ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೌಧ’ದಲ್ಲಿ ದೋಸ್ತಿ; ನಗರದಲ್ಲಿ ಕುಸ್ತಿ

Last Updated 2 ಆಗಸ್ಟ್ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ‍ಪರಸ್ಪರ ‘ಕೈ’ ಹಿಡಿದು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ‘ಕುಸ್ತಿ’ ಮಾಡಲು ಅಣಿಯಾಗಿವೆ.

ರಾಜ್ಯದಲ್ಲಿ ಮತ್ತೆ ಚುನಾವಣಾ ಕಾವು ಆರಂಭವಾಗಿದ್ದು, ಮೂರು ಪಕ್ಷಗಳ ದಂಡನಾಯಕರ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ. ಮೈತ್ರಿ ಲೋಕಸಭಾ ಚುನಾವಣೆಗೂ ಇರಲಿದೆ ಎಂದು ಉಭಯ ಪಕ್ಷಗಳ ನಾಯಕರು ಸರ್ಕಾರ ರಚನೆಯ ವೇಳೆಗೆ ಪ್ರಕಟಿಸಿದ್ದರು. ಸ್ಥಳೀಯ ಸಂಸ್ಥೆಗಳ ಬಗ್ಗೆ ಚಕಾರ ಎತ್ತಿರಲಿಲ್ಲ. ಸ್ಥಳೀಯ ಮಟ್ಟದಲ್ಲಿ ದೋಸ್ತಿ ಮಾಡಿಕೊಳ್ಳುವುದು ಎರಡೂ ಪಕ್ಷಗಳ ಮುಖಂಡರಿಗೂ ಇಷ್ಟವಿಲ್ಲ. ಪಕ್ಷ ಸಂಘಟನೆಯ ತಳಪಾಯಕ್ಕೆ ಏಟು ಬೀಳಲಿದೆ ಎಂಬುದು ‘ಕೈ’ ಹಾಗೂ ‘ತೆನೆ ಹೊತ್ತ ಮಹಿಳೆ’ಯ ಆತಂಕ.

‘ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್‌ ಜತೆ ಹೊಂದಾಣಿಕೆ ಇಲ್ಲ’ ಎಂದು ಜೆಡಿಎಸ್‌ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ರಾಜ್ಯ ಸರ್ಕಾರದಲ್ಲಿ ಮೈತ್ರಿ ಇದ್ದರೂ ಕೆಲವು ಜಿಲ್ಲೆಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಕೆಲವು ಕಡೆಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ದೋಸ್ತಿ ಮಾಡಿಕೊಂಡು ಆಡಳಿತ ನಡೆಸಿವೆ. ಹಲವು ಕಡೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸಖ್ಯ ಇದೆ.

ರಾಮನಗರ, ಮಂಡ್ಯ, ಮೈಸೂರು, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹಾವು ಮುಂಗುಸಿಗಳಂತೆ ಇದ್ದಾರೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ.

ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಕೆಲವು ನಾಯಕರು ಹೇಳಿದ್ದಾರೆ. ಆದರೆ, ಇದಕ್ಕೆ ಶಾಸಕಾಂಗ ಪಕ್ಷದ ಸಭೆಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.

‘ಸ್ಥಳೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ರಾಜ್ಯಮಟ್ಟದ ಚುನಾವಣೆಯೇ ಬೇರೆ. ಸ್ಥಳೀಯ ಚುನಾವಣೆಯೇ ಭಿನ್ನ. ಧರ್ಮಸಿಂಗ್‌ ಸರ್ಕಾರ ಇದ್ದಾಗಲೂ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿರಲಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸುದ್ದಿಗಾರರಿಗೆ ತಿಳಿಸಿದರು.

*ಮೈತ್ರಿ ಬಗ್ಗೆ ಒಂದೆರಡು ದಿನಗಳಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ.
–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

105 ನಗರಗಳಲ್ಲಿ ಚುನಾವಣೆ ಕಾವು ಶುರು
ಬೆಂಗಳೂರು: ರಾಜ್ಯದ 22 ಜಿಲ್ಲೆಗಳ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಇದೇ 29ರಂದು ಮತದಾನ ನಡೆಯಲಿದೆ. ಸೆ. 1ರಂದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿಸಂಹಿತೆ ಜಾರಿಗೆ ಬರಲಿದೆ.

ಚುನಾವಣಾ ವೇಳಾಪಟ್ಟಿ ಗುರುವಾರ ಪ್ರಕಟಿಸಿ ಮಾತನಾಡಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್‌. ಶ್ರೀನಿವಾಸಾಚಾರಿ, ರಾಜ್ಯದ ಒಟ್ಟು 208 ನಗರ ಸ್ಥಳೀಯ ಸಂಸ್ಥೆಗಳಿಗೆ 2013ರಲ್ಲಿ ಚುನಾವಣೆ ನಡೆದಿತ್ತು. ಅವುಗಳ ಅವಧಿ ಇದೇ ಸೆಪ್ಟೆಂಬರ್‌ನಿಂದ 2018ರ ಮಾರ್ಚ್‌ ಮಧ್ಯದ ಅವಧಿಯಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ, ಎರಡು ಹಂತಗಳಲ್ಲಿ ಚುನಾವಣೆ ನಡೆಸಬೇಕಿದೆ’ ಎಂದು ಅವರು ವಿವರಿಸಿದರು.

ಸೆಪ್ಟೆಂಬರ್‌ ತಿಂಗಳಲ್ಲಿ 108 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿಯಲಿದೆ. ಮೈಸೂರು, ತುಮಕೂರು ಮತ್ತು ಶಿವಮೊಗ್ಗ ನಗರಪಾಲಿಕೆಗಳ ಮೀಸಲಾತಿ ವಿವಾದ ನ್ಯಾಯಾಲಯದಲ್ಲಿರುವುದರಿಂದ ಅವುಗಳನ್ನು ಬಿಟ್ಟು ಉಳಿದವುಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಇಲ್ಲ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ

ಅಧಿಸೂಚನೆ; ಆ. 10

ನಾಮಪತ್ರ ಸಲ್ಲಿಸಲು ಕೊನೆ ದಿನ; ಆ. 17

ನಾಮಪತ್ರಗಳ ಪರಿಶೀಲನೆ; ಆ. 18

ನಾಮಪತ್ರ ಹಿಂಪಡೆಯಲು ಕೊನೆ ದಿನ; ಆ. 20

ಮತದಾನ; ಆ. 29

ಮತಎಣಿಕೆ; ಸೆ. 1

* ಒಟ್ಟು ಮತದಾರರ ಸಂಖ್ಯೆ; 36,03,691

ಪುರುಷರು -17,96,001

ಮಹಿಳೆಯರು - 18,07,336

ಇತರೆ - 354

* ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳು

ನಗರಸಭೆ; 29

ಪುರಸಭೆ; 53

ಪಟ್ಟಣ ಪಂಚಾಯಿತಿ; 23

ಒಟ್ಟು ವಾರ್ಡ್‌ಗಳು; 2,574

ಒಟ್ಟು ಮತಗಟ್ಟೆಗಳು; 3,897

* ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿ (₹ ಲಕ್ಷಗಳಲ್ಲಿ)

ನಗರಸಭೆ: 2

ಪುರಸಭೆ: 1.50

ಪಟ್ಟಣ ಪಂಚಾಯಿತಿ; 1

* ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೊದಲ ಬಾರಿಗೆ ನೋಟಾ ಹಾಗೂ ವಿದ್ಯುನ್ಮಾನ ಮತಯಂತ್ರ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT