ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಕೆನ್ನೆಗೆ ಹೊಡೆದ ಸೋಮಣ್ಣ, ಕ್ಷಮೆಯಾಚನೆ: ರಾಜ್ಯದಾದ್ಯಂತ ಆಕ್ರೋಶ

Last Updated 23 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಚಾಮರಾಜನಗರ: ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೆನ್ನೆಗೆ ಹೊಡೆದಿದ್ದಾರೆ. ಇದರ ವಿರುದ್ಧ ರಾಜ್ಯದಾದ್ಯಂತ ತೀವ್ರ ಆಕ್ರೋಶವ್ಯಕ್ತವಾಗುತ್ತಿದ್ದಂತೆ ಭಾನುವಾರ ಕ್ಷಮೆ ಯಾಚಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ನಡೆದ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.ಈ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

‘ಆ ಹೆಣ್ಣು‌ ಮಗಳು ಪದೇ ಪದೇ ವೇದಿಕೆ ಮೇಲೆ‌ ಬರುತ್ತಿದ್ದಳು. ‘ತಾಯಿ ಎಷ್ಟು ಸಾರಿ‌ ಬರುತ್ತೀಯಾ’ ಎಂದು ವಿಚಾರಿಸಿದೆ. ನಿನ್ನ ಸಮಸ್ಯೆ‌ ಬಗೆಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಆ ಹೆಣ್ಣು ಮಗಳಿಗೂ ಹಕ್ಕುಪತ್ರ ಕೊಡಿಸಿದ್ದೇನೆ’ ಎಂದು ಸಚಿವರು ಕೊಳ್ಳೇಗಾಲದಲ್ಲಿ ‍ಪ್ರತಿಕ್ರಿಯೆ ನೀಡಿದರು.

ವಿವರ: ಹಂಗಳ ಗ್ರಾಮ ಪಂಚಾಯ್ತಿ ವತಿಯಿಂದ 173 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

‘ಫಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಿಲ್ಲ, ಅನ್ಯಾಯವಾಗಿದೆ. ಕಾಂಗ್ರೆಸ್ ಮುಖಂಡ ನಂಜಪ್ಪ ಹೇಳಿದವರಿಗೆ ನಿವೇಶನ ನೀಡಲಾಗಿದೆ’ ಎಂದು ಕೆಲ ಮಹಿಳೆಯರು ಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆಗ ಕೆಂಪಮ್ಮ ಎಂಬವರು ಸಚಿವರ ಬಳಿಗೆ ಹೋಗಿ ಸಮಸ್ಯೆ ಹೇಳಲು ಮುಂದಾದಾಗ ಸೋಮಣ್ಣ ಕೆನ್ನೆಗೆ ಹೊಡೆದಿದ್ದರು.

ಮಹಿಳೆ ವಿಡಿಯೊ: ಬಳಿಕಕೆಂಪಮ್ಮ ಅವರು ಸ್ಪಷ್ಟನೆ ನೀಡುವ ವಿಡಿಯೊ ತುಣಕನ್ನು, ಸಚಿವರ ತಂಡ ನಿರ್ವಹಿಸುವ ಮಾಧ್ಯಮದವರ ವಾಟ್ಸ್ಆ್ಯಪ್‌ ಗ್ರೂಪ್‌ನಲ್ಲಿ ಹಾಕಲಾಗಿತ್ತು.

‘ನಾನು ಬಡವಿ, ಸಹಾಯ ಮಾಡಿ ಎಂದು ಸಚಿವರ ಕಾಲಿಗೆ ಬಿದ್ದು ಕೇಳಿದೆ. ಅವರು ಮೇಲೆತ್ತಿ ಸಮಾಧಾನಪಡಿಸಿದರು. ನನಗೆ ಹೊಡೆದರು ಎಂದು ಸಚಿವರ ವಿರುದ್ಧ ತಪ್ಪಾಗಿ ಆರೋಪಿಸಲಾಗಿದೆ. ಅಂಥದ್ದು ಏನಿಲ್ಲ. ಜಾಗ ಕೊಡಿಸಿದ್ದಾರೆ. ಮಕ್ಕಳಿಗೆ ದಾರಿ ಮಾಡಿಕೊಟ್ಟಿ
ದ್ದಾರೆ. ಅವರಿಗೆ ಪುಣ್ಯ ಬರಲಿ’ ಎಂದು ಕೆಂಪಮ್ಮ ವಿಡಿಯೊದಲ್ಲಿ ಹೇಳಿದ್ದಾರೆ.

ಒತ್ತಡ ಹೇರಿಲ್ಲ: ಮಹಿಳೆ ಮೇಲೆ ಒತ್ತಡ ಹೇರಿ ಹೇಳಿಕೆ ಕೊಡಿಸಲಾಗಿದೆ ಎಂಬ ಆರೋಪದ ಬಗ್ಗೆಪ್ರತಿಕ್ರಿಯಿಸಿದ ಸೋಮಣ್ಣ, ‘ಆ ಅವಶ್ಯಕತೆ ನನಗಿಲ್ಲ. ಸಂಸ್ಕಾರಯುತವಾಗಿ ಜೀವನ ಮಾಡಿದ್ದೇನೆ. ಕೆಲವರು ನನ್ನ ವಿರುದ್ಧ ವಿವೇಚನಾರಹಿತವಾಗಿ ಮಾತನಾಡುತ್ತಿದ್ದಾರೆ’ ಎಂದರು.

ಸಚಿವ ಸೋಮಣ್ಣ ವಜಾಕ್ಕೆ ಕಾಂಗ್ರೆಸ್‌ ಆಗ್ರಹ: ‘ಸಮಸ್ಯೆ ಹೇಳಲು ಬಂದ ಮಹಿಳೆಯ ಮೇಲೆ ಸಚಿವ ವಿ. ಸೋಮಣ್ಣ ಹಲ್ಲೆ ನಡೆಸಿ ರಾಜ್ಯ ಬಿಜೆಪಿಯ ಸ್ತ್ರೀಪೀಡಕ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್‌ ಘಟಕ ದೂರಿದೆ.

ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಮೋದಿಯವರ 'ಬೇಟಿ ಬಚಾವೋ' ಎಂಬ ಘೋಷಣೆಯನ್ನು ಗೌರವಿಸುವುದಾದರೆ ಕೂಡಲೇ ಸಚಿವರನ್ನು ವಜಾಗೊಳಿಸಿ’ ಎಂದೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದೆ.

‘ಇದು ಬಿಜೆಪಿಯ ಇನ್ನಿಲ್ಲದ ದುರಹಂಕಾರ. ಸಚಿವ ವಿ.ಸೋಮಣ್ಣ ಅವರನ್ನು ವಜಾಗೊಳಿಸಿ’ ಎಂದು ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

ಸಚಿವರಾಗಿರಲು ಸೋಮಣ್ಣ ನಾಲಾಯಕ್‌: ಸಿದ್ದರಾಮಯ್ಯ

ದಾವಣಗೆರೆ: ಅಧಿಕಾರದಲ್ಲಿ ಇರುವವರಿಗೆ ತಾಳ್ಮೆ, ಸಹನೆ, ಜನರ ಸಂಕಷ್ಟಗಳನ್ನು ಪರಿಹರಿಸುವ ಮನಸ್ಸು ಇರಬೇಕು. ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಮೇಲೆ ಕೈ ಮಾಡಿದ ಸಚಿವ ವಿ.ಸೋಮಣ್ಣ ಆ ಸ್ಥಾನದಲ್ಲಿ ಮುಂದುವರಿಯಲು ನಾಲಾಯಕ್‌ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮಹಿಳೆ ಮೇಲೆ ಕೈ ಮಾಡಿರುವುದು ಅವರ ಸಂಸ್ಕೃತಿಯನ್ನು ತೊರಿಸುತ್ತದೆ. ಮನುಷ್ಯನಾದವನಿಗೆ ಮಾನವೀಯತೆ ಇರಬೇಕು. ಮಾನವೀಯತೆ ಇರುವ ವರಿಗೆ ಸಂಸ್ಕೃತಿ ಇರುತ್ತದೆ. ಬಿಜೆಪಿಗೆ ಮಾನವೀಯತೆಯೇ ಇಲ್ಲ. ಇನ್ನು ಸಂಸ್ಕೃತಿ ಎಲ್ಲಿಂದ ಬರುತ್ತದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT