ಮಂಡ್ಯ: ಪ್ರಖರ ಬೆಳಕು ಹೊರಸೂಸುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸಿಕೊಂಡ ವಾಹನಗಳ ವಿರುದ್ಧ ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಜುಲೈ ತಿಂಗಳಲ್ಲಿ ಬರೋಬ್ಬರಿ 28,620 ಪ್ರಕರಣಗಳನ್ನು ದಾಖಲಿಸಿಕೊಂಡು, ತಲಾ ₹500 ದಂಡ ವಿಧಿಸಿದ್ದಾರೆ.
ಬೆಂಗಳೂರು ನಗರ (9,046), ದಕ್ಷಿಣ ಕನ್ನಡ (2,020), ವಿಜಯನಗರ (1,342) ಜಿಲ್ಲೆಗಳಲ್ಲಿ ಅತಿ ಹೆಚ್ಚು, ಮೈಸೂರು (22) ಮತ್ತು ಮಂಡ್ಯ (21) ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಹೀಗೆ ಪ್ರಕರಣ ದಾಖಲಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ ಎನಿಸಿದೆ.
ಪ್ರಖರ ದೀಪಗಳಿಂದ ಎದುರಿನ ವಾಹನ ಚಾಲಕರು ಮತ್ತು ಬೈಕ್ ಸವಾರರಿಗೆ ರಸ್ತೆ ಕಾಣದಂತಾಗಿ ತೊಂದರೆಯಾಗುತ್ತಿತ್ತು. ಅಪಘಾತಗಳೂ ಸಂಭವಿಸುತ್ತಿದ್ದವು. ಅದನ್ನು ಮನಗಂಡ ಇಲಾಖೆ ಚಾಲಕರಿಗೆ ದಂಡದ ಬಿಸಿ ಮುಟ್ಟಿಸುತ್ತಿದೆ.
‘ಎಲ್ಲ ವಾಹನ ಸವಾರರು ಮತ್ತು ಚಾಲಕರು ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಹೆಡ್‌ಲೈಟ್‌ಗಳನ್ನು ಅಳವಡಿಸಿಕೊಳ್ಳಬೇಕು. ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆ ಕಲಂ 177 ಅಡಿಯಲ್ಲಿ ಪ್ರಕರಣ ದಾಖಲಿಸಬೇಕು’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್ ಕುಮಾರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು.
ನಿತ್ಯ 100 ಪ್ರಕರಣ!:
‘ನಿತ್ಯ ನೂರು ಪ್ರಕರಣಗಳನ್ನು ದಾಖಲಿಸಬೇಕೆಂಬ ಒತ್ತಡವಿರುವುದರಿಂದ, ಮುಲಾಜಿಲ್ಲದೆ ದಂಡ ವಸೂಲಿ ಮಾಡುತ್ತಿದ್ದೇವೆ’ ಎಂದು ಸಹಾಯಕ ಸಬ್‌ಇನ್‌ಸ್ಪೆಕ್ಟರೊಬ್ಬರು ತಿಳಿಸಿದರು.
‘ವಾಹನ ತಯಾರಿಕೆ ಕಂಪನಿಗಳು ಸಾಧಾರಣ ಬೆಳಕು ಚೆಲ್ಲುವ ದೀಪಗಳನ್ನು ಅಳವಡಿಸಿರುತ್ತವೆ. ದಟ್ಟ ಅರಣ್ಯ, ಬೆಟ್ಟಗುಡ್ಡ ಪ್ರದೇಶ ಹಾಗೂ ತೀವ್ರ ತಿರುವುಗಳುಳ್ಳ ರಸ್ತೆಗಳಲ್ಲಿ ಚಾಲನೆಗೆ ಸಮಸ್ಯೆಯಾಗುವುದರಿಂದ ಪ್ರಖರ ಬೆಳಕಿನ ದೀಪಗಳನ್ನು ಅಳವಡಿಸಿಕೊಳ್ಳುತ್ತೇವೆ. ಈಗ ಪೊಲೀಸರು ದಂಡ ಹಾಕುವುದರಿಂದ ದಿಕ್ಕೇ ತೋಚದಂತಾಗಿದೆ’ ಎಂದು ಟ್ಯಾಕ್ಸಿ ಚಾಲಕರು ಸಮಸ್ಯೆ ತೋಡಿಕೊಂಡರು.
ಸುರಕ್ಷಿತ ಪ್ರಯಾಣಕ್ಕೆ ನಿಯಮ ಪಾಲನೆ ಅಗತ್ಯ. ಪ್ರಖರ ಎಲ್‌ಇಡಿ ದೀಪ ಅಳವಡಿಸಿಕೊಂಡ ವಾಹನಗಳ ಚಾಲಕರು ಎಚ್ಚೆತ್ತುಕೊಳ್ಳಬೇಕು.
– ಅಲೋಕ್‌ಕುಮಾರ್ ಎಡಿಜಿಪಿ ಸಂಚಾರ ಮತ್ತು ರಸ್ತೆ ಸುರಕ್ಷತೆ