ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಟಿಕೆಟ್‌ಗಾಗಿ ನಾರಿಯರ ಪೈಪೋಟಿ!

ಶೇ 33ರಷ್ಟು ಮೀಸಲಾತಿ ನೀಡಲು ಆಗ್ರಹಿಸಿ 26ರಂದು ಮಂಗಳೂರಿನಲ್ಲಿ ಜಾಥಾ
Last Updated 24 ಫೆಬ್ರುವರಿ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಮಹಿಳಾ ಆಕಾಂಕ್ಷಿಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲ, ಹಿರಿಯ ನಾಯಕರ ಪತ್ನಿ, ಪುತ್ರಿಯರೇ ಟಿಕೆಟ್‌ ಗಿಟ್ಟಿಸಿಕೊಳ್ಳಲು ಪೈಪೋಟಿಗೆ ಇಳಿದಿದ್ದಾರೆ.

ಈ ವಿಷಯವನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಅವರು ಭಾನುವಾರ ಬಹಿರಂಗಪಡಿಸಿದರು.

ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಪತ್ನಿ ಗೀತಾ ಖಂಡ್ರೆ ಲಾಬಿ ನಡೆಸುತ್ತಿದ್ದಾರೆ. ಬಾಗಲಕೋಟೆಯಿಂದ ಕಣಕ್ಕಿಳಿಯಲು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಉತ್ಸುಕತೆ ತೋರಿಸಿದ್ದಾರೆ. ಇದೇ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್. ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಸೊಸೆ ವಸಂತ ಕವಿತಾ ಅವರೂ ಸ್ಪರ್ಧಿಗಿಳಿಯಲು ಮುಂದಾಗಿದ್ದಾರೆ. ಮಂಗಳೂರಿನಲ್ಲಿ ಮಮತಾ ಗಟ್ಟಿ ಚುನಾವಣಾ ಅಖಾಡಕ್ಕಿಳಿಯುವ ಬಯಕೆ ವ್ಯಕ್ತಪಡಿಸಿದ್ದಾರೆ.

‘ಗೃಹ ಸಚಿವ ಎಂ.ಬಿ. ಪಾಟೀಲ ಅವರ ಪತ್ನಿ ಆಶಾ ಪಾಟೀಲ ಕೂಡಾ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಸುಳ್ಳು’ ಎಂದು ಪುಷ್ಪಾ ಅಮರನಾಥ ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಕೊಡುವಂತೆ ಹಲವು ಮಹಿಳಾ ಮುಖಂಡರು ಒತ್ತಾಯಿಸುತ್ತಿದ್ದಾರೆ. ಸ್ಪರ್ಧಿಸಲು ಆಸಕ್ತಿ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೋಮವಾರ (ಫೆ. 25) ಕೊನೆಯ ದಿನ. ಅರ್ಜಿ ಸಲ್ಲಿಸಿದವರ ವಿವರಗಳನ್ನು ಕೆಪಿಸಿಸಿ ಅಧ್ಯಕ್ಷರಿಗೆ ಮತ್ತು ಎಐಸಿಸಿ ಅಧ್ಯಕ್ಷರಿಗೆ ಸಲ್ಲಿಸಿ, ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡುವಂತೆ ಮನವಿ ಮಾಡಲಾಗುವುದು’ ಎಂದರು.

ಶೇ 33ರಷ್ಟು ಮೀಸಲಾತಿ: ‘ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಇದೇ 26ರಂದು ಮಂಗಳೂರಿನಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡಹೇರಲು ಎಲ್ಲ ಜಿಲ್ಲೆಗಳಲ್ಲಿ ಸಮಾವೇಶ ಆಯೋಜಿಸಲಾಗುವುದು’ ಎಂದು ಅವರು ಹೇಳಿದರು.

‘ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬದ್ಧರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮೀಸಲಾತಿ ಜಾರಿಗೆ ಮುಂದಾಗಬೇಕು’ ಎಂದರು.

ಮಂಡ್ಯದಲ್ಲಿ ಹಾಲಿ ಜೆಡಿಎಸ್‌ ಸಂಸದರಿದ್ದಾರೆ. ಸುಮಲತಾ ಅಂಬರೀಷ್‌ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡುವ ಸಂಬಂಧ ಕಾಂಗ್ರೆಸ್ – ಜೆಡಿಎಸ್ ಹಿರಿಯ ನಾಯಕರು ಚರ್ಚಿಸಿ ನಿರ್ಧಾರಿಸಲಿದ್ದಾರೆ’ ಎಂದು ಹೇಳಿದರು.

ಮಂಗಳೂರು ಜಾಥಾದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಪ್ಸರಾ ರೆಡ್ಡಿ, ‘ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆ ಈಡೇರಿಸಲು ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

ಮಂಡ್ಯದಲ್ಲಿ ಜನಸೇವೆ: ಸುಮಲತಾ ಅಂಬರೀಷ್‌
ಬೆಂಗಳೂರು: ‘ಮಂಡ್ಯ ಜನರ ಹಾಗೂ ಅಂಬರೀಷ್‌ ಅಭಿಮಾನಿಗಳ ಒತ್ತಾಯದ ಮೇರೆಗೆ ಜನಸೇವೆ ಮಾಡಲು ಒಪ್ಪಿಕೊಂಡಿದ್ದೇನೆ’ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಸುಮಲತಾ ಅಂಬರೀಷ್ ಪುನರುಚ್ಚರಿಸಿದರು.

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರ ಮೂರನೇ ತಿಂಗಳ ಪುಣ್ಯಾರಾಧನೆ ಸಂದರ್ಭದಲ್ಲಿ ಮಾತನಾಡಿದ ಸುಮಲತಾ ಅವರು, ‘ಜನಸೇವೆ ಮಾಡಲು ನಿರ್ಧರಿಸಿರುವುದು ನಿಜ. ಆದರೆ, ಅದಕ್ಕಾಗಿ ರಾಜಕೀಯ ತಂತ್ರಗಾರಿಕೆ, ರಣತಂತ್ರಗಳನ್ನು ಬಳಕೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಂಬರೀಷ್ ಅವರು ಕಾಂಗ್ರೆಸ್‍ನಲ್ಲಿದ್ದು ಸುದೀರ್ಘ ರಾಜಕೀಯ ಜೀವನ ಕಳೆದಿದ್ದಾರೆ. ಹೀಗಾಗಿ, ಜನಸೇವೆಯ ಅವಕಾಶ ಕಾಂಗ್ರೆಸ್‍ನಿಂದ ಸಿಗಬಹುದು ಎಂಬ ನಿರೀಕ್ಷೆ ಇದೆ. ಈ ವಿಷಯವಾಗಿ ಯಾರ ಬಳಿಯೂ ಚರ್ಚಿಸಿಲ್ಲ. ಮಂಡ್ಯದ ಜನರು ಒತ್ತಾಯ ಮಾಡಿದ್ದರಿಂದ ಜನಸೇವೆ ಮಾಡಲು ಒಪ್ಪಿಕೊಂಡಿದ್ದೇನೆ’ ಎಂದರು.

*
‘ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯನ್ನು ಪ್ರಧಾನಿ ಮೋದಿ ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
-ಡಾ. ಪುಷ್ಪಾ ಅಮರನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT