ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇಂಡಿಯಾ' ಮೈತ್ರಿಕೂಟವು ಜಾತ್ಯತೀತತೆಯನ್ನು ನಗೆಪಾಟಲಾಗಿಸುತ್ತಿದೆ: ದೇವೇಗೌಡ

Published 9 ಮಾರ್ಚ್ 2024, 13:53 IST
Last Updated 9 ಮಾರ್ಚ್ 2024, 13:53 IST
ಅಕ್ಷರ ಗಾತ್ರ

ಬೆಂಗಳೂರು: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ', ಜಾತ್ಯತೀತತೆಯನ್ನು ನಗೆಪಾಟಲಾಗಿಸಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಶನಿವಾರ ಕಿಡಿಕಾರಿದ್ದಾರೆ.

ಜಾತ್ಯತೀತ ಜನತಾದಳ (ಜೆಡಿಎಸ್‌) ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಕಾಂಗ್ರೆಸ್‌ ಮಾಡುತ್ತಿರುವ ಆರೋಪದ ಕುರಿತು ಅವರು ಮಾತನಾಡಿದ್ದಾರೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಡಿಎಂಕೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡ ಅವರು, ಟಿಎಂಸಿ ನಾಯಕಿಯೂ ಆಗಿರುವ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿದ್ದರು. ಅದೇ ರೀತಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ತಂದೆ ಮಾಜಿ ಸಿಎಂ ಎಂ.ಕರುಣಾನಿಧಿ ಅವರು ಆರು ವರ್ಷಗಳ ಕಾಲ ಬಿಜೆಪಿಯೊಂದಿಗೆ ಇದ್ದರು. ಅವರ ಅಳಿಯ ಆಗಿನ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು ಎಂದು ನೆನಪಿಸಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜೆಡಿಎಸ್‌ ಹಿರಿಯ ನಾಯಕ, 'ನಾವು ಸಾಕಷ್ಟು ದೃಷ್ಟಾಂತಗಳನ್ನು ಉಲ್ಲೇಖಿಸಬಲ್ಲೆವು. ಈ ದೇಶದಲ್ಲಿ ಜಾತ್ಯತೀತತೆ ಬಗ್ಗೆ ಯಾರಾದರೂ ಮಾತನಾಡಿದರೆ, ಜನರು ಅದನ್ನು ತಮಾಷೆ ಎಂದುಕೊಳ್ಳುತ್ತಾರೆ. ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಕೈಜೋಡಿಸಿದ್ದರು. ಆಗ ಕಾಂಗ್ರೆಸ್‌ ಸದಸ್ಯರು ಮಹಾರಾಷ್ಟ್ರದಲ್ಲಿ ಸಭಾಪತಿಯಾಗಿದ್ದರು. ಇಂತಹ ಸಾಕಷ್ಟು ವಿಚಾರಗಳನ್ನು ನಾನು ಹೇಳಬಲ್ಲೆ. ಈ ಬೆಳವಣಿಗೆಗಳು 'ಜಾತ್ಯತೀತತೆ'ಯ ನಿಜವಾದ ಅರ್ಥಕ್ಕೆ ಸರಿಹೊಂದುವುದಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಬಗ್ಗೆ ಮೆಚ್ಚುಗೆ
ಮೂರನೇ ಬಾರಿಗೆ ಬಹುಮತದ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕುರಿತು ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿ ಅವರು ವಾಜಪೇಯಿಗಿಂತ ಭಿನ್ನ ವ್ಯಕ್ತಿತ್ವದವರು. ವಾಯಪೇಯಿ ನಾಯಕತ್ವದಲ್ಲಿ ಬಿಜೆಪಿಯು ಲೋಕಸಭೆಯಲ್ಲಿ 180ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರಲಿಲ್ಲ. ಆದರೆ, ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ ಜಯಿಸಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 350ಕ್ಕಿಂತ ಹೆಚ್ಚು ಕಡೆ ಗೆಲುವು ಸಾಧಿಸಿದ್ದಾರೆ. ಇದೀಗ ಮೋದಿ ಅವರು, ಎನ್‌ಡಿಎ ಮೈತ್ರಿಕೂಟವು 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಗುರಿ ಹಾಕಿಕೊಂಡಿದ್ದಾರೆ. ಮೋದಿ ನಾಯಕತ್ವವನ್ನು ಭಾರತ ಮಾತ್ರವಲ್ಲ, ಬೇರೆ ದೇಶಗಳೂ ಗುರುತಿಸುತ್ತಿವೆ ಎಂದು ದೇವೇಗೌಡ ಹೇಳಿದ್ದಾರೆ.

'ಭಾರತದಲ್ಲಿ ಆಗಲಿ ಅಥವಾ ಹೊರಗೇ ಆಗಲಿ. ಮೋದಿಯವನ್ನು ಗುರುತಿಸುವಂತಹ ವಾತಾವರಣ ನಿರ್ಮಾಣವಾಗಿದೆ. ವಿರೋಧ ಪಕ್ಷಗಳ ನಾಯಕರು ಸ್ಪಷ್ಟವಾದ ನಿಲುವು ಹೊಂದಿಲ್ಲ. ಅವರು ಮೋದಿ ವಿರುದ್ಧ  ಜನರ ಗಮನ ಸೆಳೆಯುವುದಕ್ಕಾಗಿ ಅಪ್ರಸ್ತುತ ವಿಚಾರಗಳನ್ನು ಮಾತನಾಡುತ್ತಾರೆ. ಆದರೆ, ಜನರು ಅವರನ್ನೆಲ್ಲ ಗಂಭೀರವಾಗಿ ಪರಿಗಣಿಸುವುದಿಲ್ಲ' ಎಂದು ಟೀಕಿಸಿದ್ದಾರೆ.

ಮುಂದುವರಿದು, ಮೋದಿ ಇಂದು ಅತಿದೊಡ್ಡ ನಾಯಕರಾಗಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ.

'ಕಾಂಗ್ರೆಸ್‌ ಬಗ್ಗೆ ಮಾತನಾಡುವುದೇ ವ್ಯರ್ಥ'
ದೇಶದಲ್ಲಿ ನಿರಂಕುಶ ಆಡಳಿತವಿದೆ. ಬಡವರು ಮತ್ತು ಅರ್ಹರ ಬದಲಿಗೆ ಬಂಡವಾಳಶಾಹಿಗಳಿಗಷ್ಟೇ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್‌ ಕಳೆದ 10 ವರ್ಷಗಳಿಂದ ಆರೋಪ ಮಾಡುತ್ತಿದೆ ಎಂದಿರುವ ಮಾಜಿ ಪ್ರಧಾನಿ, ಕಾಂಗ್ರೆಸ್‌ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆ ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ಎಷ್ಟು ಸ್ಥಾನಗಳನ್ನು ನಿರೀಕ್ಷಿಸುತ್ತಿದೆ ಎಂದು ಕೇಳಿದ್ದಾರೆ.

ಜೆಡಿಎಸ್‌ನ ಜಾತ್ಯತೀತತೆ ಕುರಿತು ಪ್ರಶ್ನೆ ಮಾಡುವ ಕಾಂಗ್ರೆಸ್‌ ಎಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂಬುದನ್ನು ತಿಳಿಯಲು ಬಯಸುತ್ತೇನೆ. ಕಾಂಗ್ರೆಸ್‌ ಸರ್ಕಾರ ಇರುವುದು ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾತ್ರ ಎಂದಿದ್ದಾರೆ.

'ಕಳೆದ ಎರಡು ಅವಧಿಯಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯುವುದಕ್ಕೂ ಅವರಿಗೆ (ಕಾಂಗ್ರೆಸ್‌ಗೆ) ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಬಗ್ಗೆ ಮಾತನಾಡುವುದೇ ವ್ಯರ್ಥ' ಎಂದು ಉಲ್ಲೇಖಿಸಿದ್ದಾರೆ.

'ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ತೀರ್ಮಾನ'
ಲೋಕಸಭೆ ಚುನಾವಣೆಗೂ ಕರ್ನಾಟಕದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಸೀಟು ಹಂಚಿಕೆ ಸೂತ್ರದ ಕುರಿತು ಮಾತನಾಡಿರುವ ಅವರು, ನಮ್ಮ ಪಕ್ಷ ಯಾವುದೇ ಷರತ್ತು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅಥವಾ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ, ಪರಿಸ್ಥಿತಿ ನೋಡಿಕೊಂಡು ಅದನ್ನು ತಮ್ಮ ಮಗ ನಿರ್ಧರಿಸುತ್ತಾರೆ ಎಂದಿದ್ದಾರೆ.

'ನಾಳೆ ಏನಾಗಲಿದೆ ಎಂಬುದನ್ನು ಹೇಳಲಾರೆ. ಅವರೇ (ಕುಮಾರಸ್ವಾಮಿ) ಪಕ್ಷದ ನಾಯಕರಾಗಿದ್ದಾರೆ. ಅವರ ನಾಯಕತ್ವ ಪ್ರಶ್ನಾತೀತವಾದದ್ದು. ಹಾಗಾಗಿ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿದ ನಂತರ ಅವರೇ ತೀರ್ಮಾನ ಮಾಡಲಿದ್ದಾರೆ' ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT