ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವೋಸ್‌: ₹22 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ

Published 17 ಜನವರಿ 2024, 16:19 IST
Last Updated 17 ಜನವರಿ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನ ಪ್ರಮುಖ ಕಂಪನಿಗಳು ಕರ್ನಾಟಕದಲ್ಲಿ ₹22 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ಕರ್ನಾಟಕದ ನಿಯೋಗ ಪಾಲ್ಗೊಂಡಿದೆ. ಹಲವಾರು ಕಂಪನಿಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ ನಿಯೋಗವು, ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಹಲವು ಒಪ್ಪಂದಗಳಿಗೂ ಸಹಿ ಹಾಕಿದೆ. 

ವೆಬ್‌ವರ್ಕ್ಸ್ ಕಂಪನಿಯು ಬೆಂಗಳೂರಿನಲ್ಲಿ ಸ್ಥಾಪಿಸಲಿರುವ 100 ಮೆಗಾವಾಟ್‌ ಸಾಮರ್ಥ್ಯದ ಡೇಟಾ ಸೆಂಟರ್‌ ಪಾರ್ಕ್‌ಗೆ ₹20 ಸಾವಿರ ಕೋಟಿ ಬಂಡವಾಳ ಹೂಡಲಿದೆ. ಮೈಕ್ರೋಸಾಫ್ಟ್‌, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್‌ ಪೆಕಾರ್ಡ್ (ಎಚ್.ಪಿ), ಹನಿವೆಲ್, ಐನಾಕ್ಸ್, ವೋಲ್ವೊ, ನೆಸ್ಲೆ, ಕಾಯಿನ್‌ ಬೇಸ್‌, ಟಕೇಡಾ ಫಾರ್ಮಾ, ಬಿ.ಎಲ್‌. ಆಗ್ರೋ ಕಂಪನಿಗಳು ಸುಮಾರು ₹2,000 ಕೋಟಿ ಹೂಡಿಕೆ ಮಾಡಲಿವೆ.

ಮೈಕ್ರೋಸಾಫ್ಟ್‌ ಕಂಪನಿ ಕೌಶಲಾಭಿವೃದ್ಧಿ ಮತ್ತು ಸುಗಮ ಆಡಳಿತ ಉಪಕ್ರಮಗಳ ತರಬೇತಿ ಕೊಡಲಿದೆ. ಹಿಟಾಚಿ ಕಂಪನಿ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಇ-ಗವರ್ನೆನ್ಸ್‌ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಹನಿವೆಲ್ ಕಂಪನಿಯು ಐಒಟಿ (ಇಂಟರ್ನೆಟ್‌ ಆಫ್‌ ಥಿಂಗ್ಸ್‌) ಮೂಲಕ ಸಂಚಾರ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ನಿಭಾಯಿಸಲಿದೆ. ಟಕೇಡಾ ಫಾರ್ಮಾ ಬೆಂಗಳೂರಿನಲ್ಲಿ ಗ್ಲೋಬಲ್‌ ಕೆಪಾಸಿಟಿ ಸೆಂಟರ್‌ ತೆರೆಯಲಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

‘ವೆಬ್‌ವರ್ಕ್ಸ್ ಸಂಸ್ಥಾಪಕ ನಿಖಿಲ್ ರತಿ, ಐನಾಕ್ಸ್‌ ಕಂಪನಿಯ ಸಿದ್ಧಾರ್ಥ ಜೈನ್‌, ಹನಿವೆಲ್‌ ಕಂಪನಿಯ ಮುಖ್ಯಸ್ಥ ಅನಂತ್‌ ಮಹೇಶ್ವರಿ, ಲುಲು ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಯೂಸುಫ್‌ ಅಲಿ ಜತೆ ಮಾತುಕತೆ ನಡೆಸಲಾಗಿದೆ. ಹೂಡಿಕೆಯಿಂದಾಗಿ ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ ಸೇರಿದಂತೆ ಹಲವು ಭಾಗಗಳು ಮುಂಚೂಣಿಗೆ ಬರಲಿವೆ’ ಎಂದು ಅವರು ವಿವರಿಸಿದ್ದಾರೆ.

ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ, ಐಟಿಬಿಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್‌ ಕೌರ್  ಕೆಐಎಡಿಬಿ ಸಿಇಒ ಡಾ.ಮಹೇಶ್‌ ನಿಯೋಗದಲ್ಲಿದ್ದಾರೆ.

ವಿಜಯಪುರ: ಲುಲುನಿಂದ ₹300 ಕೋಟಿ ಹೂಡಿಕೆ ಲುಲು ಸಮೂಹವು ಹಣ್ಣು ಮತ್ತು ತರಕಾರಿ ಸಂಸ್ಕರಣೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದ್ದು ವಿಜಯಪುರ ಜಿಲ್ಲೆಯಲ್ಲಿ  ₹300 ಕೋಟಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕ ತೆರೆಯಲಿದೆ. ಈ ಕುರಿತು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಲುಲು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಯೂಸುಫ್‌ ಅಲಿ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಲುಲು ಗ್ರೂಪ್ ಸದ್ಯಕ್ಕೆ ಪ್ರತಿ ತಿಂಗಳು 250 ಟನ್ನುಗಳಷ್ಟು ಸೀಬೆಹಣ್ಣು ಸಪೋಟ ಹಸಿ ಮೆಣಸಿನಕಾಯಿ ಬೆಂಡೆಕಾಯಿ ಬದನೆಕಾಯಿ ಖರೀದಿಸುತ್ತಿದೆ. ವಿಜಯಪುರದಲ್ಲಿ ಜೋಳ ದ್ರಾಕ್ಷಿ ಹತ್ತಿ ಕುಸುಬೆ ಎಳ್ಳು ಲಿಂಬೆ ಇತ್ಯಾದಿಗಳ ಕಣಜವಾಗಿದೆ. ಲುಲು ಹೂಡಿಕೆಯಿಂದ ಸ್ಥಳೀಯ ರೈತರಿಗೆ ಅನುಕೂಲ ಆಗಲಿದೆ ಎಂದು  ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಉತ್ತರ ಪ್ರದೇಶ ಮೂಲದ ಬಿಎಲ್‌ ಗ್ರೂಪ್‌ ಕಂಪನಿಯೂ ಆಹಾರ ಸಂಸ್ಕರಣ ಘಟಕ ತೆರೆಯಲು  ವಿಜಯಪುರವನ್ನು ಆಯ್ಕೆ ಮಾಡಿಕೊಂಡಿದೆ. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT