ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಎಸ್‌: ವಯೋಮಿತಿ ಪರಿಗಣಿಸದೆ ಅವಕಾಶ ನೀಡಲು ಆಗ್ರಹ; ಸಿಎಂ ಒಪ್ಪಿದರೂ ಆಗದ ಆದೇಶ

Published 9 ಜೂನ್ 2024, 23:30 IST
Last Updated 9 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: 2017–18ನೇ ಸಾಲಿನಲ್ಲಿ ಕೆಎಎಸ್‌ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ, ಇದೀಗ ಅರ್ಜಿ ಆಹ್ವಾನಿಸಿರುವ 2024ನೇ ಸಾಲಿನ 384 ಹುದ್ದೆಗಳಿಗೆ ಪರೀಕ್ಷೆ ಬರೆಯಲು ಗರಿಷ್ಠ ವಯೋಮಿತಿ ಪರಿಗಣಿಸದೇ ಒಂದು ವಿಶೇಷ ಅವಕಾಶ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಡತದಲ್ಲಿ ಅನುಮೋದನೆ ನೀಡಿದ್ದರೂ, ಆದೇಶ ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಮೀನಮೇಷ ಎನಿಸುತ್ತಿರುವುದು ಹುದ್ದೆ ಆಕಾಂಕ್ಷಿಗಳನ್ನು ಚಿಂತೆಗೀಡು ಮಾಡಿದೆ.

ಲೋಕಸಭೆ ಚುನಾವಣೆ ಘೋಷಣೆಯ ಕೆಲವೇ ದಿನಗಳ ಮೊದಲು, ಸಚಿವ ಸಂಪುಟದ ಅನುಮೋದನೆ ಬಾಕಿ ಇಟ್ಟು ಆದೇಶ ಹೊರಡಿಸುವಂತೆ ಡಿಪಿಎಆರ್‌ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದರು.

ಈ ಮಧ್ಯೆ, ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಗೆ ಬಂದ ಕಾರಣ, ಆದೇಶ ಹೊರಡಿಸುವ ಸಂಬಂಧ ಅನುಮತಿಗಾಗಿ ಚುನಾವಣಾ ಆಯೋಗಕ್ಕೆ ಡಿಪಿಎಆರ್‌ ಪತ್ರ ಬರೆದಿತ್ತು. ನೀತಿಸಂಹಿತೆ ಮುಗಿದ ಬಳಿಕ ಆದೇಶ ಹೊರಡಿಸುವಂತೆ ಆಯೋಗವು ಡಿಪಿಎಆರ್‌ಗೆ ನಿರ್ದೇಶನ ನೀಡಿತ್ತು.

ಆದರೆ, ನೀತಿಸಂಹಿತೆ ಮುಗಿದರೂ ಆದೇಶ ಹೊರಡಿಸದೆ ಅಧಿಕಾರಿಗಳ ಮಟ್ಟದಲ್ಲಿಯೇ ಕಡತ ಓಡಾಡುತ್ತಿದೆ. ಜುಲೈ 21ಕ್ಕೆ ಕೆಎಎಸ್‌ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಈಗಾಗಲೇ ದಿನ ನಿಗದಿಪಡಿಸಿದೆ. ಆದರೆ, ಗರಿಷ್ಠ ವಯೋಮಿತಿ ಪರಿಗಣಿಸದೆ ಅವಕಾಶ ನೀಡುವ ಸಂಬಂಧ ಸರ್ಕಾರ ಆದೇಶ ಹೊರಡಿಸದೇ ಇರುವುದು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಾವಿರಾರು ಅಭ್ಯರ್ಥಿಗಳಲ್ಲಿ ಆತಂಕ ಉಂಟು ಮಾಡಿದೆ.

‘ಗರಿಷ್ಠ ವಯೋಮಿತಿ ಮೀರಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಈಗಾಗಲೇ ಕೆಪಿಎಸ್‌ಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದೇವೆ.  ಸರ್ಕಾರ ಆದೇಶ ಹೊರಡಿಸಿದರೆ ಅವಕಾಶ ನೀಡುವುದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ತಿಳಿಸಿದ್ದಾರೆ’ ಎಂದು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘದ ಅಧ್ಯಕ್ಷ ವಿ. ಲೋಕೇಶ್‌ ಹೇಳಿದರು. 

‘ಕೆಎಎಸ್‌ ಹುದ್ದೆಗಳ ನೇಮಕಾತಿಗೆ ಪ್ರತಿವರ್ಷ ಅಧಿಸೂಚನೆ ಹೊರಡಿಸಬೇಕು ಎಂದು ಪಿ.ಸಿ. ಹೋಟಾ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯದಲ್ಲಿ 3–4 ವರ್ಷಗಳಿಗೊಮ್ಮೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ಒಡಿಶಾ ಸರ್ಕಾರವು 2017ರಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಪರಿಗಣಿಸದೆ 2024ರ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಅವಕಾಶ ನೀಡಬೇಕೆಂದು ನಾವು ಮಾಡಿದ್ದ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿ, ಆದೇಶ ಹೊರಡಿಸಲು ಕಡತದಲ್ಲಿ ಡಿಪಿಎಆರ್‌ಗೆ ಸೂಚಿಸಿದ್ದರು. ಕೆಎಎಸ್‌ ಪರೀಕ್ಷೆಗೆ ಇನ್ನು ಕೇವಲ 40 ದಿನಗಳಷ್ಟೆ ಬಾಕಿಯಿದೆ. ಮುಖ್ಯಮಂತ್ರಿಯ ಸೂಚನೆಯಂತೆ ಡಿಪಿಎಆರ್‌ ತಕ್ಷಣ ಆದೇಶ ಹೊರಡಿಸಬೇಕು’ ಎಂದು ಅವರು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಡಿಪಿಎಆರ್‌ ಕಾರ್ಯದರ್ಶಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

2017–18ನೇ ಸಾಲಿನಲ್ಲಿ ಪರೀಕ್ಷೆ ಬರೆದವರಿಗೆ ಗರಿಷ್ಠ ವಯೋಮಿತಿ ಪರಿಗಣಿಸದೆ ಈ ಬಾರಿಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಡಿಪಿಎಆರ್‌ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದೇವೆ
ವಿ.ಲೋಕೇಶ್‌  ಅಧ್ಯಕ್ಷ ಕರ್ನಾಟಕ ರಾಜ್ಯ ದಲಿತ ಪದವೀಧರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT