತೆ ಕೋರಿದ್ದರು. ಅಂತೆಯೇ,  ‘ನಿರಪರಾಧಿಯಾದ ನನ್ನ ಗಂಡನನ್ನು ಸೌದಿ ಜೈಲಿನಿಂದ ಬಿಡಿಸಲು ಕ್ರಮ ಜರುಗಿಸಿ‘ ಎಂದು ಕೋರಿ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದರು.

ಈ ಮನವಿ ಫಲ ನೀಡದ ಕಾರಣ ಅವರು, ‘ಪೊಲೀಸರು ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ‘ ಎಂದು ಆಕ್ಷೇಪಿಸಿ 2021ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನದ ಅನುಸಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಹಾಗೂ ಪ್ರಕರಣದ ತನಿಖಾಧಿಕಾರಿ ಬುಧವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT