ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳುವ ದೋಣಿಗಳು ಅಪಘಾತಕ್ಕೆ ಒಳಗಾಗಿ, ಮೀನುಗಾರರು ಮೃತರಾಗುತ್ತಿರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದಿಂದಲೇ ಮೀನುಗಾರರಿಗೆ ಜೀವರಕ್ಷಕ ಜಾಕೆಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಮೀನುಗಾರಿಕೆ ನಡೆಸುವ ಖಾಸಗಿ ಕಂಪನಿಗಳು ಎಲ್ಲ ಮೀನುಗಾರಿಗೂ ಕಡ್ಡಾಯವಾಗಿ ಜೀವರಕ್ಷಕ ಜಾಕೆಟ್ ನೀಡಲು ಸೂಚಿಸಲಾಗಿದೆಮಂಕಾಳ ವೈದ್ಯ, ಮೀನುಗಾರಿಕೆ ಸಚಿವ (ಪ್ರಶ್ನೆ: ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್ ಸದಸ್ಯ)
ರಾಜ್ಯದಲ್ಲಿನ ಮುಜರಾಯಿ ದೇವಾಲಯಗಳ ಪೂಜಾ ಕಾರ್ಯಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಸಲಹೆ ನೀಡಲಾಗುವುದು. ದೇವಾಲಯಗಳ ಸಂಪ್ರದಾಯ, ಆಚರಣೆ, ಪದ್ಧತಿಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರ ಬಯಸುವುದಿಲ್ಲ. ಆಗಮ ಶಿಕ್ಷಣದಲ್ಲಿ ಸಂಸ್ಕೃತ ಭಾಷೆಯಲ್ಲೇ ಹೆಚ್ಚಿನ ಗ್ರಂಥಗಳು ಇವೆ. ಹಾಗಾಗಿ, ಸಂಸ್ಕೃತ ಮತ್ತು ಕನ್ನಡದಲ್ಲಿ ಪ್ರವಚನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಎರಡೂ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ (ಪ್ರಶ್ನೆ: ಭಾರತಿ ಶೆಟ್ಟಿ, ಬಿಜೆಪಿ ಸದಸ್ಯೆ)
ಇನ್ನು ಒಂದೂವರೆ ತಿಂಗಳಲ್ಲಿ ಇ–ಸ್ವತ್ತು ತಂತ್ರಾಂಶದ ಮೂಲಕ ನಮೂನೆ 11 ಬಿ ಖಾತೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ 29 ಆಕ್ಷೇಪಣೆ ಬಂದಿದ್ದವು, ಅವುಗಳನ್ನು ಪರಿಶೀಲಿಸಿ ಇನ್ನು 15 ದಿನಗಳಲ್ಲಿ ನಿಯಮಗಳನ್ನು ರೂಪಿಸಲಾಗುವುದು. ಸದ್ಯಕ್ಕೆ ನಮೂನೆ 11 ಬಿ ಖಾತೆ ನೀಡುತ್ತಿಲ್ಲ.ಪ್ರಿಯಾಂಕ್ ಖರ್ಗೆ, ಪಂಚಾಯತ್ ರಾಜ್ ಸಚಿವ(ಪ್ರಶ್ನೆ: ಬಸನಗೌಡ ಪಾಟೀಲ ಯತ್ನಾಳ )
ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಬಲಪಡಿಸಲು ಮತ್ತು ಕಡಿಮೆ ಮೊತ್ತದಲ್ಲಿ ತ್ವರಿತ ಸೇವೆಗೆ ಅವಕಾಶ ಮಾಡಿಕೊಡಲು ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳಿಗೆ ‘ಬೈಕ್ ಟ್ಯಾಕ್ಸಿ’ ಸೇವೆ ಸಲ್ಲಿಸಲು 2021ರ ಜುಲೈನಿಂದ ಅವಕಾಶ ನೀಡಲಾಗಿತ್ತು. ಆದರೆ, ಕೆಲ ಖಾಸಗಿ ಆ್ಯಪ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನೂ ಬಳಸಿಕೊಳ್ಳುತ್ತಿದ್ದರು. ಈ ಬಗ್ಗೆ ಹಲವು ದೂರುಗಳು ದಾಖಲಾಗಿದ್ದವು. ಕಾನೂನಿನಲ್ಲಿ ಪೆಟ್ರೋಲ್ ಆಧಾರಿತ ದ್ವಿಚಕ್ರ ವಾಹನಗಳ ಸೇವೆಗೆ ಅವಕಾಶ ಇಲ್ಲದ ಕಾರಣ ಎಲ್ಲ ಬೈಕ್ ಟ್ಯಾಕ್ಸಿ ಸೇವೆಯನ್ನೂ 2024ರ ಮಾರ್ಚ್‌ನಿಂದ ರದ್ದು ಮಾಡಲಾಗಿದೆ. ಸರ್ಕಾರದ ಆದೇಶ ಪ್ರಶ್ನಿಸಿ, ಕೆಲ ಕಂಪನಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿದ್ದವು. ಪ್ರಕರಣವನ್ನು ಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆರಾಮಲಿಂಗಾರೆಡ್ಡಿ, ಸಾರಿಗೆ ಸಚಿವ(ಪ್ರಶ್ನೆ ಬಿಜೆಪಿಯ ಡಿ.ಎಸ್. ಅರುಣ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.