ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ನನ್ನ ಕೈಯಲ್ಲಿದೆ– ಎಚ್‌ಡಿಕೆ ; ನಮ್ಮ ಜತೆ ಮೋದಿ ಇದ್ದಾರೆ– ಬಿಎಸ್‌ವೈ

ಹಾಲಿ, ಮಾಜಿ ಸಿ.ಎಂ ತಾಕತ್ತಿನ ಜಗಳ
Last Updated 20 ಸೆಪ್ಟೆಂಬರ್ 2018, 20:29 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ, ಬೊಕ್ಕಸ ಲೂಟಿ, ಪರ್ಸೆಂಟೇಜ್ ವ್ಯವಹಾರದ ವಿಷಯಗಳ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮಧ್ಯದ ವಾಕ್ಸಮರ ತಾರಕಕ್ಕೆ ಏರಿದೆ.

‘ನನ್ನ ಬಳಿ ಸರ್ಕಾರ ಇದೆ; ಏನು ಬೇಕಾದರೂ ಮಾಡಬಲ್ಲೆ’ ಎಂದು ಕುಮಾರಸ್ವಾಮಿ ಸವಾಲು ಎಸೆದಿದ್ದರೆ, ‘ನಮ್ಮ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಇದೆ. ಏನು ಬೇಕಾದರೂ ಮಾಡುತ್ತೇವೆ’ ಎಂದು ಯಡಿಯೂರಪ್ಪ ತಿರುಗೇಟು ಕೊಟ್ಟಿದ್ದಾರೆ. ಇಬ್ಬರ ಮಧ್ಯದ ಬೀದಿ ಜಗಳ ಗುರುವಾರ ರಂಗೇರಿದೆ.

ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರ ಆರೋಗ್ಯ ವಿಚಾರಿಸಿ ರಾಜಕೀಯ ವಿಷಯಗಳ ಚರ್ಚೆ ನಡೆಸಿದ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಯಡಿಯೂರಪ್ಪ ಅವರನ್ನು ಜರಿದರು ಹಾಗೂ ಎಚ್ಚರಿಕೆ ನೀಡಿದರು. ಇದಕ್ಕೆ ಯಡಿಯೂರಪ್ಪ ಅವರೂ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ಪರ್ಸಂಟೇಜ್‌ನ ಜನಕ ಯಡಿಯೂರಪ್ಪ

* ಈ ತನಕ ಬಹಳ ತಾಳ್ಮೆಯಿಂದ ಇದ್ದೆ. ಸರ್ಕಾರ ನನ್ನ ಕೈಯಲ್ಲಿ ಇದೆ. ನಾಳೆ ಏನು ಮಾಡಬೇಕು ಎಂಬುದು ಗೊತ್ತಿದೆ. ನಮಗೆ ಶಕ್ತಿ ಇಲ್ಲವೇ?

* ಯಡಿಯೂರಪ್ಪ ನನಗಿಂತ ಹಿರಿಯರು. ಆದರೆ, ಅವರಿಗೆ ಒಂದು ಎಚ್ಚರಿಕೆ ನೀಡಲು ಬಯಸುತ್ತೇನೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಪದ ಪ್ರಯೋಗದಲ್ಲಿ ಅವರು ಹಿಡಿತ ಕಳೆದುಕೊಂಡಿದ್ದಾರೆ. ಮಾತಿನ ಮೇಲೆ ಅವರಿಗೆ ಸ್ವಲ್ಪ ಹಿಡಿತ ಇರಲಿ. 2008ರಲ್ಲಿ ಅವರಿಗೆ ನಾಡಿನ ಜನ ಅವಕಾಶ ಕೊಟ್ಟರು. ಅ‍ಪ್ಪ–ಮಕ್ಕಳನ್ನು ಮುಗಿಸುವುದು ಹಾಗೂ ಜೈಲಿಗೆ ಕಳುಹಿಸುವುದೇ ನನ್ನ ಗುರಿ ಎಂದು ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದರು. ಆನಂತರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಜೈಲಿಗೆ ಹೋದವರು ಯಾರು?

* ಅಪ್ಪ–ಮಕ್ಕಳು ಲೂಟಿಕೋರರು ಎಂದು ಆರೋಪ ಮಾಡಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಮೊದಲು ಕೊಡಲಿ. ನಮ್ಮ ಸಚಿವರು ಶೇ 8ರಿಂದ 10ರಷ್ಟು ಕಮಿಷನ್‌ ಕೇಳುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಪರ್ಸೆಂಟೇಜ್‌ ಸಿಸ್ಟಮ್‌ ತಂದ ಪುಣ್ಯಾತ್ಮ ಅವರೇ. ಕಾಂಗ್ರೆಸ್‌ ಪಕ್ಷ ಸುದೀರ್ಘ ಆಡಳಿತದಲ್ಲಿದ್ದರೂ ಆ ಪಕ್ಷದ ಮುಖಂಡರಿಗೆ ಈ ಆಲೋಚನೆ ಬಂದಿರಲಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೂಡಲೇ ಈ ವ್ಯವಸ್ಥೆ ಜಾರಿಗೆ ತಂದರು. ಪರ್ಸೆಂಟೇಜ್‌ ವ್ಯವಸ್ಥೆಯ ಜನಕ ಅವರು. ನಮ್ಮ ಬದಲು ಅವರು ಜೈಲಿಗೆ ಹೋದರು.

* ಶಿವರಾಮ ಕಾರಂತ ಬಡಾವಣೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಏನು ಹೇಳಿದೆ ಎಂಬುದು ನೆನಪಿರಲಿ. ಗಾಜಿನ ಮನೆಯಲ್ಲಿ ಕುಳಿತವರು ನೀವು. ನಾವು ರಸ್ತೆಯಲ್ಲಿ ಇರುವವರು. ಇನ್ನೊಂದು ಸಲ ಇಕ್ಕಟ್ಟಿಗೆ ಒಳಗಾಗಬೇಡಿ.

* ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ. ಅವರ ಇತಿಹಾಸದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಸುದೀರ್ಘ ರಾಜಕಾರಣದಲ್ಲಿ ರಾಜ್ಯದ ಸಂಪತ್ತು ಉಳಿಸಿದ್ದೇವೆ. ಲೂಟಿ ಮಾಡಿದವರು ನಾವಲ್ಲ. ಆ ಕೆಲಸ ಮಾಡಿದ್ದು ನೀವು.

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ


‘ನಿಮ್ಮಷ್ಟು ಭೂಹಗರಣ ಯಾರೂ ಮಾಡಿಲ್ಲ’

*ಸ್ವಾಮಿ, ರಾಜ್ಯದಲ್ಲಿ ನಿಮ್ಮ ಸರ್ಕಾರ ಇರಬಹುದು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೆ. ನೀವು ಏನು ಮಾಡುತ್ತೀರೋ ಅದಕ್ಕೆ ಪ್ರತಿಯಾಗಿ ನಾವು ಮಾಡುತ್ತೇವೆ. ನಮಗೂ ರಾಜಕಾರಣ ಗೊತ್ತು.

*ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ನನ್ನ ಇತಿಮಿತಿ ಏನು ಎಂಬುದು ಗೊತ್ತಿದೆ. ಹದ್ದುಮೀರಿ ಮಾತನಾಡುತ್ತಿರುವವರು ನೀವು.

*ದೇವೇಗೌಡರ ಕುಟುಂಬ ಭೂಕಬಳಿಕೆ ಮಾಡಿದೆ ಎಂದು ಕಾಂಗ್ರೆಸ್‌ ಮುಖಂಡ ಎ. ಮಂಜು ಆರೋಪ ಮಾಡಿದ್ದಾರೆ. ಈ ವಿಷಯದ ಬಗ್ಗೆ ಮೌನ ವಹಿಸಿದ್ದು ಏಕೆ. ಅವರ ಕುಟುಂಬದವರು ಮೈಸೂರಿನಲ್ಲಿ 2.5 ಎಕರೆಯಲ್ಲಿ ಸೈಟ್‌ ಮಾಡಿಕೊಂಡಿದ್ದಾರೆ. ಅವರ ಕುಟುಂಬದ ಅನೇಕ ಹಗರಣಗಳನ್ನು ಬೆಳಕಿಗೆ ತಂದಿದ್ದೇವೆ. ಅದರ ಪುಸ್ತಕ ಮಾಡಿ ರಾಜ್ಯದ ಜನರಿಗೆ ಹಂಚಿದ್ದೇವೆ. ಅದರಲ್ಲಿ ಗುಟ್ಟು ಏನಿಲ್ಲ. ನೀವು ಮಾಡಿರುವಷ್ಟು ಭೂಹಗರಣ ಯಾರೂ ಮಾಡಲು ಸಾಧ್ಯ ಇಲ್ಲ.

*ನೀವು ಸೇಡಿನ ರಾಜಕಾರಣ ಮಾಡಲು ಹೊರಟಿದ್ದೀರಿ. ಅಧಿಕಾರ ಶಾಶ್ವತ ಅಲ್ಲ ಎಂಬುದು ನೆನಪಿರಲಿ. ನಮ್ಮ ಅಧಿಕಾರದ ಅವಧಿಯಲ್ಲಿ ಯಾವತ್ತೂ ಸೇಡಿನ ರಾಜಕಾರಣ ಮಾಡಿರಲಿಲ್ಲ.

*ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಕುರಿತು ಸಮಗ್ರ ತನಿಖೆ ನಡೆಸಲಿ. ಅವರ ಬಳಿ ಅಧಿಕಾರ ಇದೆ. ಆದರೆ, ಅವರ ಧಮ್ಕಿಗೆ ನಾನು ಬೆದರುವುದಿಲ್ಲ. ನಿಮ್ಮ ಎಲ್ಲ ಬಣ್ಣ ಸ್ವಲ್ಪ ದಿನಗಳಲ್ಲೇ ಬಯಲಾಗಲಿದೆ. ಕಾದು ನೋಡಿ.

*ಬಿಜೆಪಿಯ ವಿಶೇಷ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರ ಬಗ್ಗೆ ಒಂದೂ ಮಾತನಾಡಿಲ್ಲ. ಜಾರಿ ನಿರ್ದೇಶನಾಲಯದ ಪ್ರಕರಣದ ಬಗ್ಗೆ ದೆಹಲಿಯಲ್ಲಿ ರಾಷ್ಟ್ರೀಯ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು. ಅಮಿತ್‌ ಶಾ ಜೈಲಿಗೆ ಹೋಗಿದ್ದರು ಎಂದು ಶಿವಕುಮಾರ್‌ ಉದ್ದಟತನದ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರೇರಣೆ ಯಾರು, ಹಿನ್ನೆಲೆಯಲ್ಲಿ ಇರುವವರು ಯಾರು ಎಂಬುದು ಗೊತ್ತಿದೆ. ಕಾಲ ಬಂದಾಗ ಎಲ್ಲರಿಗೂ ಉತ್ತರ ನೀಡುತ್ತೇನೆ.

*ಮಾತಿನ ಮೇಲೆ ಕುಮಾರಸ್ವಾಮಿ ಅವರಿಗೆ ಹತೋಟಿ ಇರಲಿ. ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ.

*ಜೈಲಿಗೆ ಹೋದವರು ಎಂದು ಟೀಕೆ ಮಾಡುತ್ತಾ ಸುತ್ತಾಡುತ್ತಿದ್ದೀರಿ. ನೀವು ಮಾಡಿರುವ ಹಗರಣಗಳು ಕಡಿಮೆ ಇವೆಯಾ. ಡಿನೋಟಿಫಿಕೇಷನ್‌ ಮಾಡಿಲ್ಲವೇ. ಸುಪ್ರೀಂ ಕೋರ್ಟ್‌ನಲ್ಲಿ ನಿಮ್ಮ ಮೇಲೆ ಪ್ರಕರಣಗಳು ಇಲ್ಲವೇ. ಎಲ್ಲ ಪ್ರಕರಣಗಳನ್ನು ಮುಚ್ಚಿ ಹಾಕಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ.

–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT