ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಭೂಪರಿವರ್ತನೆ ಇನ್ನಷ್ಟು ಸರಳ: ಕೃಷ್ಣ ಬೈರೇಗೌಡ

ಡಿ.ಸಿ ಅಧಿಕಾರ ಮೊಟಕಿಗೆ ಚಿಂತನೆ: ಕೃಷ್ಣ ಬೈರೇಗೌಡ
Published 1 ಜುಲೈ 2023, 16:21 IST
Last Updated 1 ಜುಲೈ 2023, 16:21 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಸ್ಟರ್‌ ಪ್ಲಾನ್‌‘ ಹೊಂದಿರುವ ನಗರ ಪ್ರದೇಶಗಳಲ್ಲಿನ ಭೂ ಪರಿವರ್ತನೆ ಪ್ರಕ್ರಿಯೆ ಸರಳಗೊಳಿಸಲು ಕಂದಾಯ ಇಲಾಖೆ ಚಿಂತನೆ ನಡೆಸಿದೆ.

ಬಹುತೇಕ ನಗರಗಳಲ್ಲಿ ಅಭಿವೃದ್ಧಿಗಾಗಿ ಹತ್ತಿಪ್ಪತ್ತು ವರ್ಷಗಳಿಗೆ ‘ಮಾಸ್ಟರ್‌ ಪ್ಲಾನ್‌’ ಸಿದ್ಧಪಡಿಸಲಾಗುತ್ತದೆ. ರಸ್ತೆ, ಹೊರವರ್ತುಲ ರಸ್ತೆ, ಸೇತುವೆ, ವಸತಿ, ಕೈಗಾರಿಕೆ, ಸಮುಚ್ಚಯ ಸೇರಿದಂತೆ ಯಾವಯಾವ ಪ್ರದೇಶದಲ್ಲಿ ಏನೇನು ಇರಬೇಕು ಎನ್ನುವುದು ಮೊದಲೇ ನಿರ್ಧರಿತವಾಗಿರುತ್ತದೆ. ಹೀಗಿದ್ದರೂ, ವಸತಿ, ವಾಣಿಜ್ಯ ಸೇರಿದಂತೆ ವಿವಿಧ ಉದ್ದೇಶಗಳಿಗೆ ಭೂಪರಿವರ್ತನೆ ಮಾಡಿಕೊಳ್ಳಲು ಜನರು ಕಚೇರಿಗಳಿಗೆ ಅಲೆಯುತ್ತಾರೆ. ಹಾಗಾಗಿ, ಈ ವ್ಯವಸ್ಥೆ ಬದಲಾಗಬೇಕು ಎನ್ನುವ ಚರ್ಚೆಗಳು ಆರಂಭವಾಗಿವೆ.

‘ಮಾಸ್ಟರ್ ಪ್ಲಾನ್‌ನಲ್ಲಿ ನಿರ್ಧರಿಸಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಯ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಜಿಲ್ಲಾಧಿಕಾರಿಗಳಿಗೆ ಇರುವ ಭೂಪರಿವರ್ತನೆ ಅಧಿಕಾರವನ್ನು ಮೊಟಕುಗೊಳಿಸಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ಇಲಾಖೆ ಆಲೋಚನೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

‘ಇಂತಹ ಅಡೆತಡೆಗಳು ಭೂ ಪರಿವರ್ತನೆ ಪ್ರಕ್ರಿಯೆ ವಿಳಂಬವಾಗುವುದರ ಜತೆಗೆ, ಭ್ರಷ್ಟಾಚಾರಕ್ಕೂ ದಾರಿಯಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಏಳು ದಿನಗಳಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು ಅವಕಾಶ ಮಾಡಿಕೊಟ್ಟಿತ್ತು. ಆದರೂ, ಭೂಪರಿವರ್ತನೆ ಪ್ರಕ್ರಿಯೆಯಲ್ಲಿ ಸಾಕಷ್ಟು ತೊಡಕುಗಳು ಉಳಿದುಕೊಂಡಿವೆ. ಎಲ್ಲ ತೊಡಕುಗಳನ್ನೂ ನಿವಾರಿಸಬೇಕು ಎನ್ನುವ ಚಿಂತನೆ ಇದೆ’ ಎಂದರು. 

ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ಸಚಿವರು ಪ್ರಸ್ತಾಪಿಸಿದ ಈ ವಿಷಯಕ್ಕೆ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳೂ ಸಹಮತ ಸೂಚಿಸಿದ್ದರು. ಕಂದಾಯ ಇಲಾಖೆಯ ಈ ಯೋಜನೆ ‘ಮಾಸ್ಟರ್‌ ಪ್ಲಾನ್‌‘ ಹೊರತಾಗಿ ಇರುವ ಭೂಮಿಗಳಿಗೆ ಅನ್ವಯಿಸಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT