ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ: 7,200 ನೌಕರರ ಶಿಸ್ತು ಪ್ರಕರಣ ಮನ್ನಾ‌

ಕೆಎಸ್‌ಆರ್‌ಟಿಸಿ: ಕಾರ್ಮಿಕ ದಿನಾಚರಣೆ
Last Updated 1 ಮೇ 2022, 14:21 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) 7,200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ‌ ಮಾಡಿದೆ.

ನಿಗಮದ‌ ವಿವಿಧ ವಿಭಾಗಗಳಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ನಿಗಮವು ಕಾರ್ಮಿಕರಿಗೆ ಈ ಕೊಡುಗೆ ನೀಡಿದೆ. ಹತ್ತು ತಿಂಗಳುಗಳಿಗಿಂತ ಕಡಿಮೆ ಅವಧಿಯ ಗೈರುಹಾಜರಿಯನ್ನು ಮನ್ನಿಸಲಾಗಿದೆ. ಕೂಡಲೇ ಕರ್ತವ್ಯಕ್ಕೆ ಹಾಜರಾಗುವ ನೌಕರರ ವಿಚಾರಣೆಯನ್ನು ರದ್ದುಗೊಳಿಸಲಾಗಿದೆ. ದೀರ್ಘ ಕಾಲದಿಂದ ಕೆಲಸಕ್ಕೆ ಗೈರಾಗಿದ್ದ 110 ನೌಕರರು ಮೂರು ದಿನಗಳಿಂದ ಕರ್ತವ್ಯ ಹಾಜರಾಗಿದ್ದಾರೆ.

ಬೆಂಗಳೂರು ಕೇಂದ್ರಿಯ ವಿಭಾಗದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ಶಿಸ್ತು ಪ್ರಕರಣಗಳನ್ನು ಕೈಬಿಡಲಾದ ನೌಕರರಿಗೆ ಆದೇಶ‌ದ‌ ಪ್ರತಿ ಹಾಗೂ ಸಿಹಿ ವಿತರಿಸಿ ಶುಭ ಕೋರಿದರು. ನಿಗಮದ ಒಟ್ಟು 35,000 ಸಿಬ್ಬಂದಿಗಳಲ್ಲಿ ಒಟ್ಟು 8,414 ಮಂದಿ ವಿರುದ್ಧ ಅಶಿಸ್ತು ಪ್ರಕರಣಗಳು ದಾಖಲಾಗಿವೆ. ಮೂರು ದಿನಗಳಿಂದ 7,200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ (ಕನಿಷ್ಠ ₹ 100ರಿಂದ ಗರಿಷ್ಠ ₹ 500) ದಂಡ ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಸಿಬ್ಬಂದಿಗೆ ಏನಿಲ್ಲವೆಂದರೂ ₹ 25,000 ದಂಡ ವಿಧಿಸಬಹುದಾದ ಪ್ರಕರಣಗಳಿವು ಎಂದು ನಿಗಮವು ತಿಳಿಸಿದೆ.

ಕಾರ್ಮಿಕರನ್ನು‌ ಉದ್ದೇಶಿಸಿ ಮಾತನಾಡಿದ ಅನ್ಬುಕುಮಾರ್‌, ‘ಸಾರಿಗೆ ಸಂಸ್ಥೆಯ ಬೆನ್ನುಲುಬೇ ಕಾರ್ಮಿಕರು. ಅವರ ಕ್ಷೇಮ‌ ಲಾಭವೇ ನಮ್ಮ‌ ಪ್ರಮುಖ ಆದ್ಯತೆ. ಸಂಸ್ಥೆ ನಡೆಯುತ್ತಿರುವುದು ಚಾಲಕರು,‌ ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳಿಂದಲೇ ಹೊರತು ವ್ಯವಸ್ಥಾಪಕ ನಿರ್ದೇಶಕರಿಂದಲ್ಲ. ವ್ಯವಸ್ಥಾಪಕ ನಿರ್ದೇಶಕರು ಬಸ್ಸನ್ನು ಚಲಾಯಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಮತ್ತು ನೌಕರರ ನಡುವೆ ಬಾಂಧವ್ಯ ಚೆನ್ನಾಗಿದ್ದರೆ ಸಂಸ್ಥೆಯೂ ಚೆನ್ನಾಗಿರುತ್ತದೆ’ ಎಂದರು.

‘ಶಿಕ್ಷೆ ವಿಧಿಸುವುದಷ್ಟೇ ಆಡಳಿತ ವರ್ಗದ ಕೆಲಸವಲ್ಲ. ನೌಕರರ ಶ್ರೇಯೋಭಿವೃದ್ಧಿಗಾಗಿ ದುಡಿಯುವುದು‌ ಕೂಡ ಅವರ ಕರ್ತವ್ಯವಾಗಿರಬೇಕು’ ಎಂದರು. ‘ನೌಕರರು ಮತ್ತೊಮ್ಮೆ ಅಪರಾಧ, ಅಪಘಾತ ಅಥವಾ ಗೈರು‌ ಹಾಜರಿಯಂತಹ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಸಾರಿಗೆ ಸೇವೆಯನ್ನು ಬಲಪಡಿಸಲು, ನಾಗರಿಕರಿಗೆ ಉತ್ತಮ ಸೇವೆಯನ್ನು ನೀಡಲು ನಮ್ಮೊಡನೆ ಕೈಜೋಡಿಸಬೇಕು. ಆಗ ಮಾತ್ರ ಸಂಸ್ಥೆ ಇನ್ನೂ ಬೆಳವಣಿಗೆ ಕಾಣಲು ಸಾಧ್ಯ’ ಎಂದರು.

‘ನಿಗಮವು ಪ್ರತಿದಿನದ ಸರಾಸರಿ ₹10 ಕೋಟಿ ವಹಿವಾಟು ನಡೆಸಬೇಕು. ಆದರೆ, ಸರಾಸರಿ ₹ 8 ಕೋಟಿ ವಹಿವಾಟು ನಡೆಯುತ್ತಿದೆ. ಇದರಲ್ಲಿ ಶೇ 70ರಷ್ಟು ಮೊತ್ತವನ್ನು ಇಂಧನಕ್ಕಾಗಿ ಸಂದಾಯ ಮಾಡಬೇಕಾಗಿದೆ. ಆದ್ದರಿಂದ ನಿಗಮವು ಆರ್ಥಿಕವಾಗಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ’ ಎಂದು ಅವರು ತಿಳಿಸಿದರು.

ಉನ್ನತ ವಿದ್ಯಾಭ್ಯಾಸ ನಡೆಸುತ್ತಿರುವ ನೌಕರರ ಮಕ್ಕಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT