ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯದರ್ಶಿಯಿಂದ ಅಧಿಕಾರ ದುರ್ಬಳಕೆ: ಕೆಪಿಎಸ್‌ಸಿ ಅಧ್ಯಕ್ಷ ಆರೋಪ

Published 30 ಆಗಸ್ಟ್ 2023, 15:41 IST
Last Updated 30 ಆಗಸ್ಟ್ 2023, 15:41 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಅಭ್ಯರ್ಥಿಗಳ ಕಣ್ಗಾವಲಿಗೆ ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಗೆ ಕೃತಕ ಬುದ್ದಿಮತ್ತೆ (ಎಐ) ತಂತ್ರಾಂಶ ಅಳವಡಿಸುವ ವಿಷಯವನ್ನು ಆಯೋಗದ ಸಭೆಯಲ್ಲಿ ಕಾರ್ಯದರ್ಶಿ ಪ್ರಸ್ತಾಪಿಸಿಲ್ಲ. ಆ ಮೂಲಕ, ಕಾರ್ಯದರ್ಶಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ’ ಎಂದು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಆಯೋಗಕ್ಕೆ ಮಾಹಿತಿ ನೀಡದೆ ಸುಮಾರು ₹ 45 ಕೋಟಿಯ ಟೆಂಡರ್‌ನ್ನು ಆಹ್ವಾನಿಸಲಾಗಿದೆ. ಟೆಂಡರ್‌ ಬಗ್ಗೆ ದೆಹಲಿಯ ಎಕ್ಸೆರ್ಜಿ ಸಲ್ಯೂಷನ್ಸ್‌ ಸಂಸ್ಥೆಯವರು ಕೆಲವು ಆಕ್ಷೇಪಣೆಗಳನ್ನು ಆಗಸ್ಟ್‌ 23ರಂದು ಸಲ್ಲಿಸಿದಾಗ ಈ ವಿಷಯ ಗಮನಕ್ಕೆ ಬಂದಿದೆ. ಸಂಸ್ಥೆಯ ಆಕ್ಷೇಪಣೆಗಳಿಗೆ ಉತ್ತರಿಸಲು ಕಾರ್ಯದರ್ಶಿಗೆ ಸೂಚಿಸಿದ್ದು, ಕೆಲವು ಮಾಹಿತಿಗಳನ್ನು ಅವರು ಟಿಪ್ಪಣಿಯಲ್ಲಿ ನೀಡಿದ್ದಾರೆ. ಅವುಗಳನ್ನು ಆಯೋಗ ಪರಿಶೀಲಿಸುತ್ತಿದೆ’ ಎಂದು ತಿಳಿಸಿದ್ದಾರೆ. 

‘ಆಕ್ಷೇಪಣೆಗಳು ಬಂದಿರುವುದರಿಂದ ಟೆಂಡರ್‌ ಪ್ರಕ್ರಿಯೆಯನ್ನು ಮುಂದಿನ ಸೂಚನೆಯವರೆಗೆ ತಡೆಹಿಡಿಯುವಂತೆ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಈಗಾಗಲೇ ಕಾರ್ಯದರ್ಶಿ ನೀಡಿರುವ ಟಿಪ್ಪಣಿ ಪರಿಶೀಲಿಸುತ್ತಿದ್ದು, ಇನ್ನೂ ಕೆಲವು ಅಂಶಗಳ ಬಗ್ಗೆ ಮಾಹಿತಿ ಪಡೆಯಬೇಕಿದೆ. ಎಲ್ಲ ಮಾಹಿತಿಗಳು ಬಂದ ಬಳಿಕ ಕಾರ್ಯದರ್ಶಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗುವುದು’ ಎಂದಿದ್ದಾರೆ.

‘ಕಾರ್ಯದರ್ಶಿ ಹಲವು ಬಾರಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ’ ಎಂದು ಆರೋಪಿಸಿರುವ ಸಾಹುಕಾರ್‌, ‘ಆ ವಿವರಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೂ ಕಾರ್ಯದರ್ಶಿಯವರು ತಮ್ಮ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ’ ಎಂದೂ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT