ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಭ್ರಷ್ಟಾಚಾರ ಆರೋಪ: ರಾಷ್ಟ್ರಪತಿ ಅಂಗಳಕ್ಕೆ

ಕೆಪಿಎಸ್‌ಸಿ ಹಿಂದಿನ ಅಧ್ಯಕ್ಷ, 9 ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌
Last Updated 9 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಂದಿನ ಅಧ್ಯಕ್ಷ ಮತ್ತು 9 ಸದಸ್ಯರನ್ನು ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆ–1988ರ ಕಲಂ 19ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸಿಐಡಿ ಸಲ್ಲಿಸಿದ್ದ ಕೋರಿಕೆಯನ್ನು ರಾಷ್ಟ್ರಪತಿಗೆ ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆದರೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 197ರ ಅಡಿ ಅಧ್ಯಕ್ಷರು ಮತ್ತು ಸದಸ್ಯರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಿರಲು ಸರ್ಕಾರ ತೀರ್ಮಾನಿಸಿದೆ. ಮೇ 27ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ತೆಗೆದು ಕೊಂಡ ನಿರ್ಣಯದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಈ ನಿರ್ಣಯಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಹಿ ಹಾಕಿದ್ದಾರೆ.

ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ, ಸಾಕ್ಷ್ಯಾಧಾರಗಳ ಸಹಿತ ಸಾವಿರಾರು ಪುಟಗಳ ಕರಡು ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ–1988ರ ಕಲಂ 19ರ ಅಡಿ ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 197ರ ಅಡಿ ಪ್ರಕರಣ ದಾಖಲಿಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಿಐಡಿ ಕೋರಿಕೆ ಸಲ್ಲಿಸಿತ್ತು.

‘ಸಿಆರ್‌ಪಿಸಿ ಕಲಂ 197ರ ಅಡಿ ಪ್ರಕರಣ ದಾಖಲಿಸಿಕೊಂಡು ಪ್ರಾಸಿಕ್ಯೂಷನ್‌ ನಡೆಸಲು ಸಿಐಡಿಗೆ ಅನುಮತಿ ನೀಡಬೇಕೇ, ಬೇಡವೇ ಎನ್ನುವುದು ರಾಜ್ಯ ಸರ್ಕಾರದ ವಿವೇಚನೆ ಬಿಟ್ಟ ವಿಚಾರ. ಆದರೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಕಲಂ 19ರ ಅಡಿಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ರಾಷ್ಟ್ರಪತಿ ವಿವೇಚನೆಗೆ ಬಿಟ್ಟಿದ್ದು. ಯಾಕೆಂದರೆ, ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ನೇಮಕಾತಿಯಲ್ಲಿ ಸಕ್ಷಮ ಪ್ರಾಧಿಕಾರ ರಾಷ್ಟ್ರಪತಿ. ಸಿಐಡಿ ಸಲ್ಲಿಸಿರುವ ಕೋರಿಕೆಯನ್ನು ಸಂವಿಧಾನದ ಅನುಚ್ಛೇದ 317 (1)ರ ಪ್ರಕಾರ ಅಗತ್ಯ ಕ್ರಮಕ್ಕೆ ರಾಜ್ಯ ಸರ್ಕಾರ ಕಳುಹಿಸಬೇಕು. ರಾಷ್ಟ್ರಪತಿ ನಿರ್ಣಯ ಕೈಗೊಳ್ಳಬೇಕು. ಇದೀಗ ಕಳುಹಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಅಧಿಕಾರಿ ತಿಳಿಸಿದರು.

ಅನುಮತಿ ನಿರಾಕರಣೆ: ‘ಲಭ್ಯವಿರುವ ದಾಖಲೆಗಳನ್ನು ಅವಲೋಕಿಸಿದಾಗ ಅಧ್ಯಕ್ಷರು ಮತ್ತು ಸದಸ್ಯರನ್ನು ಸಿಆರ್‌ಪಿಸಿ ಕಲಂ 197ರ ಅಡಿ ಅಪರಾಧವೆಂದು ಪರಿಗಣಿಸಲು ಮೇಲ್ನೋಟಕ್ಕೆ ಯಾವುದೇ ಆಂಶಗಳು ಕಂಡುಬರುತ್ತಿಲ್ಲ. ಆರೋಪಿತರ ಮೇಲೆ ಮಾಡಿರುವ ಆರೋಪಗಳು ಸ್ಪಷ್ಟವಾಗಿ ಆಧಾರರಹಿತವೆಂದು ಕಂಡುಬರುತ್ತವೆ. ಯಾವುದೇ ಗ್ರಹಿಸಬಲ್ಲ ಕೃತ್ಯಗಳು ಇಲ್ಲದೆ ಅಥವಾ ಪಿತೂರಿ ನಡೆದಿ
ರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿರುವುದು ಕಂಡುಬರುತ್ತಿರುವುದರಿಂದ ಭಾರತೀ ದಂಡ ಸಂಹಿತೆ (ಐಪಿಸಿ) ಪ್ರಕರಣ 166 ಮತ್ತು 167ರ ಅಡಿ ಅಪರಾಧವೆಂದು ಪರಿಗಣಿಸಲು ಸಾಧ್ಯ ಆಗಿರುವುದಿಲ್ಲ’ ಎಂದು ಅಭಿಪ್ರಾಯಪಟ್ಟು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಪಿಸಿ ಮತ್ತು ಸಿಆರ್‌ಪಿಸಿ ಅಡಿ ಪ್ರಾಸಿಕ್ಯೂಷನ್‌ಗೆ ಸಿಐಡಿ ಮಾಡಿದ್ದ ಮನವಿಯನ್ನು ಸೆ. 15ರಂದು ನಡೆದ ಸಚಿವ ಸಂಪುಟ ಸಭೆಗೆ ಡಿಪಿಎಆರ್‌ ಮಂಡಿಸಿತ್ತು. ಅಂದು, ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದೆ, ಪರಿಶೀಲಿಸಿ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಆದರೆ, ಎರಡು ಬಾರಿ ಸಭೆ ನಡೆಸಿದ್ದ ಸಮಿತಿ ಯಾವುದೇ ಅಂತಿಮ ಶಿಫಾರಸು ಮಾಡದೆ, ಸೂಕ್ತ ನಿರ್ಧಾರವನ್ನು ಸಂಪುಟ ಸಭೆ ತೆಗೆದುಕೊಳ್ಳುವಂತೆ ಷರಾ ಬರೆದಿತ್ತು.

ಯಾರು ಎಷ್ಟನೇ ಆರೋಪಿ?

1. ಗೋನಾಳ್‌ ಭೀಮಪ್ಪ
(ಅಂದಿನ ಅಧ್ಯಕ್ಷರು)
4. ಮಂಗಳಾ ಶ್ರೀಧರ್‌
9. ಬಿ.ಎಸ್‌. ಕೃಷ್ಣಪ್ರಸಾದ್‌
10. ಎಸ್‌.ಆರ್‌. ರಂಗಮೂರ್ತಿ
11. ಎನ್‌. ಮಹದೇವ್‌
12. ಎಚ್.ವಿ. ಪಾಶ್ವನಾಥ್‌
13. ಎಸ್‌. ದಯಾಶಂಕರ್‌
14. ಎಚ್‌.ಡಿ. ಪಾಟೀಲ್‌
15. ಎನ್‌ ರಾಮಕೃಷ್ಣ
16. ಬಿ.ಟಿ. ಕನಿರಾಮ್‌ (ಎಲ್ಲರೂ ಸದಸ್ಯರು). ಎಲ್ಲರೂ ಕೆಪಿಎಸ್‌ಸಿಯಿಂದ ನಿವೃತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT