ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಭದ್ರತಾ ಚೀಟಿ ವೆಚ್ಚ: ಆದೇಶ ಹಿಂಪಡೆದ ಅಬಕಾರಿ ಇಲಾಖೆ

‘ಪ್ರಜಾವಾಣಿ’ ವರದಿ ಪರಿಣಾಮ
Published 25 ಜೂನ್ 2023, 14:03 IST
Last Updated 25 ಜೂನ್ 2023, 14:03 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (ಇಎಎಲ್‌) ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸುವ ಆದೇಶವನ್ನು ಅಬಕಾರಿ ಇಲಾಖೆ ಶನಿವಾರ ಹಿಂಪಡೆದಿದೆ.

ಈ ಹಿಂದೆ ಇಎಎಲ್‌ ವೆಚ್ಚವೂ ಸೇರಿ ಮದ್ಯದ ಬಾಟಲಿಯ ಗರಿಷ್ಠ ಮಾರಾಟ ದರ ನಿಗದಿಯಾಗುತ್ತಿತ್ತು. ಮದ್ಯ ತಯಾರಕರೇ ಇಎಎಲ್‌ ವೆಚ್ಚ ಭರಿಸಬೇಕಿತ್ತು. ಆದರೆ, ಇಎಎಲ್‌ ವೆಚ್ಚವನ್ನು ಮದ್ಯದ ಬಾಟಲಿಯ ಗರಿಷ್ಠ ಮಾರಾಟ ದರದಿಂದ ಹೊರತುಪಡಿಸಿ ಮೇ 22ರಂದು ಆದೇಶ ಹೊರಡಿಸಲಾಗಿತ್ತು. ಯಾವುದೇ ಅಳತೆಯ ಪರಿಣಾಮವಾಗಿ ಪ್ರತಿ ಮದ್ಯದ ಬಾಟಲಿಯ ಮೇಲೆ 31.74 ಪೈಸೆಯನ್ನು ಗ್ರಾಹಕರು ಹೆಚ್ಚುವರಿಯಾಗಿ ಪಾವತಿಸಬೇಕಿತ್ತು.

ಇಎಎಲ್‌ ವೆಚ್ಚವನ್ನು ಮದ್ಯ ತಯಾರಕರಿಂದ ಗ್ರಾಹಕರಿಗೆ ವರ್ಗಾಯಿಸಿರುವುದರ ಹಿಂದೆ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್‌ ಕಲ್ಲಹಳ್ಳಿ ಮತ್ತು ಚಾಮರಾಜಪೇಟೆಯ ವಕೀಲ ಗಿರೀಶ್‌ ಆರೋಪಿಸಿದ್ದರು. ಈ ಕುರಿತು ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ‘ಮದ್ಯದ ಭದ್ರತಾ ಚೀಟಿಯ ವೆಚ್ಚವೂ ಗ್ರಾಹಕರಿಗೆ!’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಅದೇ ದಿನ ಆದೇಶವೊಂದನ್ನು ಹೊರಡಿಸಿರುವ ಅಬಕಾರಿ ಇಲಾಖೆ ಆಯುಕ್ತ ಡಾ.ಜೆ. ರವಿಶಂಕರ್‌, ಇಎಎಲ್‌ ವೆಚ್ಚಕ್ಕೆ ಸಂಬಂಧಿಸಿದಂತೆ ಮೇ 22ರಂದು ನೀಡಿದ್ದ ಎಲ್ಲ ಸೂಚನೆಗಳನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಇಎಎಲ್‌ ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಂದ ಸಂಗ್ರಹಿಸುವಂತೆ ಕರ್ನಾಟಕ ಮದ್ಯ ತಯಾರಕರ ಸಂಘದ ಅಧ್ಯಕ್ಷರು 2020ರ ಆಗಸ್ಟ್‌ 12ರದು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರು. 2023ರ ಮಾರ್ಚ್‌ 28ರಂದು ಆದೇಶವೊಂದನ್ನು ಹೊರಡಿಸಿದ್ದ ಅಬಕಾರಿ ಆಯುಕ್ತರು, ಜುಲೈ 1ರಿಂದ ಅನ್ವಯವಾಗುವಂತೆ ಇಎಎಲ್‌ ವೆಚ್ಚವನ್ನು ಮದ್ಯದ ಬಾಟಲಿಯ ಘೋಷಿತ ಬೆಲೆಯಿಂದ ಹೊರಗಿಡುವಂತೆ ನಿರ್ದೇಶನ ನೀಡಿದ್ದರು. ಮಾರ್ಚ್‌ 28ರ ಆದೇಶದ ಅನುಸಾರ ಇಎಎಲ್‌ ವೆಚ್ಚವನ್ನು ಗ್ರಾಹಕರಿಂದ ಸಂಗ್ರಹಿಸುವಂತೆ ಮೇ 22ರಂದು ಮತ್ತೊಂದು ಆದೇಶ ಹೊರಡಿಸಿದ್ದರು.

‘ಸಂಶಯಕ್ಕೆ ತೆರೆ ಎಳೆಯಲು ಕ್ರಮ’: ಆದೇಶ ಹಿಂಪಡೆದಿರುವ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ‘ಇಎಎಲ್‌ ವೆಚ್ಚಕ್ಕೆ ಸಂಬಂಧಿಸಿದ ಆದೇಶದಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ಆದರೂ, ಅವ್ಯವಹಾರ ನಡೆದಿದೆ ಎಂದು ಕೆಲವರು ಆರೋಪಿಸಿದ್ದರು. ಈ ವಿಚಾರದಲ್ಲಿ ಸಂಶಯಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಆದೇಶವನ್ನು ಹಿಂಪಡೆದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT