ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್ ಭವನಕ್ಕೆ ಟಿಪ್ಪು ಹೆಸರು: ಜಮೀರ್‌

ಹೋರಾಟದ ಎಚ್ಚರಿಕೆ ನೀಡಿದ ಬಿಜೆಪಿ ನಾಯಕರು
Last Updated 22 ಜೂನ್ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಜ್‌ ಭವನಕ್ಕೆ ಟಿಪ್ಪು ಸುಲ್ತಾನ್‌ ಹೆಸರಿಡಬೇಕು ಎಂಬ ವಿಷಯ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಕ್ಫ್‌ ಸಚಿವ ಜಮೀರ್ ಅಹಮದ್‌ ಖಾನ್, ‘ಹಜ್‌ ಭವನದ ಹೆಸರನ್ನು ಟಿಪ್ಪು ಸುಲ್ತಾನ್‌ ಹಜ್‌ ಘರ್‌ ಎಂಬುದಾಗಿ ಬದಲಾಯಿಸಬೇಕು ಎಂದು ಮುಸ್ಲಿಂ ಧರ್ಮಗುರುಗಳು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆಗೆ ಸಮಾಲೋಚಿಸುತ್ತೇನೆ’ ಎಂದು ತಿಳಿಸಿದರು.

‘ಒಂದು ವೇಳೆ ಹೆಸರಿಟ್ಟರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕ ಎಚ್ಚರಿಸಿದೆ.

‘ಹಜ್ ಭವನ ಸ್ವಾಯತ್ತ ಕೇಂದ್ರ. ಹೀಗಾಗಿ ಟಿಪ್ಪು ಸುಲ್ತಾನ್ ಹೆಸರಿಡಲು ಯಾವುದೇ ವಿರೋಧ ಇರುವುದಿಲ್ಲ ಎಂದು ಭಾವಿಸಿದ್ದೇನೆ’ ಎಂದೂ ಜಮೀರ್‌ ಹೇಳಿದರು.

‘ಕಳೆದ ವರ್ಷ ಹಜ್‌ ಯಾತ್ರೆ ಸಂದರ್ಭದಲ್ಲೇ ಈ ವಿಚಾರ ಪ್ರಸ್ತಾಪ ಆಗಿತ್ತು. ಇತ್ತೀಚೆಗೆ ನಡೆದ ಹಜ್‌ ಸಮಿತಿಯ ಪರಿಶೀಲನಾ‌ ಸಭೆಯಲ್ಲಿ ಮುಸ್ಲಿಂ ಗುರುಗಳು ಈ ವಿಷಯ ಪ್ರಸ್ತಾಪ ಮಾಡಿದರು. ಅವರ ಮನವಿಯನ್ನು ಕುಮಾರಸ್ವಾಮಿ ಅವರಿಗೆ ನೀಡುತ್ತೇನೆ. ಲಗಾಮು ಅವರ ಕೈಯಲ್ಲಿ ಇದೆ’ ಎಂದರು. ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ.ಪರಮೇಶ್ವರ ಅವರ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

‘ಟಿಪ್ಪು ಜಯಂತಿ ಬೇರೆ, ಈ ವಿಷಯ ಬೇರೆ. ಬಿಜೆಪಿಯವರು ಇದಕ್ಕೆ ವಿರೋಧ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಂದಲೂ ಸಲಹೆ ಪಡೆಯುತ್ತೇನೆ’ ಎಂದರು.

ತನ್ವೀರ್‌ ಸೇಠ್‌ಗೆ ತಿರುಗೇಟು
ಶಾಸಕ ತನ್ವೀರ್‌ ಸೇಠ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್‌, ‘ನಾನು ಲೀಡರ್ ಆಗಲು ಬಂದಿಲ್ಲ. ಯಾರನ್ನೂ ಓವರ್‌ಟೇಕ್ ಮಾಡುವುದೂ ಇಲ್ಲ. ಸಮಾಜಸೇವಕನಾಗಲು ಬಂದಿದ್ದೇನೆ. ಯಾರು ಲೀಡರ್ ಆಗಬೇಕು ಎಂಬುದನ್ನು ದೇವರು ಹಾಗೂ ಜನರು ನಿರ್ಧರಿಸುತ್ತಾರೆ’ ಎಂದರು.

‘ಟಿಪ್ಪು ಹೆಸರಿನಿಂದ ಕಳಂಕ’
‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಜ್‌ ಭವನಕ್ಕೆ ₹50 ಕೋಟಿ ಅನುದಾನ ನೀಡಲಾಗಿತ್ತು. ಬಿಜೆಪಿ ಮಾಡಿದ್ದ ಅಭಿವೃದ್ಧಿ ಕೆಲಸವದು. ಅದನ್ನು ಹೈಜಾಕ್ ಮಾಡಿ ಟಿಪ್ಪು ಸುಲ್ತಾನ್ ಹೆಸರಿಡಲು ಮುಂದಾಗಿರುವುದು ತಪ್ಪು’ ಎಂದು ಬಿಜೆಪಿ ಶಾಸಕ ಆರ್‌.ಅಶೋಕ ಆಕ್ಷೇಪ ವ್ಯಕ್ತಪಡಿಸಿದರು.

‘ಟಿಪ್ಪು ಜಯಂತಿಯನ್ನು ಬಿಜೆಪಿ ವಿರೋಧಿಸಿತ್ತು. ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿಸಿದ್ದಾನೆ ಹಾಗೂ ಕೊಲೆ ಮಾಡಿದ್ದಾನೆ. ಆತನ ಹೆಸರನ್ನು ಇಡುವುದರಿಂದ ಆ ಭವನಕ್ಕೆ ಕೆಟ್ಟ ಹೆಸರು ಹಾಗೂ ಕಳಂಕ ಬರುತ್ತದೆ’ ಎಂದರು.

‘ಹಜ್‌ ಭವನಕ್ಕೆ ಯಾವುದೇ ವ್ಯಕ್ತಿಯ ಹೆಸರು ಇಟ್ಟಿರುವ ಉದಾಹರಣೆ ಯಾವ ರಾಜ್ಯದಲ್ಲೂ ಇಲ್ಲ. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವೂ ಆಗಿದೆ. ಟಿಪ್ಪು ಸುಲ್ತಾನ್‌ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ನಡೆಸಿದರೆ ಬಿಜೆಪಿ ಸಹಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಎಚ್ಚರಿಸಿದರು.

*
ರಾಜ್ಯ ಸರ್ಕಾರ ವಿವಾದಗಳನ್ನು ಹುಟ್ಟು ಹಾಕಿ ಜನರ ಗಮನ ಬೇರೆಡೆ ಸೆಳೆಯಲು ಷಡ್ಯಂತ್ರ ನಡೆಸುತ್ತಿದೆ.
–ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾಬ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT