ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರ ಆರೋಪ | BJP ನಾಯಕರು ರಾಜೀನಾಮೆ ನೀಡಬೇಕಲ್ಲವೇ: ಪ್ರಿಯಾಂಕ್ ಪ್ರಶ್ನೆ

Published : 29 ಸೆಪ್ಟೆಂಬರ್ 2024, 15:39 IST
Last Updated : 29 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ಬೆಂಗಳೂರು: ‘ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ನೈತಿಕತೆ ಇದ್ದರೆ, ಆರೋಪ ಹೊತ್ತ ಬಿ.ಎಸ್‌. ಯಡಿಯೂರಪ್ಪ ಮತ್ತು  ಬಿ.ವೈ. ವಿಜಯೇಂದ್ರ ಅವರನ್ನು ತಮ್ಮ ಪಕ್ಷದಿಂದ ಮೊದಲು ಹೊರಹಾಕಲಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರಡಿಗೆ ಎಷ್ಟು ಕೂದಲುಗಳಿವೆಯೋ ಅಷ್ಟು ಆರೋಪಗಳು ಬಿಜೆಪಿಯವರ ಮೇಲಿದೆ’ ಎಂದು ಆರೋಪಿಸಿದರು.

‘ಸೆಲ್ ಕಂಪನಿಗಳ ಮೂಲಕ ಬಿ.ವೈ. ವಿಜಯೇಂದ್ರ ಮನಿ ಲ್ಯಾಂಡ್ರಿಂಗ್ ಮಾಡುತ್ತಿದ್ದಾರೆ. ಹಲವು ಬಾರಿ ಮಲೇಷ್ಯಾ ಸೇರಿದಂತೆ ವಿದೇಶಗಳಿಗೆ ಭೇಟಿ ನೀಡಿದ್ದಾರೆ. ಅವರು ಎಷ್ಟು ಬಾರಿ ವಿದೇಶಕ್ಕೆ ಭೇಟಿ ನೀಡಿದ್ದಾರೆ ಎಂಬ ಬಗ್ಗೆ ಪಾಸ್‌ಪೋರ್ಟ್‌ ತೋರಿಸಲಿ. ನಾವು ನಮ್ಮ ಪಾಸ್‌ಪೋರ್ಟ್‌ ತೋರಿಸುತ್ತೇವೆ’ ಎಂದರು.

‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಶಾಸಕ ಮುನಿರತ್ನ ಅವರನ್ನು ಪಕ್ಷದಿಂದ ವಜಾಗೊಳಿಸಿದ ನಂತರ ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ರಾಜೀನಾಮೆಯನ್ನು ಬಿಜೆಪಿ ನಾಯಕರು ಕೇಳಲಿ’ ಎಂದೂ ಹೇಳಿದರು.

‘ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಹಾಗೂ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರ ಕಾರ್ಯಾಚರಣೆಗಳಿಗೆ ನಾವು ಹೆದರುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಚುನಾವಣಾ ಬಾಂಡ್ ವಿಚಾರದಲ್ಲಿ ಸುಲಿಗೆ ಮಾಡಲಾಗುತ್ತಿದೆ. ಇದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ‌ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧವೇ ಈಗ ಎಫ್ಐಆರ್ ಆಗಿದೆ. ಅವರು ಕೂಡ ರಾಜೀನಾಮೆ ನೀಡಬೇಕಲ್ಲವೇ’ ಎಂದರು.

‘ಪ್ರಲ್ಹಾದ  ಜೋಷಿಯವರು ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಯಾವುದೇ ಯೋಜನೆ ತಂದಿಲ್ಲ. ಆದರೆ, ರಾಜಕೀಯವಾಗಿ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮನಿ ಲ್ಯಾಂಡ್ರಿಂಗ್ ಮಾಡಿದ್ದಾರೆ ಎಂದು ಜೋಷಿ ಹೇಳಿರುವುದು ಹಾಸ್ಯಾಸ್ಪದ. ಒಂದು ವೇಳೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ತಪ್ಪು ಮಾಡಿದ್ದರೆ ಏಕೆ ಜೈಲಿಗೆ ಹಾಕಿಲ್ಲ’ ಎಂದು ಪ್ರಶ್ನಿಸಿದರು.

‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ವಿಚಾರ ಮಾತನಾಡುವ ಪ್ರಲ್ಹಾದ ಜೋಷಿಯವರೇ, ನೀವು ಮುನಿರತ್ನ ಪ್ರಕರಣದಲ್ಲಿ ಮೌನವಾಗಿದ್ದು ಯಾಕೆ. ಇದು ಬಿಜೆಪಿ ಸಂಸ್ಕೃತಿಯಾ’ ಎಂದೂ ಕೇಳಿದರು.

‘ಚುನಾವಣಾ ಬಾಂಡ್ ಕಿಂಗ್ ಪಿನ್ ಆಗಿರುವ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಶರತ್ ಬಚ್ಚೇಗೌಡ ಆಗ್ರಹಿಸಿದರು.

ಕೆಪಿಸಿಸಿ ಕಾರ್ಯದರ್ಶಿ ರಾಮಚಂದ್ರಪ್ಪ, ಮಾಧ್ಯಮ ವಿಭಾಗದ ಮುಖ್ಯಸ್ಥ ಐಶ್ವರ್ಯ ಮಹದೇವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT