ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿ ಹೆಬ್ಬಾಳಕರ ನಮ್ಮವರೇ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ

Published 10 ಏಪ್ರಿಲ್ 2024, 15:30 IST
Last Updated 10 ಏಪ್ರಿಲ್ 2024, 15:30 IST
ಅಕ್ಷರ ಗಾತ್ರ

ಬೆಳಗಾವಿ: ‘‍ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತೊಡಗಿಸಿಕೊಂಡಿದ್ದಾರೆ. ಅವರು ನಮ್ಮವರೇ ಎಂದು ಒಪ್ಪಿಕೊಂಡಿದ್ದೇವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಸಚಿವೆ ಲಕ್ಷ್ಮಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಲ್ಲ’ ಎಂಬ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ ನಿರಾಣಿ ಅವರ ಹೇಳಿಕೆಗೆ, ಇಲ್ಲಿ ಬುಧವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಮೀಸಲಾತಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರಣ ಅವರು ನಮ್ಮವರೇ. ಯಾರೋ ಒಬ್ಬರು ಏನನ್ನೋ ಹೇಳುತ್ತಾರೆಂದು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ಕುರಿತಾಗಿ ಸಮಾಜದ ಜಿಲ್ಲಾ ಮುಖಂಡರೇ ಸ್ಪಷ್ಟನೆ ಕೊಡಲಿದ್ದಾರೆ. ಯಾರ ಮನಸ್ಸಿಗೂ ನೋವಾಗುವಂತೆ ಯಾರೂ ಹೇಳಿಕೆ ಕೊಡಬಾರದು’ ಎಂದರು.

‘ಲಕ್ಷ್ಮಿ ಅವರು ಪಂಚಮಸಾಲಿ ಹೌದೋ ಅಲ್ಲವೋ ಎಂಬ ವಿಚಾರ‌ ಎಲ್ಲರಿಗೂ ಗೊತ್ತಿದೆ. ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡವರು ಅವರು. ಹೀಗಿರುವಾಗ, ಅವರ ಜಾತಿ ಮತ್ತು ಮೂಲದ ಬಗ್ಗೆ ಕೆದಕುವುದು ಏಕೆ’ ಎಂದು ಪ್ರಶ್ನಿಸಿದರು.

‘ಮೀಸಲಾತಿಗೆ ಯಾರು ಅಸಹಕಾರ ಕೊಟ್ಟಿದ್ದಾರೋ ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಮಾಜಕ್ಕೆ ಸಂದೇಶ ಕೊಡುತ್ತೇನೆ. ಎಲ್ಲರೂ ನಮ್ಮವರೇ. ಚುನಾವಣೆ ವೇಳೆ, ಈ ರೀತಿ ಮಾತಾನಾಡುವುದು ಬೇಡ. ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಮಗೆ ನೋವು ಇದೆ. ಕಾಂಗ್ರೆಸ್‌ ಸರ್ಕಾರ ಈವರೆಗೆ ಒಂದೇ ಸಭೆ ಮಾಡಿಲ್ಲ. ಮುಂದೆ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದರು‌.

‘ಹಿಂದಿನ ಸರ್ಕಾರ ಮೀಸಲಾತಿ ಕೊಡುವುದಕ್ಕೆ ವಿಳಂಬ ಮಾಡಿದ್ದರಿಂದ ಜನರೇ ಉತ್ತರ ಕೊಟ್ಟರು. ಈಗ ಮತ್ತೆ ಮೀಸಲಾತಿ ವಿಳಂಬವಾಗಿದೆ. ಮೀಸಲಾತಿ ಹೋರಾಟಕ್ಕೆ ಸಹಕಾರ ಕೊಟ್ಟವರಿಗೆ ಸ್ಪಂದನೆ ನೀಡಿ ಎಂದು ಹೇಳಿದ್ದೇನೆ. ನಿರ್ಲಕ್ಷ್ಯ ವಹಿಸಿದವರಿಗೆ ಪಾಠ ಕಲಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT